ಅನೌಪಚಾರಿಕತೆ

ನಿಜವಾದ ತೃಪ್ತಿಯ ಬಗ್ಗೆ ಚರ್ಚಿಸಲು ಸೌಹಾರ್ದವಾದ, ಅನೌಪಚಾರಿಕವಾದ ವಾತಾವರಣದಲ್ಲಿ ಇರಬೇಕು. ಎಲ್ಲರೂ ಮನೆಯಲ್ಲಿರುವಂತೆಯೇ ಭಾವಿಸುವುದು ಮುಖ್ಯ. ಹೃದಯಕ್ಕೆ ಸನಿಹವಾದ ಯಾವುದೇ ವಿಷಯವನ್ನು ಚರ್ಚಿಸಲು ಔಪಚಾರಿಕವಾದ ವಾತಾವರಣವು ಸರಿಹೊಂದುವುದಿಲ್ಲ.
ನಮ್ಮ ಸುತ್ತಲೂ ಇರುವ ಜನರತ್ತ ನೋಡಿ ನಾವೇಕೆ ಮುಗುಳ್ನಗಬಾರದು? ಏಕೆ ನಮ್ಮ ಜೀವನ ಬಹಳ ಒಣಗಿಹೋದಂತೆ ಅನಿಸುತ್ತದೆ ಗೊತ್ತೆ? ಏಕೆಂದರೆ ನಾವೆಲ್ಲರೂ ಬಹಳ ಔಪಚಾರಿಕ ಜಗತ್ತಿನಲ್ಲಿ ಜೀವಿಸುತ್ತಿರುವುದರಿಂದ. ನಮ್ಮ ಅಭಿನಂದನೆಗಳೂ ಬಹಳ ಔಪಚಾರಿಕ ಮತ್ತು ನಮ್ಮ ಕ್ಷಮಾಯಾಚನೆ ಸಹ ಬಹಳ ಔಪಚಾರಿಕವಾಗಿರುತ್ತದೆ. ನಾವು ಜೀವನದಲ್ಲಿ ಕೇವಲ ಮಾತುಗಳನ್ನಷ್ಟೇ ಬಳಸುತ್ತಿದ್ದೇವೆ. ಅವುಗಳ ಹಿಂದೆ ಭಾವನೆಯೇ ಇರುವುದಿಲ್ಲ.
ಒಂದು ವೇಳೆ ನೀವು ಯಾರ ಮನೆಗಾದರೂ ಹೋದರೆ, ಅವರು ಕೇವಲ ಔಪಚಾರಿಕವಾಗಿ ಮಾತನಾಡಿ ನಿಮ್ಮನ್ನು ಬೀಳ್ಕೊಟ್ಟರೆ ಅದರಿಂದ ನಿಮಗೆ ತೃಪ್ತಿಯಾಗುತ್ತದೆಯೆ?
ಭಾರತೀಯ ಹಳ್ಳಿಗಳಿಗೆ ಹೋದರೆ, ಅವರು ಗುಡಿಸಲಲ್ಲಿ ವಾಸವಾಗಿದ್ದರೂ ಸಹ ನಿಮಗೆ ನೀಡುವ ಸ್ವಾಗತವು ಅವರ ಹೃದಯಗಳ ಮುಗ್ಧತೆಯಿಂದ ಬರುತ್ತದೆ. ಅದು ನಿಮ್ಮ ಹೃದಯವನ್ನು ಮುಟ್ಟುತ್ತದೆ. ನಾವು ಸಾಮಾನ್ಯವಾಗಿ ನಡೆಸುವ ಸಂಭಾಷಣೆಗಳೆಲ್ಲವೂ ಒಂದು ಗಗನಸಖಿಯ ಮಾತುಗಳಂತೆಯೇ ಇರುತ್ತವೆ. `ಶುಭದಿನವಾಗಲಿ’ ಎಂಬ ಮಾತು ಬಾಯಿಂದ ಬರುತ್ತದೆಯೇ ವಿನಾ ಹೃದಯದಿಂದಲ್ಲ.
ನೈಜವಾಗಿರುವುದನ್ನು ನಾವು ಮರೆತೇಬಿಟ್ಟಿದ್ದೇವೆ. ನಮ್ಮ ನಡುವೆ ಏಕೆ ಗೋಡೆಗಳನ್ನು ಕಟ್ಟಿಕೊಂಡಿದ್ದೇವೆ? ಕೆಲವೊಮ್ಮೆ ಜನರು ತಮ್ಮ ಮಕ್ಕಳೊಡನೆಯೂ ಬಹಳ ಔಪಚಾರಿಕವಾಗಿ ವರ್ತಿಸುವುದನ್ನು ಕಂಡು ಬಹಳ ಆಶ್ಚರ್ಯವಾಗುತ್ತದೆ. ಜನ ತಮ್ಮ ಸುತ್ತಲೂ ಅಷ್ಟೊಂದು ಘನವಾದ ಕೋಟೆಗಳನ್ನು ಕಟ್ಟಿಕೊಂಡಿರುತ್ತಾರೆ. ಅಲ್ಲವೆ?
ನಮ್ಮ ಮಾತುಗಳು ಸೂಚಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಇರುವಿಕೆಯಿಂದಲೇ ನಾವು ಸೂಚಿಸಬಹುದು, ಮಾತನಾಡಬಹುದು. ಒಂದು ನಾಯಿ ಮನುಷ್ಯರಿಗಿಂತಲೂ ಚೆನ್ನಾಗಿ ಸಂಪರ್ಕಿಸುತ್ತದೆ ಎಂದು ನಮಗೆ ಯಾವಾಗಲೂ ಅನಿಸುತ್ತದೆ. ಅದಕ್ಕೆ ಮಾತನಾಡಲು ನಿಮ್ಮ ಭಾಷೆ ಬರದಿದ್ದರೂ ತನ್ನ ಕೃತ್ಯಗಳಿಂದ, ನಡವಳಿಕೆಯಿಂದ ಸ್ವಕೀಯ ಭಾವನೆಯನ್ನು ಸೂಚಿಸುತ್ತದೆ.
ನಮ್ಮ ಒತ್ತಡಗಳಿಂದ ಬಿಡುಗಡೆ ಹೊಂದಿದಾಗ ಮಾತ್ರ, ನಮ್ಮ ಅಂತರಾಳದ ಸಂಪರ್ಕ ಉಂಟಾಗಲು ಸಾಧ್ಯ. ಆಗ ಮಾತ್ರವೇ ನಿಜವಾದ ತೃಪ್ತಿ ಬರಲು ಸಾಧ್ಯ.