ಬೆಂಗಳೂರು: ವೇತನ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಅಪ್‌ಡೇಟ್ ಒಂದಿದೆ. ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ ಈ ಕುರಿತು ಆದೇಶದ ಮೂಲಕ ಮಾಹಿತಿ ನೀಡಿದ್ದಾರೆ.
ಈ ಆದೇಶ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎಲ್ಲಾ ಸರ್ಕಾರಿ/ ಅನುದಾನಿತ ಕಾಲೇಜುಗಳು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ತಿಂಗಳ ಕೊನೆಯ ದಿನಾಂಕದಂದು ವೇತನ ಜಮೆ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎಲ್ಲಾ ಸರ್ಕಾರಿ/ ಅನುದಾನಿತ ಕಾಲೇಜುಗಳು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಹೆಚ್.ಆರ್.ಎಂ.ಎಸ್. ಮುಖಾಂತರ ವೇತನವನ್ನು ಪಾವತಿಸಲಾಗುತ್ತಿದೆ. ಆದರೆ ಅನುದಾನಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿವಿಧ ದಿನಾಂಕಗಳಂದು ವೇತನವನ್ನು ಪಾವತಿಸುತ್ತಿರುವುದಾಗಿ ತಿಳಿದು ಬಂದಿರುತ್ತದೆ.
ಆದ್ದರಿಂದ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣಯಡಿ ಬರುವ ಎಲ್ಲಾ ಸರ್ಕಾರಿ/ ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ತಿಂಗಳ ಕೊನೆಯ ದಿನಾಂಕದಂದು ವೇತನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ.
ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ/ ಅನುದಾನಿತ ಕಾಲೇಜುಗಳಲ್ಲಿ ಹಿಂದಿನ ತಿಂಗಳ 20ನೇ ತಾರೀಖಿನಿಂದ ಪಸ್ತುತ ತಿಂಗಳ 20ನೇ ತಾರೀಖಿನವರೆಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದ ವಿವರಗಳನ್ನು ಪರಿಗಣಿಸಿ ಹೆಚ್.ಆರ್.ಎಂ.ಎಸ್. ರಡಿ ವೇತನ ಪಾವತಿಸಲು ಈ ನಿಗದಿತ ಸಮಯದಲ್ಲಿ ಬಿಲ್ ತಯಾರಿಸಿ ವೇತನ ಪಾವತಿಸಲು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಿದೆ.
- ಪ್ರತಿ ಮಾಸಿಕ ದಿನಾಂಕ 20 ರಿಂದ 23ರೊಳಗೆ e-Gov ಸಂಸ್ಥೆಯಿಂದ HRMS ನಲ್ಲಿ ಡ್ರಾಫ್ಟ್ ವೇತನ ಬಿಲ್ ಸೃಜಿಸಲು enable ಮಾಡಲಾಗುವುದು.
- ಪ್ರತಿ ಮಾಸಿಕ ದಿನಾಂಕ 20 ರಿಂದ 23ರೊಳಗೆ ಡ್ರಾಫ್ಟ್ ಬಿಲ್ ಸೃಜನೆಗಾಗಿ HRMS ನಲ್ಲಿ enable ಆದ ಕೂಡಲೇ ಪ್ರಾಂಶುಪಾಲರ/ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿಗಳ ಹಂತದಲ್ಲಿ HRMS ಲಾಗಿನ್‌ನಲ್ಲಿ ಡ್ರಾಫ್ಟ್ ಬಿಲ್ಲುಗಳನ್ನು ಸೃಜಿಸುವುದು.
- ಪ್ರತಿ ಮಾಸಿಕ ದಿನಾಂಕ 24 ರಿಂದ 26 ರೊಳಗೆ ಡ್ರಾಫ್ಟ್ ಬಿಲ್ಲನ್ನು ಅನುಮೋದನೆಗಾಗಿ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಗೆ ಸಲ್ಲಿಸುವುದು.
- ಪ್ರತಿ ಮಾಸಿಕ ದಿನಾಂಕ 26 ರಿಂದ 28ರೊಳಗೆ ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರುಗಳು, ಡ್ರಾಫ್ಟ್ ಬಿಲ್ಲನ್ನು ಪರಿಶೀಲಿಸಿ ಸರಿಯಿದ್ದಲ್ಲಿ ಅನುಮೋದಿಸಿ ಕೆ2ಗೆ send ಮಾಡಿ ಭೌತಿಕ ಬಿಲ್ಲುಗಳನ್ನು ನಿಗದಿತ ಅವಧಿಯೊಳಗೆ ಖಜಾನೆಗೆ ಸಲ್ಲಿಸತಕ್ಕದ್ದು.
- ಪ್ರತಿ ಮಾಸಿಕ ದಿನಾಂಕ 28 ರಿಂದ 30/ 31ರೊಳಗೆ ಖಜಾನೆಯಿಂದ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದು.
ಮೇಲ್ಕಂಡಂತೆ ಕ್ರಮವಹಿಸದೇ ಇದ್ದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಹಣಕಾಸು ಅಧಿಕಾರಿಗಳು, ಸರ್ಕಾರಿ/ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರು ಅಥವಾ ಯಾವ ಹಂತದಲ್ಲಿ ವಿಳಂಬವಾಗುವುದೋ ಅಂತಹವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಮುಖ ಸೂಚನೆಗಳು
- ಒಂದು ವೇಳೆ ಯಾವುದೇ ಕಾರಣಗಳಿಂದಾಗಿ ಯಾವುದೇ ಅಧಿಕಾರಿ/ ಸಿಬ್ಬಂದಿಯ ವೇತನ ಪಾವತಿಯಲ್ಲಿ ತೊಡಕುಗಳಿದ್ದಲ್ಲಿ, ಸದರಿ ಅಧಿಕಾರಿ/ ಸಿಬ್ಬಂದಿಯ ವೇತನವನ್ನು ಮಾತ್ರ ತಾತ್ಕಾಲಿಕವಾಗಿ HRMS ನಲ್ಲಿ ನಿಲ್ಲಿಸಿ, ಇನ್ನುಳಿದ ಸಿಬ್ಬಂದಿಗಳ ವೇತನವನ್ನು ವಿಳಂಬ ಮಾಡದೇ ವೇಳಾ ಪಟ್ಟಿಯನ್ನಯ ಪಾವತಿಸಲು ಕ್ರಮ ವಹಿಸುವುದು.
- ಆದಾಯ ತೆರಿಗೆ ಕಟಾವಣೆಯನ್ನು ಆಯಾ ವರ್ಷದ ಪ್ರಾರಂಭದಿಂದಲೇ ಕಟಾವಣೆ ಮಾಡದೇ ಜನವರಿ ಅಥವಾ ಫೆಬ್ರವರಿ ಮಾಹೆಯಲ್ಲಿ ಪಡೆಯುವ ಒಟ್ಟು ವೇತನದ ಅರ್ಧಕ್ಕಿಂತ ಹೆಚ್ಚಾಗಿ ಕಟಾವಣೆಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಕ್ರಮವನ್ನು ಅನುಸರಿಸದೇ, ಒಂದು ವರ್ಷಕ್ಕೆ ಕಟಾಯಿಸಬೇಕಾದ ಆದಾಯ ತೆರಿಗೆ ಮೊತ್ತವನ್ನು ಅಂದಾಜಿಸಿ ಸಮಾನ ಕಂತುಗಳಲ್ಲಿ ಆಯಾ ವರ್ಷದ ಪ್ರಾರಂಭದಿಂದಲೇ ಅಂದರೆ ಏಪ್ರಿಲ್ ಮಾಹೆಯಿಂದಲೇ ವೇತನದಲ್ಲಿ ಕಟಾಯಿಸಲು ಕ್ರಮ ವಹಿಸುವುದು.
- ಯಾವುದೇ ಅಧಿಕಾರಿ/ ಸಿಬ್ಬಂದಿಗಳ ವೇತನ ಸೃಜನೆಯಲ್ಲಿ HRMS ಸಂಬಂಧಿತ ತಾಂತ್ರಿಕ ತೊಂದರೆಗಳಿದ್ದಲ್ಲಿ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಯ ಮುಖಾಂತರ ಇಲಾಖೆಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಗತ್ಯ ವಿವರ ಹಾಗೂ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಸರಿಪಡಿಸಿಕೊಳ್ಳಲು ಕ್ರಮ ವಹಿಸುವುದು.