ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಹಂತ-2B ಕೆಆರ್ ಪುರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಮಾರ್ಗದಲ್ಲಿ ನಿಲ್ದಾಣವೊಂದರ ನಿರ್ಮಾಣ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಹ ಸಾರ್ವಜನಿಕ ಅರ್ಜಿ ಸಲ್ಲಿಕೆಯಾಗಿತ್ತು.
ಬೆಟ್ಟಹಲಸೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ಬಿ.ಜಿ.ನಂಜುಡಪ್ಪ ಮತ್ತು ಇತರ ನಾಲ್ವರು ಅರ್ಜಿಯನ್ನು ಸಲ್ಲಿಸಿದ್ದರು. ಬೆಟ್ಟಹಲಸೂರು ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ಜನರ ಬೇಡಿಕೆಯನ್ನು ಪರಿಗಣಿಸುವ ಕುರಿತು ಪರಾಮರ್ಶೆ ನಡೆಸಬೇಕು ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿ, ಅರ್ಜಿಯನ್ನು ವಿಲೇವಾರಿ ಮಾಡಿದೆ.
ಅರ್ಜಿದಾರರ ವಾದವೇನು?; ಅರ್ಜಿದಾರರು 2019ರಲ್ಲಿ ಕೆಆರ್ ಪುರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗದ ಡಿಪಿಆರ್ ತಯಾರು ಮಾಡುವಾಗ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಪ್ರಸ್ತಾಪ ಮಾಡಲಾಗಿತ್ತು. ಆದರೆ ಈಗ ನಿಲ್ದಾಣವನ್ನು ಯೋಜನೆಯಿಂದ ಕೈ ಬಿಡಲಾಗಿದೆ.
ಯೋಜನಾ ವರದಿಯ ಪ್ರಕಾರ ಎರಡು ನಮ್ಮ ಮೆಟ್ರೋ ನಿಲ್ದಾಣಗಳ ನಡುವಿನ ಅಂತರ 1 ಕಿ.ಮೀ.ಗಿಂತ ಕಡಿಮೆ ಇರಬಾರದು, 3 ಕಿ.ಮೀ.ಗಿಂತ ಹೆಚ್ಚಿರಬಾರದು. ಬೆಟ್ಟಹಲಸೂರು ರೈಲು ನಿಲ್ದಾಣಕ್ಕೆ ಭೂ ಸ್ವಾಧೀನ ಸಹ ಮಾಡಲಾಗಿತ್ತು. ಆದರೆ ಈಗ ನಿಲ್ದಾಣ ನಿರ್ಮಾಣ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳುತ್ತಿದೆ.
ಬಾಗಲೂರು ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ನಿಲ್ದಾಣವು ಅತ್ಯಗತ್ಯವಾಗಿದೆ. ಈ ಎರಡು ನಿಲ್ದಾಣಗಳ ನಡುವಿನ ಅಂತರ ಸುಮಾರು 8.7 ಕಿ.ಮೀ.ಆಗಿದೆ. ಈ ಎರಡೂ ನಿಲ್ದಾಣಗಳ ನಡುವೆ ಸುಮಾರು 20 ಗ್ರಾಮಗಳಿದ್ದು, ಪ್ರತಿದಿನ ಸುಮಾರು 2 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ. ವಿದ್ಯಾರ್ಥಿಗಳು, ಪ್ರತಿದಿನ ಕೆಲಸಕ್ಕೆ ಹೋಗುವವರು ಖಾಸಗಿ ವಾಹನ ಬಳಕೆ ಮಾಡಲು ಆಗುವುದಿಲ್ಲ.
ಬಿಎಂಆರ್‌ಸಿಎಲ್ ಬೆಟ್ಟಹಲಸೂರು ಕ್ರಾಸ್ ನಿಲ್ದಾಣ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದೆ. ಖಾಸಗಿ ಕಂಪನಿ ಎಂಬಸಿ ಗ್ರೂಪ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ಕೊಟ್ಟಿತ್ತು. ಆದರೆ ಈಗ ಕಂಪನಿ ನಿಲ್ದಾಣವನ್ನು ಪ್ರಾಯೋಜಿಸುವುದರಿಂದ ಹಿಂದೆ ಸರಿದಿದೆ. ಆದ್ದರಿಂದ ಬಿಎಂಆರ್‌ಸಿಎಲ್ ನಿಲ್ದಾಣ ನಿರ್ಮಾಣ ಕೈಬಿಟ್ಟಿದೆ.
ಬೆಟ್ಟಹಲಸೂರು ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಬಿಎಂಆರ್‌ಸಿಎಲ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ನಿಲ್ದಾಣ ನಿರ್ಮಾಣ ಮಾಡಲು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಅರ್ಜಿ ವಿಚಾರಣೆ ವೇಳೆ ಕೋರ್ಟ್ ನಿಲ್ದಾಣ ನಿರ್ಮಾಣ ಮಾಡಿ ಎಂದು ಕೋರ್ಟ್ ಹೇಳಲು ಬರುವುದಿಲ್ಲ. ಇದು ಕೋರ್ಟ್ ವ್ಯಾಪ್ತಿಗೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಜನರು ಬೇಡಿಕೆಯ ಕುರಿತು ಪರಾಮರ್ಶೆ ಮಾಡಿ ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿ, ಅರ್ಜಿ ವಿಲೇವಾರಿ ಮಾಡಿದೆ.
ಕೆಲವು ದಿನಗಳ ಹಿಂದೆ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ ಬೆಟ್ಟಹಲಸೂರು, ಚಿಕ್ಕಜಾಲದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದರು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿರುವ ಪ್ರಮುಖ ಗ್ರಾಮಗಳು ಇದಾಗಿವೆ. ಸುಮಾರು ಒಂದೂವರೆ ಲಕ್ಷ ಜನರು ಈ ಗ್ರಾಮಗಳಲ್ಲಿ ವಾಸವಾಗಿದ್ದು, ಮೆಟ್ರೋ ನಿಲ್ದಾಣ ಅತ್ಯಗತ್ಯವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದರು.