Fish Venkat: ತೆಲುಗು ನಟ ಫಿಶ್ ವೆಂಕಟ್ ಇನ್ನಿಲ್ಲ

0
248

ಹೈದರಾಬಾದ್: ತೆಲುಗು ಸಿನಿಮಾ ರಂಗದ ಹಾಸ್ಯ ನಟ ಫಿಶ್ ವೆಂಕಟ್ (53) ವಿಧಿವಶರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದಿಂದ ಅವರು ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶನಿವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಫಿಶ್ ವೆಂಕಟ್ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ. ಫಿಶ್ ವೆಂಕಟ್ ಪತ್ನಿ ಮತ್ತು ಪುತ್ರಿಯರನ್ನು ಅಗಲಿದ್ದಾರೆ. ಚಿತ್ರರಂಗದ ಹಲವು ಗಣ್ಯರು ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮಾಹಿತಿಗಳ ಪ್ರಕಾರ ಕಿಡ್ನಿ ಮತ್ತು ಲಿವರ್ ಸಮಸ್ಯೆಗಳಿಂದ ಫಿಶ್ ವೆಂಕಟ್ ಬಳಲುತ್ತಿದ್ದರು. ಕಳೆದ ವಾರದಿಂದ ಅವರ ವಿವಿಧ ಅಂಗಾಂಗಳು ವೈಫಲ್ಯಗೊಂಡಿದ್ದವು. ಯಾವುದೇ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿರಲಿಲ್ಲ.

ಬಹು ಅಂಗಾಂಗ ವೈಫಲ್ಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಡಯಾಲಿಸಿಸ್‌ಗಾಗಿ ಫಿಶ್ ವೆಂಕಟ್ ಆಸ್ಪತ್ರೆಗೆ ಆಗಮಿಸಿದ್ದರು. ಪರೀಕ್ಷೆ ನಡೆಸಿದಾಗ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದವು ಎಂದು ಆಸ್ಪತ್ರೆ ಹೇಳಿದೆ.

ಫಿಶ್ ವೆಂಕಟ್ ಚಿಕಿತ್ಸೆಗೆ ಹಣದ ಕೊರತೆ ಎದುರಾಗಿತ್ತು. ದಾನಿಗಳು ಸಹಕಾರ ನೀಡಬೇಕು ಎಂದು ಕುಟುಂಬದವರು ಮನವಿ ಮಾಡಿದ್ದರು. ನಟನ ಪುತ್ರ 50 ಲಕ್ಷ ಸಹಾಯ ಮಾಡುವಂತೆ ಮನವಿಯನ್ನು ಮಾಡಿದ್ದರು.

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಸೇರಿದಂತೆ ಹಲವು ನಟರು ಫಿಶ್ ವೆಂಕಟ್ ಕುಟುಂಬಕ್ಕೆ ಹಣದ ಸಹಾಯವನ್ನು ಮಾಡಿದ್ದರು ಎಂಬ ವರದಿಗಳಿವೆ. ತೆಲಂಗಾಣ ಭಾಗದ ತೆಲುಗು ಭಾಷೆಯ ಮೂಲಕ ಡೈಲಾಗ್ ಹೊಡೆಯುತ್ತಿದ್ದ ವೆಂಕಟ್ ಹಲವು ನಟರ ಜೊತೆ ನಟಿಸಿ, ಚಿತ್ರರಂಗದ ಖ್ಯಾತ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದರು.

ಮಂಗಳಪಲ್ಲಿ ವೆಂಕಟೇಶ್ ಸಿನಿಮಾವೊಂದರಲ್ಲಿ ಮೀನು ಮಾರುಕಟ್ಟೆಯ ಸನ್ನಿವೇಶದಲ್ಲಿ ಅಮೋಘವಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಅವರಿಗೆ ಅಭಿಮಾನಿಗಳು ಫಿಶ್ ವೆಂಕಟ್ ಎಂದೇ ಕರೆಯುತ್ತಿದ್ದರು. ಗಬ್ಬರ್ ಸಿಂಗ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ತೆಲುಗಿನ ಖ್ಯಾತ ನಟರ ಜೊತೆ ವೆಂಕಟ್ ನಟಿಸಿದ್ದರು.

ಮೂಲತಃ ವೆಂಕಟ್ ಮಚಲಿಪಟ್ಟಣ ಮೂಲದವರು. ಮೊದಲು ಹೈದರಾಬಾದ್‌ನಲ್ಲಿ ಅವರು ಮೀನು ವ್ಯಾಪಾರವನ್ನು ಮಾಡುತ್ತಿದ್ದರು. 2000ನೇ ಇಸವಿಯಲ್ಲಿ ಅವರು ಸಿನಿಮಾದಲ್ಲಿ ಅಭಿನಯಿಸಲು ಪ್ರಾರಂಭಿಸಿದ್ದರು. ಖುಷಿ, ಆದಿ, ಗಬ್ಬರ್ ಸಿಂಗ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದರು.

Previous articleNamma Metro: ನಮ್ಮ ಮೆಟ್ರೋ ಹಳದಿ ಮಾರ್ಗ, ಜನರಿಗೆ ಗುಡ್‌ನ್ಯೂಸ್
Next articleಕೂಡಲಸಂಗಮ ಪೀಠಕ್ಕೆ ಹೊಸ ಸ್ವಾಮೀಜಿ ನೇಮಕ?

LEAVE A REPLY

Please enter your comment!
Please enter your name here