ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪ ನಗರ ರೈಲು ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ 4 ಕಾರಿಡಾರ್‌ಗಳ ಈ ಯೋಜನೆಗೆ ಹಲವಾರು ವಿಘ್ನಗಳು ಎದುರಾಗುತ್ತಿದ್ದು, ಯೋಜನೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ.
ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಜಾರಿಗೊಳಿಸುವ ಹೊಣೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್)ಗೆ ನೀಡಿದೆ. ಎರಡು ಕಾರಿಡಾರ್‌ನ ಕೆಲಸಗಳು ನಡೆಯುತ್ತಿದ್ದವು.
ಟೆಂಡರ್ ರದ್ದು ಮಾಡಿದ ಎಲ್&ಟಿ: ಬಿಎಸ್‌ಆರ್‌ಪಿ ಕಾರಿಡಾರ್-2 ಮಲ್ಲಿಗೆ, ಕಾರಿಡಾರ್-4 ಕನಕ ನಿರ್ಮಾಣದ ಟೆಂಡರ್ ಪಡೆದಿದ್ದ ಪ್ರತಿಷ್ಠಿತ ಎಲ್&ಟಿ ಕಂಪನಿ ಟೆಂಡರ್ ರದ್ದು ಮಾಡಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲು ಕೆ-ರೈಡ್ ತಡ ಮಾಡುತ್ತಿದೆ ಎಂದು ದೂರಿದೆ.
ಕೆ-ರೈಡ್‌ಗೆ ಈ ಕುರಿತು ಪತ್ರವನ್ನು ಬರೆದಿರುವ ಎಲ್&ಟಿ 2022ರ ಆಗಸ್ಟ್‌ನಲ್ಲಿನ ಒಪ್ಪಂದದ ಪ್ರಕಾರ ಭೂಮಿ ನೀಡಿಲ್ಲ. ಇದುವರೆಗೂ ಕೇವಲ 8.28ರಷ್ಟು ಭೂಮಿ ನೀಡಲಾಗಿದೆ ಎಂದು ಹೇಳಿದೆ. ಮೂಲ ಒಪ್ಪಂದದ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ವೆಚ್ಚ ಅಧಿಕವಾಗುತ್ತಿದೆ ಎಂದು ತಿಳಿಸಿದೆ.
ಟೆಂಡರ್ ರದ್ದುಗೊಳಿಸಿ ಪತ್ರ ಕಳಿಸಿರುವ ಎಲ್&ಟಿ ಈ ಕುರಿತು ಜುಲೈ 29ರಂದು ನ್ಯಾಯಾಲಯದ ಮೊರೆ ಹೋಗಿದೆ. ಕೋರ್ಟ್ ಕೆ-ರೈಡ್ ಕಂಪನಿ ಬ್ಯಾಂಕ್ ಖಾತೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ತಡೆ ನೀಡಿದೆ.
ಕಾರಿಡಾರ್-2 ಒಪ್ಪಂದದ ಪ್ರಕಾರ 500 ಕೋಟಿ ಪರಿಹಾರವನ್ನು ನೀಡಬೇಕು. ಕಾರಿಡಾರ್-4ರ ಪರಿಹಾರವಾಗಿ 150 ಕೋಟಿ ರೂ. ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. 2020ರಲ್ಲಿ ಆರಂಭವಾದ ಬೆಂಗಳೂರು ಸಬ್ ಅರ್ಬನ್ ಯೋಜನೆ ಈಗಾಗಲೇ ವಿಳಂಬವಾಗಿದೆ. ಈಗ ಟೆಂಡರ್ ರದ್ದಿನ ಕಾರಣ ಇನ್ನಷ್ಟು ತಡವಾಗಲಿದೆ.
ಯೋಜನೆ ಟೆಂಡರ್ ನೀಡುವಾಗ ಯೋಜನೆಯನ್ನು 6 ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಈಗ ಎಲ್&ಟಿ ಟೆಂಡರ್ ರದ್ದುಗೊಳಿಸಿದ್ದು, ಕೆ-ರೈಡ್ ಈಗ ಕಾರಿಡಾರ್-2, 4ಕ್ಕೆ ಹೊಸ ಟೆಂಡರ್ ಕರೆಯಬೇಕಿದೆ.
ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ. ಮರು ಟೆಂಡರ್ ಪ್ರಕ್ರಿಯೆ ಕೇವಲ ಯೋಜನೆ ಜಾರಿ ವಿಳಂಬಕ್ಕೆ ಕಾರಣವಾಗುವುದಿಲ್ಲ, ಅದು ವೆಚ್ಚವನ್ನು ಅಧಿಕವಾಗಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಎಸ್‌ಆರ್‌ಪಿ ಕಾರಿಡಾರ್-2ಕ್ಕೆ ‘ಮಲ್ಲಿಗೆ’ ಎಂದು ನಾಮಕರಣ ಮಾಡಲಾಗಿದೆ. 25 ಕಿ.ಮೀ.ಯೋಜನೆ ಇದಾಗಿದ್ದು, ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವೆ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ.
ಈ ಯೋಜನೆಯಲ್ಲಿ ಬೆನ್ನಿಗಾನಹಳ್ಳಿ (ಇಂಟರ್ ಚೇಂಚ್), ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ಕಾವೇರಿ ನಗರ, ನಾಗವಾರ, ಕನಕ ನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ, ಮೈದಾರಹಳ್ಳಿ, ಚಿಕ್ಕಬಣಾವರ ನಿಲ್ದಾಣಗಳಿವೆ.
ಕಾರಿಡಾರ್-4ಕ್ಕೆ ‘ಕನಕ’ ಎಂದು ನಾಮಕರಣ ಮಾಡಲಾಗಿದೆ. 46.2 ಕಿ.ಮೀ. ಮಾರ್ಗವಿದು, ಹೀಲಲಿಗೆ ಮತ್ತು ರಾಜನಕುಂಟೆ ನಡುವೆ ಇದು ಸಂಪರ್ಕವನ್ನು ಕಲ್ಪಿಸುತ್ತದೆ. 19 ನಿಲ್ದಾಣಗಳು ಇದರಲ್ಲಿವೆ.
ಯೋಜನೆಯಲ್ಲಿ ಹೀಲಲಿಗೆ, ಬೊಮ್ಮಸಂದ್ರ, ಸಿಂಗೇನ ಅಗ್ರಹಾರ, ಹುಸ್ಕೂರು, ಅಂಬೇಡ್ಕರ್ ನಗರ, ಬೆಳ್ಳಂದೂರು, ಮಾರತ್‌ಹಳ್ಳಿ, ಕಗ್ಗದಾಸಪುರ, ಬೆನ್ನಿಗಾನಹಳ್ಳಿ, ಚನ್ನಸಂದ್ರ, ಹೊರಮಾವು, ಹೆಣ್ಣೂರು, ಥಣಿಸಂದ್ರ, ಆರ್.ಕೆ.ಹೆಗಡೆ ನಗರ, ಜಕ್ಕೂರು, ಯಲಹಂಕ, ಮುದ್ದೇನಹಳ್ಳಿ, ರಾಜನಕುಂಟೆ ನಿಲ್ದಾಣಗಳಿವೆ.