Government Employee: ಸರ್ಕಾರಿ ನೌಕರರಿಗೆ ಲೋಕಾಯುಕ್ತರ ಕಿವಿಮಾತುಗಳು

0
86

ಬೆಳಗಾವಿ: “ಸರ್ಕಾರಿ ನೌಕರರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಅದರಲ್ಲಿ ಉತ್ತಮ ಜೀವನ ಸಾಗಿಸಬಹುದಾಗಿದೆ. ಆದರೆ, ಕೆಲ ಅಧಿಕಾರಿಗಳು ಅತಿ ಆಸೆಗಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವ ಕುರಿತು ದೂರಗಳು ಬಂದಿದ್ದು, ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧ ಸೆಂಟ್ರಲ್ ಹಾಲ್‌ನಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತರು ಮಾತನಾಡಿದರು. ಸರ್ಕಾರಿ ಅಧಿಕಾರಿ/ ಸಿಬ್ಬಂದಿಗೆ ಕಿವಿಮಾತುಗಳನ್ನು ಹೇಳಿದರು.

“ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದಂತಹ ಕಾರ್ಯಗಳನ್ನು ವರ್ಗೀಕರಣ ಮಾಡಿ ಕೊಡಲಾಗಿರುತ್ತದೆ. ಈ ಕಾರ್ಯ ಪರೀಶಿಲನೆಗಾಗಿ ಮೇಲುಸ್ತುವಾರಿಯನ್ನು ನೇಮಿಸಲಾಗಿದ್ದರೂ ಸಹ ಸರ್ಕಾರಿ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ” ಎಂದರು.

“ಒಬ್ಬ ವ್ಯಕ್ತಿ ಒಂದೇ ಕೆಲಸದ ವೇಳೆ ಪದೇ ಪದೇ ಕಚೇರಿಗೆ ಆಗಮಿಸುತ್ತಾನೆ ಎಂದರೆ ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ ಎಂದರ್ಥವಾಗುತ್ತದೆ. ಅಧಿಕಾರಿ, ಸಿಬ್ಬಂದಿಗಳು ದುರಾಸೆಗೊಳಗಾಗಿ ತಾವು ಮಾಡುವ ತಪ್ಪಿಗೆ ತಮ್ಮ ಇಡೀ ಕುಟುಂಬವನ್ನು ಮುಜುಗುರಕ್ಕೆ ತಳ್ಳುತ್ತಾರೆ. ನಾವು ಬೆಳೆದ ಬಂದ ಹಾದಿಯಲ್ಲಿ, ತಂದೆ ತಾಯಿಯರ ಮಾರ್ಗದರ್ಶನದಲ್ಲಿ ಪ್ರಜ್ಞೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.

“ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದಲ್ಲಿ ಮಾತ್ರ ಜನ ಸೇವಕನಾಗುತ್ತಾನೆ. ಆಗ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಸಂದೇಶಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ” ಎಂದು ಲೋಕಾಯುಕ್ತರು ತಿಳಿಸಿದರು.

“ಸಾರ್ವಜನಿಕ ಸೇವೆಯಲ್ಲಿ ಇರುವ ಪ್ರತಿಯೊಬ್ಬರು ಲೋಕಾಯುಕ್ತ ಕಾಯ್ದೆಯ ಬಗ್ಗೆ ಅರಿವು ಹೊಂದಿರಬೇಕು. ಈ ಕಾಯ್ದೆಯಡಿ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುವವರು ಮಾಡುವ ತಪ್ಪು ಸಣ್ಣದಾಗಲಿ ದೊಡ್ಡದಾಗಲಿ ಅದಕ್ಕೆ ಶಿಕ್ಷೆ ಖಚಿತವಾಗಿರುತ್ತದೆ” ಎಂದು ಲೋಕಾಯುಕ್ತರು ಎಚ್ಚರಿಕೆ ನೀಡಿದರು.

“ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅದಕ್ಕೆ ಸಾಕಷ್ಟು ಅನುದಾನವನ್ನು ಒದಗಿಸುತ್ತಿದೆ. ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವುದು ಎಲ್ಲ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಅಧಿಕಾರಿ/ ಸಿಬ್ಬಂದಿಗಳು ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ” ಎಂದರು.

ಬೆಳಗಾವಿ ಜಿಲ್ಲೆ: “ಬೆಳಗಾವಿ ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ದೊಡ್ಡ ಜಿಲ್ಲೆಯಾಗಿದ್ದು, ಆಡಳಿತಾತ್ಮಕವಾಗಿ ಸುಧೀರ್ಘವಾದ ಕ್ಷೇತ್ರವಾಗಿದೆ. ಜಿಲ್ಲೆಯನ್ನು ಮಾದರಿ, ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು” ಎಂದು ಕರೆ ಕೊಟ್ಟರು.

“ಜಿಲ್ಲೆಯ ಆಡಳಿತದಲ್ಲಿ ಜನಪರ ಕಾಳಜಿ, ಚಾಕಚಕ್ಯತೆ ಇದ್ದರೆ ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡುವುದರ ಜೊತೆಗೆ ಸರ್ಕಾರದ ಅನುದಾನ ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸಿದಲ್ಲಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತದೆ” ಎಂದು ತಿಳಿಸಿದರು.

“ಜಿಲ್ಲೆಯಲ್ಲಿನ ಕೆರೆಗಳ ರಕ್ಷಣೆ ಹಾಗೂ ಸೂಕ್ತ ನಿರ್ವಹಣೆಯಾಗಬೇಕು. ಇವುಗಳ ಸೂಕ್ತ ನಿರ್ವಹಣೆ ಹಾಗೂ ರಕ್ಷಣೆ ಮಾಡುವದು ಸಂಬಂಧಿಸಿದ ಅಧಿಕಾರಿಯ ಮೂಲಭೂತ ಕರ್ತವ್ಯವಾಗಿದೆ. ಈ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇದನ್ನು ಗಂಭೀರಾವಾಗಿ ಪರಿಗಣಿಸಲಾಗುವುದು” ಎಂದು ಹೇಳಿದರು.

“ನಗರವನ್ನು ಸ್ವಚ್ಛವಾಗಿ ಇಡುವುದು ಮುಖ್ಯವಾಗಿದೆ. ರಾಜ್ಯದ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಬೆರಳಣಿಕೆಯಷ್ಟು ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಬಡ ಜನರಿಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆ ನೀಡುವಂತಹ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿರುವದು ಕಳವಳಕಾರಿಯಾದ ಸಂಗತಿಯಾಗಿದೆ” ಎಂದರು.

ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ, ಸಿಬ್ಬಂದಿಗಳ ವಿವರ, ಜೌಷಧಿಗಳ ದಾಸ್ತಾನಿನ ಮಾಹಿತಿಯನ್ನು ಒದಗಿಸಲು ಲೋಕಾಯುಕ್ತರು ನಿರ್ದೇಶನ ನೀಡಿದರು. ಅನಧಿಕೃತ ಮಧ್ಯ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Previous articleಶಿವಮೊಗ್ಗ ಪ್ರವಾಸಿಗರ ಗಮನಕ್ಕೆ: ಬಾಳೆಬರೆ ಘಾಟ್ ವಾಹನ ಸಂಚಾರ ನಿಷೇಧ
Next articleಕೇಂದ್ರ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿ

LEAVE A REPLY

Please enter your comment!
Please enter your name here