ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರಿನ ಸೇತುವೆ ಲೋಕಾರ್ಪಣೆಯಾಗಿದೆ. ಭಾರತದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ನೋಡಲು ನೂರಾರು ಜನರು ಆಗಮಿಸುತ್ತಿದ್ದಾರೆ. ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಹ ಭಕ್ತರ ಸಂಖ್ಯೆ ಅಧಿಕವಾಗಿದೆ.
ಇಷ್ಟು ದಿನ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೋಗುವಾಗ ಲಾಂಚ್ ಮೂಲಕ ತೆರೆಳಬೇಕಿತ್ತು. ಆದ್ದರಿಂದ ಬಸ್‌ಗಳ ಸಂಖ್ಯೆ ಸೀಮಿತವಾಗಿತ್ತು. ಆದರೆ ಈ ಸೇತುವೆ ಉದ್ಘಾಟನೆಯಾಗಿದ್ದು, ನೂರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿಯನ್ನು ನೀಡಿದೆ. ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದ್ದು, ಭಕ್ತರು ಸುಲಭವಾಗಿ ಸಂಚಾರ ನಡೆಸಲು ಅನುಕೂಲ ಮಾಡಿಕೊಟ್ಟಿದೆ.
ಎಲ್ಲಿಂದ ಬಸ್ ಸೇವೆ?; ಅಂಬಾರಗೋಡ್ಲು ಮತ್ತು ಕಳಸವಳ್ಳಿ ಗ್ರಾಮವನ್ನು ಸಂಪರ್ಕಿಸುವ ಸಿಗಂದೂರು ಬ್ರಿಡ್ಜ್ ಉದ್ಘಾಟನೆ ಬಳಿಕ ಹೆಚ್ಚಿನ ಬಸ್‌ಗಳನ್ನು ಕೆಎಸ್ಆರ್‌ಟಿಸಿ ಓಡಿಸುತ್ತಿದೆ.
ಆದ್ದರಿಂದ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ ಹೆಚ್ಚುವರಿ ಬಸ್‌ಗಳನ್ನು ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಮಾರ್ಗಕ್ಕೆ ನಿಯೋಜನೆ ಮಾಡಿದೆ. ಈ ಹಿಂದೆ ಕೇವಲ ಮೂರು ಬಸ್‌ಗಳು ಸಿಂಗದೂರಿಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದವು.
ಬೆಳಗ್ಗೆ ಬಸ್ ಭಕ್ತರನ್ನು ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಿತ್ತು. ಸಂಜೆ ವಾಪಸ್ ಕರೆದುಕೊಂಡು ಬರುತ್ತಿತ್ತು. ಈಗ ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಸಾಗರ ಪಟ್ಟಣದಿಂದ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೆಚ್ಚುವರಿಯಾಗಿ 2 ಬಸ್‌ಗಳನ್ನು ಓಡಿಸುತ್ತಿದೆ. ಅಲ್ಲದೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಾಗದಿಂದ ತಲಾ ಒಂದು ಬಸ್ ನಿಯೋಜನೆ ಮಾಡಲಾಗಿದೆ.
ಹೊಸ ಬಸ್‌ಗಳ ದಿನವಿಡೀ ಸೇವೆಯನ್ನು ನೀಡುವುದರಿಂದ ವಿವಿಧ ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಬಳಿ ಪಾರ್ಕಿಂಗ್ ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ವಿಶೇಷ ರೈಲು ವ್ಯವಸ್ಥೆ: ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ, ಸಿಗಂದೂರು ಕೇಬಲ್ ಬ್ರಿಡ್ಜ್ ನೋಡಲು ಹೋಗುವ ಜನರಿಗೆ ಸಹಾಯಕವಾಗಲ ನೈಋತ್ಯ ರೈಲ್ವೆ ವಿಶೇಷ ರೈಲು ಓಡಿಸುತ್ತಿದೆ.
ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/ 06588) ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸಲಿದೆ. ರೈಲು ಸಂಖ್ಯೆ 06587 ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 25ರಂದು ರಾತ್ರಿ 10:30ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 04:15ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 26ರಂದು ಬೆಳಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗದಲ್ಲಿ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ.