ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ರಸ್ತೆಯೊಂದರ ಟೋಲ್ ದರಪಟ್ಟಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಘೋಷಣೆ ಮಾಡಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಬೆಂಗಳೂರು ನಗರದ ಹೊರವಲಯದ ರಸ್ತೆಯಲ್ಲಿ ಟೋಲ್ ಸಂಗ್ರಹ ಶೀಘ್ರವೇ ಪ್ರಾರಂಭವಾಗಲಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಟೋಲ್‌ದರಗಳನ್ನು ಎನ್‌ಹೆಚ್‌ಎಐ ಘೋಷಣೆ ಮಾಡಿದೆ. 71 ಕಿ.ಮೀ.ಮಾರ್ಗದಲ್ಲಿ ಸಂಚಾರ ನಡೆಸಲು ವಾಹನ ಸವಾರರು ಸುಮಾರು 185 ರೂ.ಗಳನ್ನು ಟೋಲ್ ಆಗಿ ಪಾವತಿ ಮಾಡಬೇಕಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಹೊಸಕೋಟೆ, ಕೆಜಿಎಫ್‌ಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಕಾರು ಮತ್ತು ಜೀಪ್‌ಗಳು ಒಂದು ಬಾರಿ ಸಂಚಾರವನ್ನು ನಡೆಸಲು 185 ರೂ. ಟೋಲ್ ಕಟ್ಟಬೇಕು. ಈ ಆಕ್ಸೆಸ್ ಕಂಟ್ರೋಲ್ ಹೈವೇ ಟೋಲ್ ದರಗಳನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ.
ಟೋಲ್ ಶುಲ್ಕದ ವಿವರ: ಈ ಹೆದ್ದಾರಿಯಲ್ಲಿ ಹೊಸಕೋಟೆ ಸಮೀಪ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಡಗಿನಬೆಲೆ ಮತ್ತು ಕೆಜಿಎಫ್‌ನ ಬೆಮಲ್ ನಗರ ಬಳಿ ಕೃಷ್ಣಾವರಂನಲ್ಲಿ ಟೋಲ್ ಬೂತ್‌ಗಳಿವೆ. ಕೆಜಿಎಫ್ ತಾಲೂಕಿನ ಗಡಿ ಸುಂದರಪಾಳ್ಯದಲ್ಲಿಯೂ ಟೋಲ್ ಇದೆ.
ಟೋಲ್ ದರದ ಪ್ರಕಾರ ಹೊಸಕೋಟೆಯಿಂದ ಸುಂದರಪಾಳ್ಯ ನಡುವೆ ಸಂಚಾರ ನಡೆಸಲು ಕಾರುಗಳು ಏಕಮುಖ ಸಂಚಾರಕ್ಕೆ 185 ರೂ. ಮತ್ತು ಎರಡು ಬದಿಯ ಸಂಚಾರಕ್ಕೆ 275 ರೂ. ದರ ಕಟ್ಟಬೇಕು. ಆದರೆ ಸುಂದರಪಾಳ್ಯದಿಂದ ಹೆಡಗಿನಬೆಲೆ ತನಕ ಏಕಮುಖ ಸಂಚಾರಕ್ಕೆ 190 ರೂ. ಮತ್ತು ದ್ವಿಮುಖ ಸಂಚಾರಕ್ಕೆ 280 ರೂ. ಹಣ ಪಾವತಿಸಬೇಕಿದೆ.
ಸುಮಾರು 7 ತಿಂಗಳ ಹಿಂದೆ ವಾಹನಗಳ ಸಂಚಾರಕ್ಕೆ ಅನಧಿಕೃತವಾಗಿ ಮುಕ್ತವಾಗಿರುವ ಹೆದ್ದಾರಿಗೆ ಈಗ ಎನ್‌ಹೆಚ್‌ಎಐ ಟೋಲ್ ದರಗಳನ್ನು ನಿಗದಿ ಮಾಡಿದೆ. ಹೊಸಕೋಟೆ-ಕೆಜಿಎಫ್ ಬಳಿಯ ಬೇತಮಂಗಲಕ್ಕೆ ಈ ಹೆದ್ದಾರಿ ಸಂಪರ್ಕವನ್ನು ಕಲ್ಪಿಸುತ್ತದೆ. ಆದರೆ ಟೋಲ್ ಸಂಗ್ರಹ ಯಾವಾಗ ಆರಂಭ? ಎಂಬ ಕುರಿತು ಇನ್ನೂ ಸಹ ಎನ್‌ಹೆಚ್‌ಎಐ ತಿಳಿಸಿಲ್ಲ.
ಈ ಮಾರ್ಗದಲ್ಲಿ ಸಂಚಾರ ನಡೆಸಲು ಎಲ್‌ಸಿವಿಗಳು, ಎಲ್‌ಜಿವಿಗಳು ಮತ್ತು ಮಿನಿ ಬಸ್‌ಗಳು ಒಂದು ಕಡೆಯ ಸಂಚಾರಕ್ಕೆ 295 ರೂ.ಟೋಲ್ ಕಟ್ಟಬೇಕಿದೆ. ಇದು ಹೆಡಗಿನಬೆಲೆ-ಸುಂದರಪಾಳ್ಯದ ಸಂಚಾರಕ್ಕೆ ಅನ್ವಯ. ದ್ವಿಮುಖ ಸಂಚಾರಕ್ಕೆ 445 ರೂ. ನಿಗದಿ ಮಾಡಲಾಗಿದೆ. ಸುಂದರಪಾಳ್ಯ-ಹೆಡಗಿನಬೆಲೆ ನಡುವಿನ ಸಂಚಾರಕ್ಕೆ ಏಕಮುಖ ಸಂಚಾರಕ್ಕೆ 305 ರೂ. ಮತ್ತು ದ್ವಿಮುಖ ಸಂಚಾರಕ್ಕೆ 455 ರೂ. ನಿಗದಿ ಮಾಡಲಾಗಿದೆ.
ಭಾರೀ ವಾಹನಗಳಾದ ಲಾರಿ, ಬಸ್‌ಗಳು ಹೆಡಗಿನಬೆಲೆ-ಸುಂದರಪಾಳ್ಯ ನಡುವೆ ಏಕಮುಖ ಸಂಚಾರಕ್ಕೆ 620 ರೂ. ಮತ್ತು ದ್ವಿಮುಖ ಸಂಚಾರಕ್ಕೆ 930 ರೂ. ಪಾವತಿಸಬೇಕಿದೆ. ಅದೇ ಸುಂದರಪಾಳ್ಯ-ಹೆಡಗಿನಬೆಲೆ ನಡುವಿನ ಸಂಚಾರಕ್ಕೆ ಏಕಮುಖ 635 ರೂ. ಮತ್ತು ದ್ವಿಮುಖ ಸಂಚಾರಕ್ಕೆ 955 ರೂ. ನಿಗದಿಪಡಿಸಲಾಗಿದೆ.
ಈ ಹೆದ್ದಾರಿಯಲ್ಲಿ ಮಾಸಿಕ ಪಾಸುಗಳ ದರ ಕಾರುಗಳಿಗೆ ಏಕಮುಖ ಸಂಚಾರಕ್ಕೆ 6,150 ರೂ.ಗಳು (50 ಟ್ರಿಪ್). ದ್ವಿಮುಖ ಸಂಚಾರಕ್ಕೆ 6,260 ರೂ.ಗಳು. ಈ ಹೆದ್ದಾರಿಯಲ್ಲಿ ಸಂಚಾರ ನಡೆಸುವ ವಾಹನಗಳಿಗೆ ಗಂಟೆಗೆ 120 ಕಿ.ಮೀ. ವೇಗದ ಮಿತಿ ನಿಗದಿ ಮಾಡಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಯಾವಾಗಿನಿಂದ ಆರಂಭ? ಎಂದು ಅಧಿಕಾರಿಗಳು ಹೇಳಿಲ್ಲ. ಶೀಘ್ರದಲ್ಲೇ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಎನ್‌ಹೆಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.
ಈ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳ ಬಳಿಕ ಬೈಕ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶದಿಂದ ಬೈಕ್ ಸವಾರರು ಹೆದ್ದಾರಿಗೆ ನುಗ್ಗುತ್ತಿದ್ದಾರೆ. ಅಂತಹ ಸ್ಥಳಗಳಲ್ಲಿ ಹೋಂ ಗಾರ್ಡ್ ನಿಯೋಜನೆ ಮಾಡಲಾಗುತ್ತಿದೆ.