ಕಾಡಿನೊಳಗೆ ದನ, ಕುರಿ ಮೇಯಿಸುವಂತಿಲ್ಲ!

1
163

ಬೆಂಗಳೂರು: ಅಭಯಾರಣ್ಯ ಸೇರಿದಂತೆ ವಿವಿಧ ಘೋಷಣೆ, ನಿಯಮಗಳ ಕಾರಣಕ್ಕೆ ಕಾಡಂಚಿನ ಜನರು ಈಗಾಗಲೇ ಕರ್ನಾಟಕದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಮತ್ತೊಂದು ಸೂಚನೆ ವಿವಾದ ಹುಟ್ಟು ಹಾಕುವ ನಿರೀಕ್ಷೆ ಇದೆ.

ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸೂಚನೆ ಕೊಟ್ಟಿದ್ದಾರೆ.

ಈ ಕುರಿತು ಸಚಿವರು ಅಪರ ಮುಖ್ಯ ಕಾರ್ಯದರ್ಶಿಯವರು, ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ಟಿಪ್ಪಣಿಯನ್ನು ಹೊರಡಿಸಿದ್ದಾರೆ. ಇಂತಹ ತೀರ್ಮಾನಕ್ಕೆ ಕಾರಣ ಏನು? ಎಂದು ಸಚಿವರು ವಿವರಣೆ ನೀಡಿದ್ದಾರೆ.

ಸಚಿವರ ಟಿಪ್ಪಣಿ: ಮಲೆ ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಜೀವಿ ಧಾಮಗಳ ಅಂಚಿನ ಕೆಲವು ಗ್ರಾಮಸ್ಥರು ಬಹು ದೊಡ್ಡ ಸಂಖ್ಯೆಯಲ್ಲಿ ಕುರಿ, ಮೇಕೆ ಮತ್ತು ದನಕರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುತ್ತಿದ್ದು, ಈ ಸಾಕು ಪ್ರಾಣಿಗಳು ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳನ್ನೂ ತಿನ್ನುವ ಕಾರಣ ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ.

ಜೊತೆಗೆ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ.

ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಮುಂದುವರಿದು, ಕಾಡಿನಲ್ಲಿ ವನ್ಯಜೀವಿಗಳು ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು 4 ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದೂ ಅಭಿಪ್ರಾಯಪಟ್ಟಿರುತ್ತಾರೆ.

ಮಿಗಿಲಾಗಿ ಮದ್ರಾಸ್ ಹೈಕೋರ್ಟ್ 04.03.2022ರಂದು ನೀಡಿರುವ ತೀರ್ಪಿನಲ್ಲಿ “The authorities are directed not to allow any domesticated cattle to venture into the forest area for the purpose of grazing, throughout the forest area in Tamil Nadu ಎಂದು ನಿರ್ದೇಶನ ನೀಡಿದ್ದು, ಈಗ ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ ಎಂದು ತಿಳಿಸಿರುತ್ತಾರೆ.

ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಸಚಿವರು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ದನಗಳನ್ನು ಎಲ್ಲಿ ಬಿಡಬೇಕು?: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಕಾಡಂಚಿನಲ್ಲಿ ಹಲವಾರು ಗ್ರಾಮಗಳಿವೆ. ಅವರುಗಳು ಮನೆಯಲ್ಲಿ ಜಾನುವಾರುಗಳನ್ನು ಸಾಕಿದ್ದಾರೆ. ಅವುಗಳನ್ನು ಕಟ್ಟಿಹಾಕಿ ಸಾಕಲು ಆಗದು, ಈಗ ಕಾಡಿನಲ್ಲಿಯೂ ಮೇಯಲು ಬಿಡಬಾರದು ಎಂದರೆ ಅವುಗಳನ್ನು ಏನು ಮಾಡಬೇಕು? ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಹಲವಾರು ಗ್ರಾಮಗಳಲ್ಲಿ ಗೋಮಾಳಗಳು ನಾಪತ್ತೆಯಾಗಿವೆ. ಸಚಿವರು ಟಿಪ್ಪಣಿ ಹೊರಡಿಸುವ ಮೊದಲು ಕಾಗದದಲ್ಲಿ ಮಾತ್ರ ನೋಡದೇ ಗೋಮಾಳಗಳು ಎಷ್ಟಿವೆ? ಎಂದು ಅಧಿಕಾರಿಗಳಿಂದ ಮಾಹಿತಿ ಪಡೆಯಲಿ ಎಂದು ಜನರು ಸಲಹೆ ನೀಡಿದ್ದಾರೆ.

Previous articleಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನಿಯೋಜನೆ, ಸರ್ಕಾರದ ಮಹತ್ವದ ಆದೇಶ
Next articleNamma Metro: ಶುಭ ಸುದ್ದಿ, ಹಳದಿ ಮಾರ್ಗದ ಸಿಎಂಆರ್‌ಎಸ್‌ ಪರಿಶೀಲನೆ ಶುರು

1 COMMENT

LEAVE A REPLY

Please enter your comment!
Please enter your name here