ಬೆಂಗಳೂರು: ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲು ಆಗಮಿಸುವ ಮೋದಿ ವಂದೇ ಭಾರತ್ ರೈಲಿಗೆ ಸಹ ಹಸಿರು ನಿಶಾನೆ ತೋರಿಸಲಿದ್ದಾರೆ.
ಉದ್ಯಾನ ನಗರಿ ಬೆಂಗಳೂರು ಮತ್ತು ಕುಂದಾ ನಗರಿ ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬಹಳ ದಿನಗಳ ಬೇಡಿಕೆಯಾಗಿತ್ತು. ಈಗ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆಯನ್ನು ಕೊಟ್ಟಿದೆ.
ಈ ಕುರಿತು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ‘ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇದೇ ಭಾನುವಾರ ಕರ್ನಾಟಕ ಪ್ರವಾಸದಂದು ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ- ಪೂಣಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಟ್ರಾ ಮಧ್ಯೆ ನೂತನ ವಂದೇ ಭಾರತ್ ರೈಲು ಸಂಚರಿಸಲಿದೆ’ ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.
ನಿಲ್ದಾಣಗಳು: ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ವಾರದಲ್ಲಿ 6 ದಿನ ಸಂಚಾರವನ್ನು ನಡೆಸಲಿದೆ. ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಧಾರವಾಡದಲ್ಲಿ ನಿಲುಗಡೆಯನ್ನು ಹೊಂದಿದೆ.
ರೈಲಿನ ವೇಳಾಪಟ್ಟಿ
- ಬೆಳಗಾವಿಯಿಂದ ಬೆಳಗ್ಗೆ 5.20ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಆಗಮನ
- ಬೆಂಗಳೂರಿನಿಂದ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ
ಈ ವಂದೇ ಭಾರತ್ ರೈಲು ಮೂಲಕ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯ ನಡುವೆ ಸಂಪರ್ಕ ಹೆಚ್ಚಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಈ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಕರ್ನಾಟಕದ 11ನೇ ವಂದೇ ಭಾರತ್ ರೈಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆ. ಈ ಹಿಂದೆ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿತ್ತು.
2023ರ ನವೆಂಬರ್‌ನಲ್ಲಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ನಡೆದಿತ್ತು. ಆದರೆ ರೈಲು ಸೇವೆ ಆರಂಭವಾಗಿರಲಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮನವಿ ಸಲ್ಲಿಕೆ ಮಾಡಲಾಗಿತ್ತು.
ಇಷ್ಟು ದಿನ ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲಿನ ಮೂಲಕ ಬೆಳಗಾವಿಗೆ ತೆರಳುವ ಜನರು ಪ್ರಯಾಣ ಮಾಡುತ್ತಿದ್ದರು. ಹುಬ್ಬಳ್ಳಿ ಅಥವ ಧಾರವಾಡದಲ್ಲಿ ಇಳಿದು ಅಲ್ಲಿಂದ ಸರ್ಕಾರಿ ಬಸ್, ಖಾಸಗಿ ವಾಹನದ ಮೂಲಕ ಬೆಳಗಾವಿಗೆ ಸಂಚಾರವನ್ನು ನಡೆಸುತ್ತಿದ್ದರು. ಈಗ ಬೆಂಗಳೂರಿನಿಂದ ನೇರವಾಗಿ ಬೆಳಗಾವಿಗೆ ವಂದೇ ಭಾರತ್ ರೈಲಿನಲ್ಲಿ ಸಂಚಾರವನ್ನು ನಡೆಸಬಹುದು.