ಬಳ್ಳಾರಿ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ತುಂಗ ಮತ್ತು ಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಎರಡೂ ಡ್ಯಾಂಗಳಿಂದ ನದಿಗೆ ನೀರು ಹರಿಸಲಾಗಿದ್ದು, ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದೆ. ಆದ್ದರಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಜನರಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, “ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದ್ದು, ಕಂಪ್ಲಿ ಗಂಗಾವತಿ ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮುಂಜಾಗ್ರತೆಗಾಗಿ ವಾಹನಗಳ ಸಂಚಾರ ಸ್ಥಗಿತ ಮತ್ತು ನದಿ ಭಾಗದಲ್ಲಿ ತೊಂದರೆಯಾಗದಂತೆ ತುರ್ತು ಪರಿಸ್ಥಿತಿಗೆ ಬೋಟ್‌ಗಳ ವ್ಯವಸ್ಥೆಯನ್ನು ಮಾಡಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊರ ಹರಿವು ಹೆಚ್ಚಳದ ನಿರೀಕ್ಷೆ: “ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದ್ದು, ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ” ಎಂದರು.
“ಜಲಾಶಯದ ನೀರಿನ ಮಟ್ಟ ಒಳ ಹರಿವು, ಹೊರ ಹರಿವು ಹೆಚ್ಚಾಗಿದ್ದು ಜಲಾಶಯ 105.788 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 80.001 ಟಿಎಂಸಿ ಅಡಿ ಭರ್ತಿಯಾಗಿದೆ. ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ” ಎಂದು ತಿಳಿಸಿದರು.
“ಕಂಪ್ಲಿ ಗಂಗಾವತಿ ಮೇಲ್ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ವಾಹನ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಕಂಪ್ಲಿ ತಾಲ್ಲೂಕಿನ ತಹಶೀಲ್ದಾರ್, ಆರ್‌ಐ ಅಧಿಕಾರಿಗಳು ದೈನಂದಿನ ನೀರಿನ ಮಟ್ಟವನ್ನು ತಿಳಿದು ನದಿ ಪಾತ್ರದಲ್ಲಿರುವ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಬೇಕು” ಎಂದು ನಿರ್ದೇಶನ ಕೊಟ್ಟರು.
ಜಿಲ್ಲಾಧಿಕಾರಿಗಳು, “ನದಿ ಪಾತ್ರದಲ್ಲಿರುವ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಊಟದ ವ್ಯವಸ್ಥೆ, ಮೂಲ ಸೌಕರ್ಯವನ್ನು ಕಲ್ಪಿಸಬೇಕು. ಮಳೆಯಿಂದ ಶಾಲೆಗಳ ಮೇಲ್ಛಾವಣಿ ಹಾನಿಯಾಗಿದ್ದರೆ ಅದನ್ನು ಸರಿಪಡಿಸಿ ಮಾಹಿತಿ ನೀಡಬೇಕು” ಎಂದರು.
ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಆದ್ದರಿಂದ ತುಂಗಭದ್ರಾ ನದಿಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಶಿವಮೊಗ್ಗದಲ್ಲಿರುವ ತುಂಗ ಮತ್ತು ಭದ್ರಾ ಡ್ಯಾಂನಿಂದ ನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ.
ಗಾಜನೂರಿನ ತುಂಗಾ ಜಲಾಶಯದಿಂದ 68 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಭದ್ರಾ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, ಸುಮಾರು 40 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಆದ್ದರಿಂದ ತುಂಗಭದ್ರಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ತುಂಗಭದ್ರಾ ಡ್ಯಾಂ ಸೇರುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‍ಘಾಟ್ ಪ್ರದೇಶದ ಬಳಿ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಹರಿಹರ ಪಟ್ಟಣದ ಗಂಗಾನಗರ ಬಳಿ ಎಪಿಎಂಸಿ ಭವನದಲ್ಲಿ ಹಾಗೂ ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಜನ ಹಾಗೂ ಜಾನುವಾರುಗಳು ನದಿಗೆ ಇಳಿಯದಂತೆ ತಿಳಿಸಲಾಗಿದೆ. ಪ್ರವಾಸಿಗರು ನದಿಯ ಬಳಿ ಸೆಲ್ಫಿ ತೆಗೆದುಕೊಳ್ಳವುದನ್ನು ನಿಷೇಧಿಸಿದೆ.