ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ವಿವಿಧ ಮಾದರಿಯ ಟೂರ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ವಿವಿಧ ಜಿಲ್ಲೆಗಳಿಂದ ಆರಂಭಿಸಿರುವ ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ. ದಾವಣಗೆರೆ ವಿಭಾಗ ಟೂರ್ ಪ್ಯಾಕೇಜ್ ವಿಶೇಷ ಬಸ್ ವ್ಯವಸ್ಥೆಯನ್ನು ಮತ್ತಷ್ಟು ಸ್ಥಳಗಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ.
ಪ್ರವಾಸಿ ತಾಣಗಳಿಗೆ ಕಡಿಮೆ ದರದಲ್ಲಿ ಭೇಟಿ ನೀಡಲು ಅನುಕೂಲ ಮಾಡಿಕೊಡುವ ಯೋಜನೆ ಇದು. ಕೆಎಸ್ಆರ್‌ಟಿಸಿ ದಾವಣಗೆರೆ ವಿಭಾಗ ಈಗಾಗಲೇ ವಾರಾಂತ್ಯ, ರಜಾ ದಿನಗಳ ಅವಧಿಯ ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಸದ್ಯ ದಾವಣಗೆರೆಯಿಂದ ಜೋಗ ಜಲಪಾತ, ಶಿರಸಿ ಮಾರಿಕಾಂಬ ದೇವಾಲಯದ ಟೂರ್ ಪ್ಯಾಕೇಜ್ ಇದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದ್ದರಿಂದ ಇನ್ನಷ್ಟು ಪ್ರವಾಸಿ ತಾಣಗಳಿಗೆ ದಾವಣಗೆರೆಯಿಂದ ಪ್ರವಾಸಿ ಪ್ಯಾಕೇಜ್ ಬಸ್ ಓಡಿಸಲು ಚಿಂತನೆ ನಡೆಸಲಾಗಿದೆ.
ಯಾವ-ಯಾವ ತಾಣಗಳು?: ದಾವಣಗೆರೆಯಿಂದ ಸಿಗಂದೂರು ಚೌಡೇಶ್ವರಿ, ಇಡಗುಂಜಿ, ಕೊಪ್ಪಳದ ಅಂಜನಾದ್ರಿಗೆ ವಿಶೇಷ ಟೂರ್ ಪ್ಯಾಕೇಜ್ ಆರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದರು. ಈಗ ಸಿಗಂದೂರು ಸೇತುವೆ ಉದ್ಘಾಟನೆ ಬಳಿಕ ಅಲ್ಲಿಗೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ಆದ್ದರಿಂದ ಕೆಎಸ್ಆರ್‌ಟಿಸಿ ಇಡಗುಂಜಿ ದೇವಾಲಯ, ಅಪ್ಸರ ಕೊಂಡ ಫಾಲ್ಸ್, ಇಕೋ ಬೀಚ್ ಸೇರಿ ಉತ್ತರ ಕನ್ನಡ ಭಾಗದ ಪ್ರವಾಸಿ ಪ್ಯಾಕೇಜ್ ಆರಂಭಿಸಲು ಮುಂದಾಗಿದೆ. ಅಲ್ಲದೇ ಕೊಪ್ಪಳದ ಅಂಜನಾದ್ರಿ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಂಗದೂರು ಶ್ರೀ ಚೌಡೇಶ್ವರಿ ಕ್ಷೇತ್ರಕ್ಕೆ ಪ್ರವಾಸಿ ಪ್ಯಾಕೇಜ್ ಬಸ್ ಓಡಿಸಲು ಮುಂದಾಗಿದೆ.
ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಹೋಗುವ ಭಕ್ತರು, ಸಿಗಂದೂರು ಸೇತುವೆ, ವಿಶ್ವಪ್ರಸಿದ್ಧ ಜೋಗ ಜಲಪಾತ, ಸಾಗರದ ವರದಹಳ್ಳಿಗೆ ಭೇಟಿ ನೀಡಬಹುದು. ಆದ್ದರಿಂದ ಈ ಮಾದರಿ ಪ್ಯಾಕೇಜ್ ಆರಂಭಿಸಲು ಚಿಂತನೆ ನಡೆದಿದೆ. ದಾವಣಗೆರೆ ಸಿಗಂದೂರು ನಡುವೆ ನೇರ ಬಸ್ ಇಲ್ಲ. ಆದ್ದರಿಂದ ಈ ಪ್ಯಾಕೇಜ್ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ ದಾವಣಗೆರೆಯಿಂದ 5 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಭಾನುವಾರ ಶಿರಸಿ, ಜೋಗ ವಿಶೇಷ ಬಸ್ ಓಡಿಸಲಾಗುತ್ತಿದೆ. ಈ ವರ್ಷ ಜುಲೈ 13ರಂದು ಈ ಮಾದರಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ಈ ಬಸ್ ದಾವಣಗೆರೆಯಿಂದ ಬೆಳಗ್ಗೆ 7.15ಕ್ಕೆ ಹೊರಟು 7.45 ಹರಿಹರ, 10.30ಕ್ಕೆ ಶಿರಸಿ ತಲುಪುತ್ತದೆ. ಮಾರಿಕಾಂಬ ದೇವಿಯ ದರ್ಶನ ಪಡೆದ ಬಳಿಕ ಅಲ್ಲಿಂದ ಹೊರಟು ಮಧ್ಯಾಹ್ನ 1ಕ್ಕೆ ಜೋಗ ಜಲಪಾತ ತಲುಪುತ್ತದೆ. ಸಂಜೆ 4.30ಕ್ಕೆ ಹೊರಟು ಬಳಿಕ 8.30ಕ್ಕೆ ದಾವಣಗೆರೆಗೆ ವಾಪಸ್ ಆಗಲಿದೆ. ಪ್ರಯಾಣ ದರ ವಯಸ್ಕರಿಗೆ 650 ಮತ್ತು ಮಕ್ಕಳಿಗೆ 500 ರೂ.ಗಳು.
ಕೊಪ್ಫಳಕ್ಕೆ ಟೂರ್ ಪ್ಯಾಕೇಜ್ ಆರಂಭಿಸಿದರೆ ಜನರು ಅಂಜನಾದ್ರಿ ಬೆಟ್ಟವನ್ನು ನೋಡಿಕೊಂಡು, ಹಂಪಿ ಮತ್ತು ತುಂಗಭದ್ರಾ ಡ್ಯಾಂ ನೋಡಿಕೊಂಡು ಬರುವಂತೆ ಯೋಜನೆ ರೂಪಿಸಲಾಗುತ್ತದೆ. ಇದಕ್ಕೆ ರಾಜಹಂಸ ಬಸ್ ಬಳಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ.