ಹುಬ್ಬಳ್ಳಿಯ ಐದು ವರ್ಷ ಕಂದಮ್ಮನನ್ನು ಅತ್ಯಾಚಾರಗೈದು, ಕತ್ತು ಹಿಸುಕಿ ಕೊಲೆಗೈದ ಘಟನೆಗೆ ಮರುಗದವರಿಲ್ಲ. ಛೆ ಏನಿದು ಈ ನಾಗರಿಕ ಸಮಾಜದಲ್ಲಿ ಎಂದು ಕಣ್ಣೀರು ಹಾಕದವರಿಲ್ಲ.
ಬಾಲಕಿಯ ಸಾವಿಗೆ ತಕ್ಷಣವೇ ನ್ಯಾಯ ಕೋರಿ, ಜಾತಿ, ಸಂಬಂಧ, ಧರ್ಮ, ಪಕ್ಷ, ಪಂಗಡ, ವರ್ಗ ಯಾವುದನ್ನೂ ಲೆಕ್ಕಿಸದೇ ಜನಸಮೂಹ ಆಗ್ರಹಗೈದಿತ್ತು. ಅತ್ಯಾಚಾರಗೈದು ಕೊಲೆಗೈದಿದ್ದ ಬಿಹಾರದ ಆರೋಪಿ ಸಂಜೆಯೊಳಗೆ ಪೊಲೀಸ್ ಗುಂಡೇಟಿನಿಂದ ಹತನಾದ.
ಆತನನ್ನು ವಶಕ್ಕೆ ಪಡೆದು ವಿಚಾರಣೆಯ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನುವ ಪೊಲೀಸರು ಎನ್ಕೌಂಟರ್ಗೆ ಕಾರಣ ನೀಡಿದ್ದಾರೆ. ಮುಂಜಾನೆ ಪೊಲೀಸರ ಅಸಹಾಯಕತೆ ಹಾಗೂ ತ್ವರಿತ ನ್ಯಾಯಕ್ಕಾಗಿ ಆಗ್ರಹಿಸಿದ ಜನರೇ ಸಂಜೆ ಎನ್ಕೌಂಟರ್ ಆದಾಗ ಸಂಭ್ರಮಪಟ್ಟರು. ವಿಜಯೋತ್ಸವ ಆಚರಿಸಿದರು. ಪೊಲೀಸರಿಗೆ ಬಹುಪರಾಕ್ ಎಂದರು.
ಪಾತಕಿ ಪಾಪಿಯ ಕ್ರೌರ್ಯದ ಹಿಂದೆ ಏನಿದೆ? ಯಾರೀತ? ಇಲ್ಲಿಗೆ ಏಕೆ ಬಂದ? ಯಾವಾಗ ಬಂದ? ಈತ ಸೈಕೋಪಾತ್? ಅಥವಾ ಹುಚ್ಚು ಕಾಮಪಿಪಾಸಿಯೇ? ಡ್ರಗ್ ಚಟಗಾರನೇ? ಹಿಂದೆ ಏನೆಲ್ಲ ಪಾಪ ಕೃತ್ಯ ಮಾಡಿದ್ದ ಎಂಬುವುಗಳೆಲ್ಲ ಎನ್ಕೌಂಟರ್ನಿಂದಾಗಿ ಹೊರಬರದಂತಾಯಿತು. ಇದರೊಟ್ಟಿಗೆ ಹತ್ತು ಹಲವು ಪ್ರಶ್ನೆಗಳು ಕೂಡ ಉದ್ಭವವಾಗಿವೆ.
ಎನ್ಕೌಂಟರ್ ಮಾಡಿದ್ದು ಸರಿ-ತಪ್ಪು ಎನ್ನುವ ವಿಶ್ಲೇಷಣೆ ಒಂದೆಡೆಯಾದರೆ, ಜನ ಸರ್ಕಾರಿ ವ್ಯವಸ್ಥೆ, ನ್ಯಾಯದಾನ ವಿಳಂಬ, ವಿಚಾರಣೆ, ರಾಜಕೀಯ ಮತ್ತು ಕ್ರಿಮಿನಲ್ಗಳ ಪ್ರಭಾವ ಇವೆಲ್ಲ ಅಂಶಗಳನ್ನೂ ಚರ್ಚೆ ಮತ್ತು ತರ್ಕಗಳಿಗೆ ಒಡ್ಡುವಂತಾಗಿದೆ ಈಗ.
ಈ ಸಂಬಂಧ ಕೇಂದ್ರ ಸರ್ಕಾರ ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆ ೨೦೧೮ನ್ನು ಜಾರಿಗೆ ತಂದು, ಅತ್ಯಾಚಾರ ಅಪರಾಧಿಗಳಿಗೆ ಮರಣ ದಂಡನೆ ಸೇರಿ ಕಠಿಣ ಶಿಕ್ಷೆಯನ್ನು ತಂದಿತ್ತು. ಇದು ಪ್ರತಿ ರಾಜ್ಯಗಳಲ್ಲಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ ರಚನೆಗೆ ಪ್ರಸ್ತಾಪಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ಕಾರ್ಯ ಆಗಲೇ ಇಲ್ಲ.
ಫಾಸ್ಟ್ ಟ್ರ್ಯಾಕ್ ಕೋರ್ಟ್ನಲ್ಲಿ ಒಂದೆರಡು ಪ್ರಕರಣಗಳು ಮಾತ್ರ ವರ್ಷದ ಒಳಗೆ ವಿಚಾರಣೆ ಪೂರ್ಣಗೊಂಡು ಶಿಕ್ಷೆ ಪ್ರಕಟವಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಪೋಕ್ಸೊ ಕಾಯ್ದೆ' 2019ರಲ್ಲಿ ಜಾರಿಗೆ ಬಂತು. ಸರ್ಕಾರವೇ ಬಿಡುಗಡೆ ಮಾಡಿದ ಅಂಕಿಸಂಖ್ಯೆಯಂತೆ ಒಂದು ಲಕ್ಷ ನಾಗರಿಕರಲ್ಲಿ 2172 ಅತ್ಯಾಚಾರ ಸಂಭವಿಸಿವೆ. ಅಂದರೆ ಶೇ. 1.80ರಂತೆ ಅತ್ಯಾಚಾರ ಆಗಿವೆ. ಮಾನವ ಹಕ್ಕುಗಳಿಗಾಗಿ ಇರುವ ಸಂಸ್ಥೆಗಳು ಮತ್ತು ವಿಶ್ವ ಜನಸಂಖ್ಯೆಯ ದತ್ತಾಂಶದ ಪ್ರಕಾರ ಭಾರತದಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ!! ಪೋಕ್ಸೊ ಜಾರಿಯ ನಂತರವೂ ಅತ್ಯಾಚಾರ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ದುರಂತವೆಂದರೆ 18 ವಯಸ್ಸಿಗಿಂತ ಕಡಿಮೆ ವಯಸ್ಸಿನ ಬಲಿಪಶುಗಳೇ ಶೇ. 10ರಷ್ಟು. ಎನ್ಸಿಆರ್ಬಿ ಹೇಳಿರುವಂತೆಯೇ ದೇಶಾದ್ಯಂತ 2021-22ರಲ್ಲಿ 31,677 ಪ್ರಕರಣ ಸಂಭವಿಸಿವೆ. ವಿಚಾರಣೆ ಮುಗಿದು ಆರೋಪಿಗೆ ಶಿಕ್ಷೆಯಾಗಿರುವುದು ಶೇ. 1ರಷ್ಟು ಮಾತ್ರ! ನ್ಯಾಯಾಲಯಗಳಲ್ಲಿ 10ರಿಂದ 15 ವರ್ಷಗಳವರೆಗೆ ಬಾಲಕಿಯ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿವೆ. ಶೇ. 4ರಷ್ಟು ಪ್ರಕರಣಗಳು 8 ವರ್ಷಕ್ಕಿಂತ ಮೊದಲು ಇತ್ಯರ್ಥಗೊಂಡರೂ ಉನ್ನತ ಹಂತದ ನ್ಯಾಯಾಲಯಗಳಲ್ಲಿ ಮೇಲ್ಮನವಿ ವಿಚಾರಣೆ ಇತ್ಯಾದಿಗಳಿಂದ ಶಿಕ್ಷೆ ಜಾರಿಗೆ ವಿಳಂಬವಾಗುತ್ತಿದೆ. ಮೊನ್ನೆ ಮೊನ್ನೆ ಹೈದರಾಬಾದ್ನ ಪ್ರಕರಣದಲ್ಲಿ 40 ವರ್ಷಗಳ ಕಾಲ ನ್ಯಾಯಾಲಯಗಳ ವಿಚಾರಣೆ ನಡೆದಿದೆ. ಸಂತ್ರಸ್ತೆಯ ಬಾಳು ಏನಾಗಬೇಕು? ರಾಜ್ಯವನ್ನೇ ನೋಡಿ. 2020ರಲ್ಲಿ 4547 ಪ್ರಕರಣಗಳು ವರದಿಯಾದರೆ, 2024ರಲ್ಲಿ 6326 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಶಿಕ್ಷೆಯಾಗಿದ್ದು ಕೇವಲ 24 !! 3300 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಬೆಂಗಳೂರಿನಲ್ಲಿಯೇ 2013ರಿಂದ 2023ರವರೆಗೆ ಒಟ್ಟು 1322 ಪ್ರಕರಣಗಳು ದಾಖಲಾಗಿದ್ದರೆ ಶಿಕ್ಷೆಯಾಗಿದ್ದು ಕೇವಲ 10 ಪ್ರಕರಣಗಳಲ್ಲಿ ಮಾತ್ರ. ಸಾಕ್ಷಿ ಕೊರತೆ, ಸುಳ್ಳು ಪ್ರಕರಣ, ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರ ಮೇಲೆ ಒತ್ತಡ ಇತ್ಯಾದಿಗಳೇ ಇದಕ್ಕೆ ಕಾರಣ. ಇನ್ನೊಂದು ಗಂಭೀರ ಪ್ರಶ್ನೆ ಎದ್ದಿದೆ. ಏನೆಂದರೆ, ಸರ್ಕಾರ ಜಾರಿಗೆ ತಂದ
ಬೇಟಿ ಬಚಾವೋ, ಬೇಟಿ ಪಡಾವೋ’, ಅಂಗನವಾಡಿ-ಶಿಶುವಿಹಾರ ಕೇಂದ್ರಗಳು, ಮಕ್ಕಳ ರಕ್ಷಣಾ ಕಾಯ್ದೆ, ಬಾಲ ವಿಕಾಸ ಸಂಸ್ಥೆಗಳು ಸೇರಿದಂತೆ ಸರ್ಕಾರದ ಇಂತಹ ಹತ್ತಾರು ಯೋಜನೆಗಳು ಮೊನ್ನೆ ಹತಳಾದಳಲ್ಲ ಇಂತಹ ಬಡ ಮಕ್ಕಳಿಗೇಕೆ ಉಪಯೋಗ ಆಗುತ್ತಿಲ್ಲ.?
ಹುಬ್ಬಳ್ಳಿಯ ಐದು ವರ್ಷದ ನತದೃಷ್ಟ ಮಗುವಿಗೆ ವಿಕಲಚೇತನ ಪ್ರಮಾಣ ಪತ್ರವನ್ನೇನೋ ಸ್ಥಳೀಯ ಪ್ರಮುಖರು ಕೊಡಿಸಿದ್ದರು. ಆದರೆ ಈ ಮಗುವಿಗೆ ಅಂಗನವಾಡಿ ಪ್ರವೇಶ ನೀಡಿಲ್ಲ. ಸನಿಹದಲ್ಲೇ ಅಂಗನವಾಡಿಗಳಿದ್ದರೂ ಅವನ್ನು ಪ್ರವೇಶಿಸುವ ಅಥವಾ ಈ ಮಗು ಅವಕ್ಕೆ ಹೋಗುವಂತೆ ಮನವೊಲಿಸುವ ಕಾರ್ಯ ನಡೆದಿಲ್ಲ. ಆಕೆಯ ಪಾಲಕರು ಇಪ್ಪತ್ತೈದು ವರ್ಷಗಳಿಂದ ಕೂಲಿ ನಾಲಿ ಮಾಡುತ್ತ ಬದುಕುತ್ತಿದ್ದಾರೆ. ತಂದೆಯದ್ದೋ ಪೇಂಟರ್ ದಂಧೆ. ಸರ್ಕಾರದ ಕೂಲಿ ಕಾರ್ಡ್ ಈತನಿಗಿಲ್ಲ. ನತದೃಷ್ಟೆಯ ತಾಯಿಯೋ ಮನೆಗೆಲಸದವಳು. ತಂದೆ ಇಲ್ಲದ ಈಕೆ ಎರಡೂ ಸಂಸಾರಗಳನ್ನು ನೋಡಬೇಕು.
ಸರ್ಕಾರದ ಸವಲತ್ತುಗಳು ಬಡವರ ಪಾಲಿಗೆ ಬಂದಿಲ್ಲ. ಕಾರ್ಮಿಕ ಸಚಿವರು, ಸ್ಥಳೀಯ ಶಾಸಕರು, ಸಂಸದರೆಲ್ಲ ಘಟನೆಯ ನಂತರ ಭೇಟಿ ನೀಡಿದ್ದಾರೆ. ಹತ್ತಾರು ವರ್ಷಗಳಲ್ಲಿ ಹುಬ್ಬಳ್ಳಿಯಂತಹ ಮಹಾನಗರದಲ್ಲಿ ಬಡವರಿಗೆ ಮನೆ, ನಿವೇಶನರಹಿತರಿಗೆ ನಿವೇಶನ, ಆಶ್ರಯ, ಆರೋಗ್ಯ ಎಲ್ಲ ಘೋಷಣೆಗಳನ್ನು ಈ ಕುಟುಂಬ ಕೂಡ ಕೇಳಿದೆ. ಆದರೆ ಇಂತಹ ಬಡಜನರ ಬಳಿ ಇವ್ಯಾವೂ ಬಂದೇ ಇಲ್ಲ.
ಹಾಗೆಂದು ಈ ಪಾಪಿ ಗಾಂಜಾ ಮತ್ತಿನಲ್ಲಿದ್ದ ಎನ್ನಲಾಗುತ್ತಿದೆ. ಪೊಲೀಸರೂ ಒಪ್ಪುತ್ತಾರೆ. ಹುಬ್ಬಳ್ಳಿ ಮತ್ತು ಹುಬ್ಬಳ್ಳಿಯಂತಹ ಎರಡನೇ ಸ್ತರದ ನಗರಗಳಲ್ಲಿ ಗಾಂಜಾ, ಹೆರಾಯನ್, ಡ್ರಗ್ಸ್ ಇಷ್ಟು ಸುಲಭವಾಗಿ ಹೇಗೆ ಸಿಗುತ್ತಿದೆ? ಉಡ್ತಾ ಪಂಜಾಬ್ ರೀತಿ ಉಡ್ತಾ ಹುಬ್ಬಳ್ಳಿಯೂ ಆಗುತ್ತಿದೆಯೇ? ಈ ಅಂಶದ ಬಗ್ಗೆ ಆಳುವವರು ಗಂಭೀರವಾಗಿ ಪರಿಗಣಿಸಲು ಇದು ಸಕಾಲ.
ಕೂಲಿ ಮಾಡಿ ಬದುಕುತ್ತಿರುವ ಈ ಮಂದಿಯದ್ದು ಪ್ರಬಲ ಸಮುದಾಯ. ಅದೇ ಸಮುದಾಯದವರೇ ಆದ ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿ. ಸಮುದಾಯದ ಅನೇಕ ಗಣ್ಯರು, ಮಂತ್ರಿ ಮಹೋದಯರು, ಅಧಿಕಾರಿಗಳು ಆಗಿದ್ದಾರೆ. ಅದೇ ಸಮುದಾಯದಲ್ಲಿ ನಿತ್ಯ ಕೂಲಿಗೆ ಪರದಾಡುವ ಇಂತಹ ಕುಟುಂಬಗಳೂ ಇವೆ!. ತಾನೇ ಹೆತ್ತು ಸಾಕುತ್ತಿರುವ ಮಗಳನ್ನು ಈ ಬಡತಾಯಿಗೆ ಉಳಿಸಿಕೊಳ್ಳಲಾಗಲಿಲ್ಲ. ದುರಳರಿಂದ ರಕ್ಷಿಸಿಕೊಳ್ಳಲಾಗಲಿಲ್ಲ!
ಧರ್ಮ, ಜಾತಿ, ಸಮುದಾಯ, ಸರ್ಕಾರದ ಕಾನೂನು-ಕಟ್ಟಲೆ, ವ್ಯವಸ್ಥೆ, ರಕ್ಷಣೆ ಈ ಯಾವುವೂ ಇಂತಹ ಬಡಪಾಯಿಗಳ ಪಾಲಿಗೆ ಕೈಗೆಟುಕದ ಗಾವುದ ದೂರ. ಹುಬ್ಬಳ್ಳಿಯ ಬಾಲಕಿಯ ಕೊಲೆ, ಅತ್ಯಾಚಾರ ಇನ್ನೂ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ವ್ಯವಸ್ಥೆಯ ಲೋಪ ದೋಷಗಳನ್ನು ಗಂಭೀರವಾಗಿ ತೆರೆದಿಟ್ಟಿದೆ. ಯಾವ ಕಾಯ್ದೆ ಕಾನೂನು ಕಟ್ಟಲೆ ತಂದಿಟ್ಟರೇನು? ಎಂತಹ ಸೌಲಭ್ಯಗಳನ್ನು ಜಾರಿ ಮಾಡಿ ಯೋಜಿಸಿದರೇನು? ಮನಸ್ಥಿತಿ ಬದಲಾಗದ ದುಸ್ಥಿತಿಯಲ್ಲಿ ಇಂಥವರ ಬದುಕು ನರಳುತ್ತಿದೆ.
ಬಿಹಾರಿ ದುರುಳನ ದುಷ್ಕೃತ್ಯದ ನಂತರ ಈಗ ಹೊಸ ಯೋಚನೆ ಮೊಳಕೆಯೊಡೆದಿದೆ. ಬೇರೆ ರಾಜ್ಯದಿಂದ ವಲಸೆ ಬರುವವರ ಮೇಲೆ ನಿಗಾ ವಹಿಸುವ, ಅವರ ದಾಖಲೆಗಳನ್ನು ಸಂಗ್ರಹಿಸುವ, ಇದಕ್ಕೊಂದು ವ್ಯವಸ್ಥೆ ರೂಪಿಸುವ ಮಾತನ್ನು ಕಾರ್ಮಿಕ ಸಚಿವರೇನೋ ಹೇಳಿದ್ದಾರೆ. ವಲಸೆ ಮತ್ತು ಉದ್ಯೋಗ ಇವನ್ನ ಯಾವುದೇ ದೇಶದಲ್ಲಿ ನಿರ್ಬಂಧಿಸುವುದು ಕಷ್ಟ. ಅಸಾಧ್ಯವಾದುದು. ದುಡಿಮೆ ಸಂಸ್ಕೃತಿ ಮತ್ತು ಬದುಕುವ-ನೆಲೆಸುವ ಹಕ್ಕು ಹೊಂದಿರುವ ಈ ದೇಶದಲ್ಲಿ, ನಿರುದ್ಯೋಗ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಯಾರ ಮೇಲೆ ನಿಗಾ ಸಾಧ್ಯ?
ಇದೆಲ್ಲ ಏನೇ ಇರಲಿ. ಹುಬ್ಬಳ್ಳಿಯ ಅಮಾಯಕ ಬಾಲಕಿಯ ಕ್ರೂರ ಹತ್ಯೆ ಖಂಡನಾರ್ಹ. ಈ ಅಮಾನುಷ ಕೃತ್ಯ, ಕೊಲೆ, ಇದು ಹುಟ್ಟು ಹಾಕಿದ ಹತ್ತಾರು ಪ್ರಶ್ನೆಗಳ ಬಗ್ಗೆ ಆಳುವ ಸರ್ಕಾರಗಳು ಗಂಭೀರವಾಗಿ ಯೋಚಿಸಲೇಬೇಕಿದೆ. ಪರಿಹಾರವನ್ನು ಕಂಡುಹಿಡಿಯಲೇಬೇಕಿದೆ. ಇದು ಅಲ್ಪಕಾಲೀನ ಪರಿಹಾರವಾಗಕೂಡದು. ದೀರ್ಘ ಕಾಲೀನ ಉಪಾಯಗಳು ಹೊರಹೊಮ್ಮಬೇಕು. ಹಾಗೆಯೇ ಆರೋಪಿಯನ್ನ ಎನ್ಕೌಂಟರ್ ಮಾಡಲು ಎದುರಾದ ವ್ಯವಸ್ಥೆಯ ದೋಷ, ಪರಿಸ್ಥಿತಿಯ ಬಗ್ಗೆ ಕೂಡ ವಿಮರ್ಶೆಯಾಗಬೇಕಲ್ಲವೇ?