ವಿಯೆಟ್ನಾಮಿಗಳಿಗೆ ಈಗ ಜಗತ್ತಿನ ಮುಂದೆ ಯುದ್ಧದ ಇತಿಹಾಸದಿಂದ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಸಂಯುಕ್ತ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟವಾದ ಮಹಾಬಲ ಸೀತಾಳಭಾವಿ ಅವರ ವಿಶೇಷ ಲೇಖನ.
“ನಮ್ಮ ದೇಶದಲ್ಲಿ ಯುದ್ಧ ಮುಗಿದ ಮೇಲೆ ನಾನು ಹುಟ್ಟಿದೆ. ಹೀಗಾಗಿ ಅದೃಷ್ಟವಂತ. ನನ್ನ ಭವಿಷ್ಯಕ್ಕಾಗಿ ನನ್ನಪ್ಪ, ಅಜ್ಜ ನರಕ ನೋಡಿದರು. ಈಗ ನನ್ನ ಕೈಗೆ ಅವರ ಗನ್ ಕೊಟ್ಟರೂ ಶೂಟ್ ಮಾಡಲಾರೆ. ಏಕೆಂದರೆ ನನಗೆ ಪ್ರೀತಿಸುವುದು ಗೊತ್ತೇ ಹೊರತು ದ್ವೇಷಿಸುವುದು ಗೊತ್ತಿಲ್ಲ” ಹಾಗಂತ ಹೊಚಿಮಿನ್ ಸಿಟಿಯ ಆಂಡ್ರೂ ಹೇಳುವಾಗ ಕನ್ನಡಕದೊಳಗಿನ ಅವನ ಕಣ್ಣು ಒದ್ದೆಯಾಗಿತ್ತು.
ಮರುಕ್ಷಣವೇ ಎಲ್ಲಾ ಹಲ್ಲು ತೋರಿಸಿ, “ಈ ಮರಗೆಣಸು ನೀವೇ ತಿನ್ನಿ. ನನಗೆ ತಿಂದೂ ತಿಂದೂ ಸಾಕಾಗಿದೆ” ಎಂದು ಜೋರಾಗಿ ನಕ್ಕ. ಹಿನ್ನೆಲೆಯಲ್ಲಿ ಕು ಚಿ ಟನಲ್‌ನ ಶೂಟಿಂಗ್ ರೇಂಜ್‌ನಲ್ಲಿ ಪ್ರವಾಸಿಗರು ವಿಯೆಟ್ನಾಂ ಮಿಲಿಟರಿಯ ಅಸಲಿ ಮಷಿನ್ ಗನ್ ಹಿಡಿದು ಡಡಡಡಡಡ ಎಂದು ಮೋಜಿನ ಗುಂಡು ಹಾರಿಸುತ್ತಿದ್ದರು, ನಾವು ಜಾತ್ರೆಯಲ್ಲಿ ಲೋಕಲ್ ಕೋವಿಯಿಂದ ಬಲೂನ್ ಹೊಡೆದಂತೆ.
1970ಕ್ಕಿಂತ ಕೊಂಚ ಹಿಂದಿನ ಫ್ಲಾಶ್‌ಬ್ಯಾಕ್‌ಗೆ ಹೋದರೆ, ನಾವು ನಿಂತಿದ್ದ ಜಾಗದಲ್ಲಿ ಅಮೆರಿಕದ ಸೈನಿಕರು ಗನ್ ಹೊತ್ತು, ಟ್ಯಾಂಕ್‌ಗಳಲ್ಲಿ ಕುಳಿತು ಓಡಾಡುತ್ತಿದ್ದರು. ಅವರ ಕಾಲಡಿಯ ನೆಲದೊಳಗಿನ 200 ಕಿ.ಮೀ.ಗೂ ಉದ್ದದ ಸುರಂಗ ಜಾಲದೊಳಗೆ ಉತ್ತರ ವಿಯೆಟ್ನಾಂನ ಸ್ವಾತಂತ್ರ‍್ಯ ಹೋರಾಟಗಾರರು ಜೀವ ಉಳಿಸಿಕೊಳ್ಳಲು ಉಸಿರುಗಟ್ಟಿ ಅಡಗಿದ್ದರು. ಅದೇ ಕು ಚಿ ಟನಲ್. ಇವತ್ತು ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣ.
‘ಜಗತ್ತಿನಲ್ಲಿ ಬೇರೆಲ್ಲೂ ಈ ರೀತಿಯ ಸುರಂಗ ಇಲ್ಲ’ವೆಂದು ವಿಯೆಟ್ನಾಮಿಗಳು ಹೇಳುತ್ತಾರೆ. ಇದರೊಳಗೆ ನಾವು ಕುಕ್ಕರಗಾಲಿನಲ್ಲಿ ಕುಳಿತು ಸಾಗಬೇಕು. ಗಾತ್ರದಲ್ಲಿ ಸಪೂರಕ್ಕೆ, ಕುಳ್ಳಗಿರುವ ವಿಯೆಟ್ನಾಮಿಗಳು ಸಾಮಾನ್ಯ ಗಾತ್ರದ ಅಮೆರಿಕನ್ ಸೈನಿಕರಿಗೆ ನುಗ್ಗಲು ಸಾಧ್ಯವಾಗದಷ್ಟು ಕಿರಿದಾದ ಸುರಂಗ ತೋಡಿಕೊಂಡು ಅದರೊಳಗೆ ಅಡಗುತ್ತಿದ್ದರು. ಅಮೆರಿಕನ್ ಸೈನಿಕರನ್ನು ಹಿಡಿಯಲು ನೆಲದ ಮೇಲೆ ನಾನಾ ರೀತಿಯ ಟ್ರ‍್ಯಾಪ್‌ಗಳನ್ನು ಇರಿಸುತ್ತಿದ್ದರು. ಅಮೆರಿಕನ್ ಮಿಲಿಟರಿಯ ಪಂಕ್ಚರಾದ ಟೈರು ಬಳಸಿಕೊಂಡು ಚಪ್ಪಲಿ ಮಾಡಿಕೊಳ್ಳುತ್ತಿದ್ದರು. ಆ ಚಪ್ಪಲಿಗಳ ತುದಿ-ಬುಡ ಒಂದೇ ರೀತಿ ಇರುತ್ತಿತ್ತು. ತಾವು ಅದನ್ನು ಧರಿಸಿ ನಡೆದಾಗ ಚಪ್ಪಲಿ ಗುರುತಿನಿಂದ ಅಮೆರಿಕನ್ನರಿಗೆ ಸುಳಿವು ಸಿಗಬಾರದೆಂದು ಈ ತಂತ್ರ.
ಜಗತ್ಪ್ರಸಿದ್ಧ ‘ವಿಯೆಟ್ನಾಂ ಯುದ್ಧ’ದ ಒಂದು ಝಲಕ್ ನೋಡಬೇಕೆಂದರೆ ಕು ಚಿ ಟನಲ್ ನೋಡಬೇಕು. ಆಮೇಲೂ ಉತ್ಸಾಹವಿದ್ದರೆ ಹೊಚಿಮಿನ್ ಸಿಟಿಯ ಭಯಾನಕ ವಾರ್ ಮ್ಯೂಸಿಯಂ ನೋಡಬೇಕು. ಹೊರಬಂದಾಗ ರಸ್ತೆ ಮಬ್ಬಾಗಿ ಕಾಣಿಸುತ್ತದೆ.
ಮೊದಲು ಫ್ರೆಂಚರಿಂದ ಆಳಿಸಿಕೊಂಡು, ಆಮೇಲೆ ಸ್ವಾತಂತ್ರ‍್ಯ ಪಡೆದು, ನಂತರ ಉತ್ತರ-ದಕ್ಷಿಣ ಎಂಬ ಎರಡು ವಿಯೆಟ್ನಾಂ ದೇಶಗಳು ಹೊಡೆದಾಡಿಕೊಂಡು, ಅದನ್ನು ಸರಿಪಡಿಸಲು ಅಮೆರಿಕನ್ನರು ಬಂದು, ಅವರ ವಿರುದ್ಧ ಸ್ಥಳೀಯ ಕಮ್ಯುನಿಸ್ಟರು ಹೋರಾಡಿ, ಆ ಹೋರಾಟದಲ್ಲಿ ಮೆಕಾಂಗ್ ನದಿಯ ತುಂಬ ನೆತ್ತರು ಹರಿದು, ಬಳಿಕ ಉತ್ತರ-ದಕ್ಷಿಣ ಒಂದಾಗಿ ಏಕಮೇವಾದ್ವಿತೀಯ ವಿಯೆಟ್ನಾಂ ಹುಟ್ಟಿ ಈಗ ಐವತ್ತು ವರ್ಷಗಳು ಕಳೆದಿವೆ. ದೇಶದ ಸಣ್ಣ ಇತಿಹಾಸ ದೊಡ್ಡ ಸುಸ್ತು ಮಾಡಿಸುತ್ತದೆ.
ವಿಯೆಟ್ನಾಂನ ಕಾಲ್ತುದಿಯಿಂದ ತಲೆಯವರೆಗೂ ಒಂದು ಪಾರ್ಶ್ವದಲ್ಲಿ ಸಮುದ್ರವಿದೆ. ಹೀಗಾಗಿ ದೇಶದ ಯಾವ ಮೂಲೆಯಲ್ಲಿ ನಿಂತರೂ ಮಂಗಳೂರು ನೆನಪಾಗುತ್ತದೆ. ಸಮುದ್ರದ ದಡವೆಂದರೆ ಮೀನಿನ ವಾಸನೆ ಎಂದುಕೊಂಡ ಭಾರತೀಯರಿಗೆ ವಿಯೆಟ್ನಾಂನಲ್ಲಿ ಇನ್ನೂ ನೂರು ಹೊಚ್ಚಹೊಸ ವಾಸನೆಗಳು ಲಭ್ಯ! ಅಷ್ಟು ವೆರೈಟಿಯ ಸಮುದ್ರದ ಆಹಾರಗಳಿವೆ. ಹುರಿದು ಹಾಕಿದ ಜೀವಿ ಯಾವುದೆಂದು ಗುರುತಿಸಲು ಸಾಮಾನ್ಯ ಐಕ್ಯೂ ಸಾಲುವುದಿಲ್ಲ. ಅವರು ಸಮುದ್ರದಲ್ಲಿ ಸಿಗುವ ಯಾವ ಜೀವಿಯನ್ನೂ ತಿನ್ನದೆ ಬಿಟ್ಟಿಲ್ಲ. ಹೀಗಾಗಿ ಮಾಂಸಾಹಾರಿಗಳಿಗೆ ಸ್ವರ್ಗ. ಸಸ್ಯಾಹಾರಿಗಳಿಗೆ ಅಳಿವು ಉಳಿವಿನ ಪ್ರಶ್ನೆ!
ವಿಯೆಟ್ನಾಂ ರಾಜಧಾನಿ ಹನೋಯ್. ಅದು ಉತ್ತರದ ತುದಿಯಲ್ಲಿದೆ. ದಕ್ಷಿಣದ ಕೊನೆಯಲ್ಲಿ ಹೊಚಿಮಿನ್ ಸಿಟಿಯಿದೆ. ಅದು ಭಾರತಕ್ಕೆ ಮುಂಬೈ ಇದ್ದಂತೆ, ವಾಣಿಜ್ಯ ರಾಜಧಾನಿ ಮತ್ತು ದೊಡ್ಡ ನಗರ. ಸ್ವಾತಂತ್ರ‍್ಯಕ್ಕೂ ಮುನ್ನ ಅದು ಸೈಗಾನ್ ಆಗಿತ್ತು. ವಿಯೆಟ್ನಾಂನ ವಿಮೋಚನೆಗೆ ಹೋರಾಡಿದ ಹೊಚಿಮಿನ್ ಹೆಸರನ್ನೇ ನಂತರ ಈ ನಗರಕ್ಕೆ ಇಡಲಾಗಿದೆ. ನೋಟಿನಲ್ಲಿ ಆತನದೇ ಚಿತ್ರವಿದೆ. ನಮಗೆ ಗಾಂಧೀಜಿ ಇದ್ದಂತೆ ವಿಯೆಟ್ ಜನರಿಗೆ ಹೊಚಿಮಿನ್.
ಇಲ್ಲಿವೆ ನೂರಾರು ಗೋವಾ: ಈ ದೇಶ ಏಕೆ ಪ್ರವಾಸಿಗರಿಗೆ ಇಷ್ಟವಾಗುತ್ತದೆ ಅಂದರೆ ಇಲ್ಲಿ ನೂರಾರು ಗೋವಾಗಳಿವೆ. ಹಾದಿಬೀದಿಯಲ್ಲಿ ಮದ್ಯ ಸಿಗುತ್ತದೆ. ಸುತ್ತಾಡಲು ಸಣ್ಣ ಸಣ್ಣ ಸ್ಕೂಟರ್‌ಗಳು ಬಾಡಿಗೆಗೆ ಸಿಗುತ್ತವೆ. ಟ್ರಾಫಿಕ್ ಜಾಮ್ ನೋಡಿದರೆ ಬೆಂಗಳೂರು ನೆನಪಾಗುತ್ತದೆ. ನುಣುಪಾದ ರಸ್ತೆ ನೋಡಿದರೆ ಬೆಂಗಳೂರು ಮರೆತುಹೋಗುತ್ತದೆ. ಬೀದಿನಾಯಿಗಳ ಕಾಟವಿಲ್ಲ. ಏಕೆಂದರೆ ವಿಯೆಟ್ನಾಮಿಗಳಿಗೆ ಅವುಗಳೆಂದರೆ ಇಷ್ಟ. ಜನರು ಶ್ರಮಜೀವಿಗಳು. ಹೀಗಾಗಿ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೊಜ್ಜಿರುವ ದೇಶವಿದು. ಸಿಗರೆಟ್ ಸೇದಿ ಸೇದಿ ಕೃಶರಾಗಿರುವುದೂ ಕಾರಣವಿರಬಹುದು! ಭಾರತದ ಬೀಡಿಗಿಂತ ವಿಯೆಟ್ನಾಂನಲ್ಲಿ ಸಿಗರೆಟ್ ಅಗ್ಗ ಮತ್ತು ಎಲ್ಲಿ ಬೇಕಾದರೂ ಸೇದಬಹುದು.
ವಿಯೆಟ್ನಾಮಿಗಳಿಗೆ ಈಗ ಜಗತ್ತಿನೆದುರು ಯುದ್ಧದ ಇತಿಹಾಸದಿಂದ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ, ‘ವಾರ್ ಮ್ಯೂಸಿಯಂ ಎಲ್ಲಿದೆ?’ ಎಂದು ಕೇಳಿದರೆ ಅಲ್ಲೇನಿದೆ ಅಂತ ನೋಡ್ತೀರಿ ಎಂದು ಒಪೆರಾ ಹೌಸ್‌ನತ್ತ ದಾರಿ ತೋರಿಸುತ್ತಾರೆ. ಆಮೇಲೆ, ‘ಬುಯ್ ವೀನ್ ವಾಕಿಂಗ್ ಸ್ಟ್ರೀಟ್ ಕಡೆಗೆ ಹೋಗಿ’ ಎನ್ನುತ್ತಾರೆ. ಅದು ಕತ್ತಲಾದ ಮೇಲೆ ಎದ್ದು, ಬೆಳಕು ಹರಿದ ಮೇಲೆ ಮಲಗುವ ಮೋಜಿನ ರಸ್ತೆ. ಅಲ್ಲಿ ಏನಿಲ್ಲ ಎಂದು ಕೇಳಬಾರದು.
ವಿಯೆಟ್ನಾಮಿ ಕಲೆಯಲ್ಲಿ ನಾವೆಲ್ಲ ಚೂಪಾದ ಟೋಪಿ ನೋಡಿರುತ್ತೇವೆ. ಅವು ಅಲ್ಲಿನ ರೈತರ ಕೆಲಸದ ಟೋಪಿ. ಈಗ ಆ ದೇಶದ ಅಂತಾರಾಷ್ಟ್ರೀಯ ಟ್ರೇಡ್‌ಮಾರ್ಕ್. ವಿಯೆಟ್ನಾಮಿನ ಅನ್ನದ ಬಟ್ಟಲು ಎಂದು ಕರೆಯುವ ಮೆಕಾಂಗ್ ಡೆಲ್ಟಾ ಪ್ರದೇಶಕ್ಕೆ ಹೋದರೆ ಇದೇ ಟೋಪಿ ಹಾಕಿಕೊಂಡು ಸಣ್ಣ ಸಣ್ಣ ಕಾಲುವೆಗಳಲ್ಲಿ ತಮ್ಮ ಭತ್ತದ ಗದ್ದೆಗೋ ಅಥವಾ ಪ್ರವಾಸಿ ದ್ವೀಪಗಳಿಗೋ ಕರೆದುಕೊಂಡು ಹೋಗುವ ಪುಟ್ಟ ಪುಟ್ಟ ದೋಣಿಗಳ ಮಾಲಿಕರು ಸಿಗುತ್ತಾರೆ. ಗೂಗಲ್‌ನಲ್ಲಿ ಜಗತ್ತಿಗೆ ಕಾಣಿಸುವ ವಿಯೆಟ್ನಾಂ ಇವರದೇ. ರೈಸ್ ಬೌಲ್ ಪ್ರದೇಶ ನೋಡದಿದ್ದರೆ ವಿಯೆಟ್ನಾಂ ನೋಡಿದಂತಾಗುವುದಿಲ್ಲ.
ಆದರೆ ಭತ್ತದ ಗದ್ದೆಗಳನ್ನು ದಾಟಿ ವಿಯೆಟ್ನಾಮಿ ಯುವಕರು ಈಗ ಸಾಫ್ಟ್‌ವೇರ್ ಜಗತ್ತಿಗೆ ಬಂದಾಗಿದೆ. ದೇಶದ ನಗರಗಳಲ್ಲಿ ನೂರಾರು ಅಂತಸ್ತಿನ ಐಟಿ ಕಟ್ಟಡಗಳು ತಲೆಯೆತ್ತಿವೆ. ಅಲ್ಲಿ ಕೆಲಸ ಮಾಡುವವರ ಅಪ್ಪ ಅಮ್ಮಂದಿರು ಪ್ರವಾಸಿಗರನ್ನು ದೋಣಿಯಲ್ಲಿ ಕೂರಿಸಿಕೊಂಡು ಹುಟ್ಟುಹಾಕುತ್ತ ಮೆಕಾಂಗ್ ಡೆಲ್ಟಾದ ಕಾಲುವೆಗಳಲ್ಲಿ ಹಳ್ಳಿಗಳನ್ನು ತೋರಿಸಿ ಭತ್ತ, ಜೇನು, ಹಣ್ಣು, ಕರಕುಶಲ ವಸ್ತು, ಸ್ನೇಕ್ ವೈನು, ದೇಸಿ ಹಾಡು, ಮೊಸಳೆ ರ‍್ಮದ ಬ್ಯಾಗುಗಳನ್ನು ಮಾರಲು ಕರೆದೊಯ್ಯುತ್ತಾರೆ. ಪ್ರವಾಸಿಗರನ್ನು ನೋಡಿ ‘ಸಿಂಚಾವ್ ಸಿಂಚಾವ್’ (ಹಲೋ ಹಲೋ) ಎಂದು ಮಾತನಾಡಿಸುವ ವಿಯೆಟ್ನಾಮಿಗಳ ಕೈಲಿ ಲಾಟರಿ ಟಿಕೆಟ್‌ನಿಂದ ಹಿಡಿದು ಸ್ಥಳೀಯ ಕರೆನ್ಸಿ ಡಾಂಗ್‌ವರೆಗೆ ಮಾರುವುದಕ್ಕೆ ಏನಾದರೂ ಇದ್ದೇ ಇರುತ್ತದೆ. ಅವರು ಭಿಕ್ಷೆ ಬೇಡುವುದಿಲ್ಲ.
ಹಿಂದೆ ಫ್ರೆಂಚರಿಂದ ಸ್ವಾತಂತ್ರ‍್ಯಕ್ಕೂ ಅವರು ಭಿಕ್ಷೆ ಬೇಡಿರಲಿಲ್ಲ. ಬಳಿಕ ಉತ್ತರ ಮತ್ತು ದಕ್ಷಿಣ ವಿಯೆಟ್ನಾಮನ್ನು ಒಗ್ಗೂಡಿಸುತ್ತೇವೆಂದು ಬಂದು ದಬ್ಬಾಳಿಕೆ ನಡೆಸಿದ ಅಮೆರಿಕನ್ನರಲ್ಲೂ ಭಿಕ್ಷೆ ಬೇಡಿರಲಿಲ್ಲ. ಹೋರಾಡಿಯೇ ಸ್ವಾತಂತ್ರ‍್ಯ ಗಿಟ್ಟಿಸಿಕೊಂಡಿದ್ದರು. ಈಗ ಕಮ್ಯುನಿಸ್ಟ್ ದೇಶದಲ್ಲಿ ಪ್ರಜಾಪ್ರಭುತ್ವದ ಪರ ಸಣ್ಣದೊಂದು ಹೋರಾಟ ನಡೆಯುತ್ತಿದೆ. ಮುಂದೆ?