ಚೆನ್ನೈ: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಲವು ಕಾರಣಗಳಿಗೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್ ನೇಮಕಗೊಂಡಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾಗಿದ್ದ ಕೆ.ಅಣ್ಣಾಮಲೈ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ? ಎಂಬ ಸುದ್ದಿಯೂ ಹಬ್ಬಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ನೇಮಕ ಮಾಡಿದ್ದ ಪಕ್ಷ ಈಗ ಖುಷ್ಬೂ ಸುಂದರ್‌ರನ್ನು ಉಪಾಧ್ಯಕ್ಷರಾಗಿ ನೇಮಿಸಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾಣೆಯನ್ನು ಎದುರಿಸಲಿವೆ.
2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ನಟ ವಿಜಯ್ ಸ್ಥಾಪನೆ ಮಾಡಿದ್ದಾರೆ. ದಳಪತಿ ವಿಜಯ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಈಗಾಗಲೇ ಘೋಷಣೆ ಮಾಡಿದೆ.
ವಿಜಯ್ ಬೆಂಬಲ ಬಿಜೆಪಿಗೆ?: ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಖುಷ್ಬೂ ಸುಂದರ್, “ಈ ಹುದ್ದೆ ನೀಡಿರುವುದು ಸಂತಸ ತಂದಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲು ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ. ಪಕ್ಷದ ಹಿರಿಯ ನಾಯಕರು ಸೀಟು ಹಂಚಿಕೆ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದರು.
ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಜೊತೆ ಖುಷ್ಬೂ ಸುಂದರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿಜಯ್ ಹುಟ್ಟುಹಬ್ಬದ ದಿನ ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಶುಭಾಶಯ ಕೋರಿದ್ದರು.
ಖುಷ್ಬೂ ಸುಂದರ್ ಮಾತನಾಡಿ, “ವಿಜಯ್‌ಗೆ ಒಂದು ಸಂದೇಶವಿದೆ. ಅವರನ್ನು ನಾನು ಚೆನ್ನಾಗಿ ಬಲ್ಲೆ. ನನ್ನ ಸಹೋದರನಂತೆ ಅವರನ್ನು ನಾನು ನೋಡುತ್ತೇನೆ. ನಿಮ್ಮ ಗುರಿ ಡಿಎಂಕೆಯನ್ನು ಸೋಲಿಸುವುದು. ನೀವು ಡಿಎಂಕೆ ಸೋಲಿಸಬೇಕಾದರೆ ನಾವೆಲ್ಲ ಒಂದಾಗಿ ಹೋರಾಡಬೇಕು” ಎಂದರು.
“ರಾಜ್ಯದಲ್ಲಿ ಏನೇನು ತಪ್ಪುಗಳು ನಡೆಯುತ್ತಿವೆ ಎಂಬುದು ತಿಳಿದಿದೆ. ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಹೇಗೆ ವಿಫಲವಾಗಿದೆ ಎಂದು ನಿಮಗೂ ತಿಳಿದಿದೆ, ನಾವು ಇದರ ವಿರುದ್ಧ ಧ್ವನಿ ಎತ್ತಬೇಕು. ಆದ್ದರಿಂದ ಟಿವಿಕೆ ಪಕ್ಷ ಬಿಜೆಪಿ, ಎಐಎಡಿಎಂಕೆ ಮೈತ್ರಿಕೂಟದ ಜೊತೆ ಕೈ ಜೋಡಿಸುವುದು ಬುದ್ಧಿವಂತಿಕೆಯ ನಿರ್ಧಾರ ಎಂಬುದು ನಾನು ಅಂದುಕೊಳ್ಳುತ್ತೇನೆ” ಎಂದು ಹೇಳಿದರು.
ತಮಿಳಗ ವೆಟ್ರಿ ಕಳಗಂ ಪಕ್ಷ ಈಗಾಗಲೇ ಚುನಾವಣಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಸಂಸ್ಥಾಪಕ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಅಲ್ಲದೇ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆ, ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟಕ್ಕೆ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಟಿವಿಕೆ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಪಕ್ಷ ಘೋಷಣೆ ಮಾಡಿದೆ.
ಖುಷ್ಬೂ ಸುಂದರ್ ಹೇಳಿಕೆಗೆ ನಟ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಐಎಡಿಎಂಕೆಯಲ್ಲಿಯೂ ಎರಡು ಬಣಗಳಿವೆ. ಪನ್ನೀರ್ ಸೆಲ್ವಂ ಬಣ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟದಿಂದ ಹೊರಬಂದಿದೆ.
ಎಐಎಡಿಎಂಕೆ ನಾಯಕರು ನೇರವಾಗಿ ಅಮಿತ್ ಶಾ ಭೇಟಿಯಾಗಿ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದ್ದರು. ಈ ಮೈತ್ರಿ ಗಟ್ಟಿಯಾದ ಬಳಿಕವೇ ಪಕ್ಷದ ಬೇಡಿಕೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬದಲಾವಣೆ ಮಾಡಲಾಗಿತ್ತು.