ಕರ್ನಾಟಕದಲ್ಲಿ ಚೀನಾ ಉದ್ಯಮಿ ಹೂಡಿಕೆ: 5 ಸಾವಿರ ಉದ್ಯೋಗ ಸೃಷ್ಟಿ

0
85

ಬೆಂಗಳೂರು: ಚೀನಾದ ಜವಳಿ ಉದ್ಯಮಿ ಪಾಲ್‌ ಪು ಅವರು ರಾಜ್ಯದಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಐದು ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ.

ಬೆಂಗಳೂರಿನ ಕರ್ನಾಟಕ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಚರ್ಚಿಸಿದ ಪಾಲ್‌ ಪು ಅವರು ಸೆಪ್ಟೆಂಬರ್‌ವರೆಗೆ ಕರ್ನಾಟಕದಲ್ಲೇ ಇದ್ದು, ಯೋಜನಾ ಸ್ಥಳ ಫೈನಲ್‌ ಮಾಡುವ ಉದ್ದೇಶವಿದೆ ಎಂದು ಹೇಳಿದರು.

“ಉತ್ತರ ಕರ್ನಾಟಕದಲ್ಲಿ ತಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಇರುವ ಭೂಮಿ ಲಭ್ಯವಿದೆ. ವರ್ಷದಲ್ಲಿ 365 ದಿನ ನೀರು, ಸಮರ್ಪಕ ವಿದ್ಯುತ್‌, ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಸೌಲಭ್ಯ ಇರುವ ಕಡೆ ಅಗತ್ಯ ಪ್ರಮಾಣದ ಭೂಮಿ ಒದಗಿಸಲಾಗುವುದು” ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಚಿವರ ಸಲಹೆಗೆ ಸಮ್ಮತಿಸಿದ ಉದ್ಯಮಿ, “ಮೊದಲ ಹಂತದಲ್ಲಿ ಹಳೆಯ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲೂ ಉದ್ಯಮ ಸ್ಥಾಪನೆ ನಿಶ್ಚಿತ” ಎಂದು ಭರವಸೆ ನೀಡಿದರು.

“ಮೊದಲ ಹಂತದ ಯೋಜನೆಯಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ಐದು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ತಕ್ಷಣವೇ ಬಂಡವಾಳ ಹೂಡಲು ಸಿದ್ಧರಿದ್ದು, 20 ಎಕರೆ ಭೂಮಿಯ ಅಗತ್ಯವಿದ್ದು, ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ನಿರೀಕ್ಷೆ ಹೊಂದಿದ್ದೇನೆ” ಎಂದರು.

ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್‌ ಪು ಅವರಿಗೆ ತೋರಿಸಿ, ಅವರಿಗೆ ಸೂಕ್ತ ಎನಿಸಿದ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಆಯುಕ್ತೆ ಜ್ಯೋತಿ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ನಾಳೆಯಿಂದಲೇ ಉದ್ಯಮ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಪಾಲ್‌ ಪು ಅವರಿಗೆ ತೋರಿಸಿ ಎಂದು ಸೂಚನೆ ನೀಡಿದರು.

ಇತ್ತೀಚೆಗೆ ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದ್ದು ವಿಜಯಪುರ ಜಿಲ್ಲೆಯಲ್ಲೂ ಘಟಕ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದರು. ಈ ಬೆನ್ನಲ್ಲೇ ಚೀನಾದ ಜವಳಿ ಉದ್ಯಮಿ ಪಾಲ್‌ ಪು ಅವರು ರಾಜ್ಯದಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿರುವುದು ಕನ್ನಡಿಗರಿಗೆ ಆಶಾಭಾವನೆ ಮೂಡಿಸಿದೆ.

Previous articleಸಚಿನ್‌, ವಿರಾಟ್‌ ಜತೆ ಕ್ರಿಕೆಟ್‌ ಆಡಲಿದ್ದಾರೆ ಫುಟ್ಬಾಲ್ ಲೆಜೆಂಡ್ ಮೆಸ್ಸಿ
Next articleಜಪಾನ್ ಹಿಂದಿಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ

LEAVE A REPLY

Please enter your comment!
Please enter your name here