ಉಪನ್ಯಾಸಕರಿಗೆ ವೇತನ ಸಹಿತ ವ್ಯಾಸಂಗಕ್ಕೆ ಅನುಮತಿ, ಷರತ್ತುಗಳು

0
99

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ) ಉಪನ್ಯಾಸಕರುಗಳನ್ನು ಬಿ.ಇಡಿ ಪದವಿ ವ್ಯಾಸಂಗಕ್ಕಾಗಿ ನಿಯೋಜಿಸುವ ಕುರಿತು ಆದೇಶವನ್ನು ಹೊರಡಿಸಿದೆ. ವೇತನ ಸಹಿತ ವ್ಯಾಸಂಗಕ್ಕೆ ಅನುಮತಿ ನೀಡಿದ್ದು, ಷರತ್ತುಗಳು ಅನ್ವಯವಾಗುತ್ತದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಪದ್ಮನಿ ಎಸ್.ಎನ್., ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ) ಆದೇಶವನ್ನು ಹೊರಡಿಸಿದ್ದಾರೆ.

ಆದೇಶ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನೇಮಕಗೊಂಡು ಅನುದಾನಕ್ಕೆ ಒಳಪಟ್ಟಿರುವ ಬಿ.ಇಡಿ ಪದವಿಯನ್ನು ಹೊಂದಿಲ್ಲದ ಉಪನ್ಯಾಸಕರುಗಳನ್ನು ಬಿ.ಇಡಿ ಪದವಿ ವ್ಯಾಸಂಗಕ್ಕಾಗಿ ನಿಯೋಜಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ/ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ 04-02-2008ರ ನಂತರ ಆಯ್ಕೆಯಾಗಿರುವ ವಿವಿಧ ವಿಷಯಗಳ ಉಪನ್ಯಾಸಕರುಗಳಿಗೆ ಬಿ.ಇಡಿ ವ್ಯಾಸಂಗವನ್ನು ಕಡ್ಡಾಯಗೊಳಿಸಲಾಗಿರುತ್ತದೆ. 2007ರ ಪ್ರಾರಂಭವಾದ ದಿನಾಂಕದಿಂದ 6 ವರ್ಷಗಳ ಅವಧಿಯಲ್ಲಿ ಬಿ.ಇಡಿ ಅಥವಾ ಸಮಾನ ಅರ್ಹತೆಯಲ್ಲಿ ಉತ್ತೀರ್ಣರಾಗದ ಮತ್ತು ನೇಮಕಾತಿಗೆ ಪರಿಗಣಿಸಲಾದ ಅಭ್ಯರ್ಥಿಗಳು, ಅವರ ನೇಮಕಾತಿ ದಿನಾಂಕದಿಂದ 7 ವರ್ಷಗಳ ಅವಧಿಯೊಳಗೆ ಅವರ ಸ್ವಂತ ವೆಚ್ಚದಲ್ಲಿ ಬಿ.ಇಡಿ ಪದವಿ ಅಥವಾ ಅದರ ಸಮನಾಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅನುಮತಿಸಲಾಗಿರುತ್ತದೆ.

ಈ ಅವಧಿಯೊಳಗಾಗಿ ಬಿ.ಇಡಿ ಪದವಿ ಅಥವಾ ಸಮನಾಂತರ ಅರ್ಹತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿರುತ್ತದೆ. ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪುರ್ವ) ಇವರ ಪ್ರಸ್ತಾವನೆಯಲ್ಲಿ ‘ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ 04-02-2008ರ ಪೂರ್ವದಲ್ಲಿ ನೇಮಕಗೊಂಡು ಒಟ್ಟು 876 ಉಪನ್ಯಾಸಕರು ಅನುದಾನಕ್ಕೆ ಒಳಪಟ್ಟಿದ್ದು, ದಿನಾಂಕ 22-10-2021ರ ಪ್ರಕಾರ 450 ಉಪನ್ಯಾಸಕರು ಬಿ.ಇಡಿ ಪದವಿಯಿಂದ ವಿನಾಯ್ತಿ ಪಡೆದಿರುತ್ತಾರೆ.

62 ಉಪನ್ಯಾಸಕರ ಹುದ್ದೆಗಳು ನಿವೃತ್ತಿ ನಿಧನ/ ರಾಜೀನಾಮ ಇತ್ಯಾದಿ ಕಾರಣಗಳಿಂದ ತೆರವಾಗಿರುತ್ತದೆ. ಬಾಕಿ 364 ಉಪನ್ಯಾಸಕರು ಬಿ.ಇಡಿ ಪದವಿಯನ್ನು ಪಡೆಯದೇ ಹಾಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ಪದವಿಯನ್ನು ಹೊಂದಿಲ್ಲದ ಉಪನ್ಯಾಸಕರುಗಳು ಬಿ.ಇಡಿ ಪದವಿ ಹೊಂದಲು ಸೂಕ್ತ ಆದೇಶ ಹೊರಡಿಸಲು ಕೋರಿರುವುದನ್ನು ನಿಯಮಾನುಸಾರ ಪರಿಶೀಲಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಬಿ.ಇಡಿ ಪದವಿ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜನೆ ಮಾಡಲು ಹಾಗೂ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಕಗೊಳಿಸಲಾಗುವ ಅಥಿತಿ ಉಪನ್ಯಾಸಕರುಗಳಿಗೆ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಲ್ಲಿಯೇ ಭರಿಸುವ ಕುರಿತು ತೀರ್ಮಾನಿಸಲಾಗಿರುತ್ತದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ 04-02-2003ರ ನಂತರದಲ್ಲಿ ನೇಮಕಗೊಂಡು, ಅನುದಾನಕ್ಕೆ ಒಳಪಟ್ಟಿರುವ ಉಪನ್ಯಾಸಕರುಗಳ ವ್ಯಕ್ತಿ ಬಿ.ಇಡಿ ಪದವಿಯನ್ನು ಹೊಂದಿರದ 364 ಉಪನ್ಯಾಸಕರುಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ಬಿ.ಇಡಿ ಪದವಿ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜನೆ ಮಾಡಲು ಹಾಗೂ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಕಗೊಳಿಸಲಾಗುವ ಅಥಿತಿ ಉಪನ್ಯಾಸಕರುಗಳಿಗೆ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಲ್ಲಿಯೇ ಭರಿಸಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.

ಷರತ್ತುಗಳು

  • ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಪತ್ರ ದಿನಾಂಕ 05-03-2025ರಲ್ಲಿ ಉಲ್ಲೇಖಿಸಿರುವ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳತಕ್ಕದ್ದು.
  • ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆಗೊಳಪಡುವ ಉಪನ್ಯಾಸಕರ ಕಾರ್ಯಭಾರದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು, ಸದರಿ ನಿಯೋಜನೆಗೊಂಡ ಉಪನ್ಯಾಸಕರ ವೇತನದಲ್ಲಿಯೇ ಅತಿಥಿ ಉಪನ್ಯಾಸಕರ ವೇತನವನ್ನು ಭರಿಸತಕ್ಕದ್ದು. ಇದಕ್ಕೆ ನಿಯೋಜನೆ ಮೇಲೆ ತೆರಳುವ ಉಪನ್ಯಾಸಕರಿಂದ ಒಪ್ಪಿಗೆ/ ಮುಚ್ಚಳಿಕೆ ಪತ್ರವನ್ನು ಪಡೆಯತಕ್ಕದ್ದು.
  • ಪುಸ್ತಾಪಿತ ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆ ಮೇಲೆ ತೆರಳಲಿರುವ ಉಪನ್ಯಾಸಕರುಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಬಿ.ಇಡಿ ವ್ಯಾಸಂಗವನ್ನು ಪೂರೈಸತಕ್ಕದ್ದು, ಇಲಾಖೆಯಿಂದ ಸದರಿ ವ್ಯಾಸಂಗಕ್ಕೆ ತಗಲುವ ಶುಲ್ಕ ಹಾಗೂ ಇತರ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ.
  • ಸದರಿ ಬಿ.ಇಡಿ ವ್ಯಾಸಂಗವನ್ನು ನಿಗದಿತ 2 ವರ್ಷಗಳ ಅಥವಾ ಬಿ.ಇಡಿ ವ್ಯಾಸಂಗ ಪೂರ್ಣಗೊಳ್ಳುವ ಅವಧಿಯೊಳಗೆ ಯಾವುದೂ ಮೊದಲು ಅದರೂಳಗಾಗಿ ಪೂರ್ಣಗೊಳಿಸತಕ್ಕದ್ದು ಇಲ್ಲವಾದಲ್ಲಿ ಸೇವೆಯಿಂದ ವಿಮುಕ್ತಿಗೊಳಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು.
  • ಪ್ರಸ್ತಾಪಿತ ಬಿ.ಇಡಿ ವ್ಯಾಸಂಗಕ್ಕೆ ನಿಯೋಜಿಸುವ ಸಮಯ ಹಾಗೂ ಇತ್ಯಾದಿಗಳ ಅಂಶಗಳ ಕುರಿತು ಇಲಾಖಾ ಮುಖ್ಯಸ್ಥರಾದ ನಿರ್ದೇಶಕರ ಹಂತದಲ್ಲಿಯೇ ನಿರ್ಧರಿಸುವುದು.
  • ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆಗೊಳ್ಳುವ ಉಪನ್ಯಾಸಕರುಗಳಿಗೆ ನಿಯೋಜನೆಗೊಂಡ ಅವಧಿಯಲ್ಲಿ ಕಾರ್ಯನಿರತ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಯಾವುದೇ ರಜಾ ಸೌಲಭ್ಯಗಳನ್ನು ದೊರಕುವುದಿಲ್ಲ.
  • ಸದರಿ ಉಪನ್ಯಾಸಕರುಗಳ ಪರೀಕ್ಷಾರ್ಥ ಅವಧಿಯನ್ನು ಬಿ.ಇಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭವಿಷ್ಯಾನ್ಯಯವಾಗಿ ನಿಯಮಾನುಸಾರ ಘೋಷಣೆ ಮಾಡತಕ್ಕದ್ದು ಹಾಗೂ ಅದರಂತೆಯೇ ವೇತನ ಬಡ್ತಿಯನ್ನು ಪರಿಗಣಿಸತಕ್ಕದ್ದು.
  • ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆಗೊಳ್ಳುವ ಸದರಿ 364 ಉಪನ್ಯಾಸಕರುಗಳ ಹೆಸರು ಮತ್ತು ಅವರು ಕಾರ್ಯನಿರ್ವಹಿಸುತ್ತಿರುವ ಕಾಲೇಜು ಮತ್ತು ಸ್ಥಳವನ್ನು ನಿರ್ದೇಶಕರ ಹಂತದಲ್ಲಿ ಮತ್ತೋಮ್ಮೆ ದೃಢಪಡಿಸಿಕೊಳ್ಳತಕ್ಕದ್ದು.
Previous articleALTT ಸೇರಿದಂತೆ 25 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಕೇಂದ್ರ ಸರ್ಕಾರ
Next articleಮಣಿಪುರ: ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ

LEAVE A REPLY

Please enter your comment!
Please enter your name here