KSRTC: ಸಾರಿಗೆ ನೌಕರರ ಮುಷ್ಕರ, ದಾವಣಗೆರೆಯಲ್ಲಿ ಬಸ್ ಇಲ್ಲದೇ ಪರದಾಟ

0
146

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರವನ್ನು ಆರಂಭಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಜನರು ಪರದಾಟ ನಡೆಸುತ್ತಿದ್ದಾರೆ.

ಮಂಗಳವಾರದಿಂದ ಬಸ್ ಇರುತ್ತದೆಯೋ?, ಇಲ್ಲವೋ? ಎಂಬ ಗೊಂದಲದ ನಡುವೆಯೇ ಮುಷ್ಕರ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಷ್ಕರ ವಾಪಸ್ ಪಡೆಯುವಂತೆ ನೀಡಿದ್ದ ಕರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮನ್ನಣೆ ನೀಡಿಲ್ಲ.

ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರು ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ 1050 ಬಿಎಂಟಿಸಿ ಬಸ್‌ಗಳ ಪೈಕಿ, 880 ಬಸ್‌ಗಳು ಮಾತ್ರ ಸಂಚಾರವನ್ನು ನಡೆಸಿವೆ.

ಹಲವು ಜಿಲ್ಲೆಗಳಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರ ಖಾಸಗಿ ಬಸ್ ವ್ಯವಸ್ಥೆ ಮಾಡಿದೆ. ಆದರೆ ಈ ಬಸ್‌ಗಳಲ್ಲಿ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದಾರೆ. ‘ಶಕ್ತಿ’ ಯೋಜನೆಯಡಿ ಉಚಿತ ಸಂಚಾರ ಎಂದು ಆಗಮಿಸಿದ್ದ ಜನರು ಟಿಕೆಟ್ ಪಡೆದು ಸಂಚಾರ ನಡೆಸಬೇಕಿದೆ.

ಬಸ್ ಇಲ್ಲದೆ ಪರದಾಡುತ್ತಿರುವ ಜನರು: 38 ತಿಂಗಳ ಬಾಕಿ ವೇತನ ಬಿಡುಗಡೆ ಸೇರಿ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರದ ಕಾರಣಕ್ಕೆ ದಾವಣಗೆರೆಯಲ್ಲಿ ಜನರು ಪರದಾಡುತ್ತಿದ್ದಾರೆ.

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಜನರು ಬಸ್‌ಗಾಗಿ ಕಾದು ನಿಂತಿರುವುದು ಸಾಮಾನ್ಯವಾಗಿದೆ. ಇತ್ತ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಖಾಸಗಿ ಬಸ್ ಒದಗಿಸುವ ಕೆಲಸ ಮಾಡಿದೆ.

ಆದರೆ, ಎಲ್ಲರಿಗೂ ಬಸ್ ಸಿಕ್ಕಿಲ್ಲ. ನಗರ ಪ್ರದೇಶದಲ್ಲಿ ಇದು ತಕ್ಕ ಮಟ್ಟಿಗೆ ಸಹಾಯ ಆದರೂ ಗ್ರಾಮೀಣ ಭಾಗದ ಜನರು ನಗರ ಪ್ರದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಮುಷ್ಕರದ ಲಾಭ ಪಡೆದ ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರು ಬಸ್ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿ ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡುತ್ತಿದ್ದಾರೆ.

ಬಸ್ ಮುಷ್ಕರ, ಜನರ ಪರದಾಟ: ಸಾರಿಗೆ ನೌಕರರ ಮುಷ್ಕರದ ಹಿನ್ನಲೆ ರಬಕವಿ-ಬನಹಟ್ಟಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ನಗರಸಭೆ, ಪುರಸಭೆ ಅಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಬೆಳಗ್ಗೆ 4 ಗಂಟೆಯಿಂದಲೇ ಸಿಪಿಐ ಸಂಜು ಬಳಿಗಾರ, ಪಿಎಸ್‌ಐ ಶಾಂತಾ ಹಳ್ಳಿ ನೇತೃತ್ವದಲ್ಲಿ 50ಕ್ಕೂ ಅಧಿಕ ಪೊಲೀಸರು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಬೆರಳಣಿಕೆಯಷ್ಟು ಬಸ್‌ಗಳ ಸಂಚಾರವಿದ್ದ ಕಾರಣ ಅವುಗಳ ಮಾಹಿತಿ ಪಡೆದರು.

ಮುಷ್ಕರದ ಕುರಿತು ಸ್ಪಷ್ಟ ಮಾಹಿತಿ ದೊರಕದ ಕಾರಣ ಪ್ರಯಾಣಿಕರು ಎಂದಿನಂತೆ ಬಸ್ ನಿಲ್ದಾಣದತ್ತ ಧಾವಿಸಿದ್ದು ಸಹಜವಾಗಿತ್ತು. ಕೆಲ ಬಸ್‌ಗಳ ಸಂಚಾರದಿಂದ ದೂರದ ಊರಿಗೆ ತೆರಳಿದರೆ, ಇನ್ನೂ ಕೆಲವರು ವಾಪಸ್ ಮನೆಗೆ ತೆರಳಿದ ಪ್ರಸಂಗವೂ ನಡೆಯಿತು.

“ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಸೇರಿ ತಾಲೂಕಿನಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ” ಎಂದು ಬನಹಳ್ಳಿ ಪಿಎಸ್‌ಐ ಶಾಂತಾ ಹಳ್ಳಿ ಹೇಳಿದ್ದಾರೆ.

Previous articleKSRTC: ಸಾರಿಗೆ ನೌಕರರ ಮುಷ್ಕರ ಫಿಕ್ಸ್
Next articleKSRTC Bus Strike: Live Updates, ಮುಷ್ಕರ ವಾಪಸ್, ಎಲ್ಲಾ ನೌಕರರು ಕೆಲಸಕ್ಕೆ ಹಾಜರು

LEAVE A REPLY

Please enter your comment!
Please enter your name here