ಹತ್ತು ವರ್ಷದಲ್ಲಿ ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳ

ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದು, ಕಳೆದ ಹತ್ತು ವರ್ಷದಲ್ಲಿ ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ರೈಲ್ವೆ ಇಲಾಖೆ ಲಾಭದ ಹಳಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶನಿವಾರ ಇಂದು ಹಾವೇರಿಯ ಶ್ರೀ‌ ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಲಯದ ವತಿಯಿಂದ ಏರ್ಪಡಿಸಿದ್ದ ವಂದೇ ಭಾರತ ರೈಲು ನಿಲುಗಡೆ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.‌ಸೋಮಣ್ಣ ಅವರೊಂದಿಗೆ ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ನಾನು ಲೋಕಸಭೆಗೆ ಆಯ್ಕೆಯಾದ ಮೇಲೆ ಹಲವಾರು ರೈಲ್ವೆ ಯೋಜನೆಗಳ ಬಗ್ಗೆ ಸಭೆ ಮಾಡುತ್ತಿದ್ದೇವು. ಹಲವಾರು ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವು‌ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸಬೇಕೆಂಬ ಬೇಡಿಕೆ ಇತ್ತು. ಪ್ರತಿ ನಿತ್ಯ ನೂರಾರು ಜನ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಹಾವೇರಿ, ಬ್ಯಾಡಗಿ, ರಾಣೆಬೆನ್ನೂರಿನಿಂದ ಪ್ರತಿದಿನ ಹತ್ತು ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಅದನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ತಿಳಿಸಿದೆ. ಅವರು ಸಕಾರಾತ್ಮಕವಾಗಿ ಯೋಚಿಸುತ್ತಾರೆ. ಸುಮಾರು 45 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಸೋಮಣ್ಣ ಅವರಿದ್ದಾರೆ. ಅವರು ಕಾರ್ಪೊರೇಟರ್ ಆಗಿ ಶಾಸಕರಾಗಿ ಮಂತ್ರಿಯಾಗಿ, ಈಗ ಕೇಂದ್ರ ಸಚಿವರಾಗಿದ್ದಾರೆ. ಅವರನ್ನು ಮೊದಲಿನಿಂದಲೂ ನೋಡಿದ್ದೇನೆ. ಕೇಂದ್ರದ ರೈಲ್ವೆ ಇಲಾಖೆ ಸಂಪುಟ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಹೇಳಿದೆ. ಹಾವೇರಿಗೆ ವಂದೇ ಭಾರತ ರೈಲು ನಿಲುಗಡೆ ಮಾಡಬೇಕೆಂದು ಕೇಳಿದೆ. ಅವರು ಮಾಡುವುದಾಗಿ ಹೇಳಿದರು. ಅದರಂತೆ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗುತ್ತಿದೆ ಎಂದರು.

ಅಸಾಧ್ಯವನ್ನು ಸಾಧ್ಯ ಮಾಡುವ ಪ್ರಧಾನಿ
ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡುವುದೇ ಪ್ರಧಾನಿ ಮೋದಿಯವರ ಸಾಮರ್ಥ್ಯ, ಅವರು ರೈಲ್ವೆಯಲ್ಲಿ ಕ್ರಾಂತಿ ಮಾಡಿದ್ದಾರೆ‌. ರೈಲ್ವೆ ಲೈನು ಡಬ್ಲಿಂಗ್ ರೈಲ್ವೆ ಎಂಜಿನ್ ಯುನಿಫಿಕೇಶನ್ ಮಾಡಿದ್ದಾರೆ. ಕರ್ನಾಟಕದಲ್ಲಿ 2014ರಿಂದ 3,320 ಕಿ.ಮೀ ರೈಲ್ವೆ ಹಳಿ ಅಭಿವೃದ್ಧಿಯಾಗಿದೆ. ಇದಕ್ಕೂ ಮುಂಚೆ 900 ಕಿಮೀ ಆಗಿತ್ತು. ಇನ್ನೊಂದು ಕ್ರಾಂತಿ ರೈಲ್ವೆ ಸಿಗ್ನಲ್ ವ್ಯವಸ್ಥೆ ಬದಲಾವಣೆ ಮಾಡಿದ್ದಾರೆ. ಮೂರನೆಯದ್ದು ಕಂಟ್ರೋಲ್ ರೂಮ್ ಎಲ್ಲ ಬದಲಾವಣೆ ಮಾಡಿದ್ದಾರೆ. ಅದರ ಜೊತೆಗೆ ರೈಲ್ವೆ ಸ್ಪೀಡ್ ಹೆಚ್ಚಳ ಮಾಡಿದ್ದಾರೆ. ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳ ಮಾಡಿದ್ದಾರೆ‌ ಕಳೆದ ಎರಡು ವರ್ಷದಲ್ಲಿ ಸಚಿವ ಸೋಮಣ್ಣ ಅವರು ಪಾದರಸದಂತೆ ತಿರುಗಾಡಿ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಭಾಗದಲ್ಲಿ ಜನರು ರೈಲ್ವೆ ಕ್ರಾಂತಿ ನಿರೀಕ್ಷೆ ಮಾಡುತ್ತಿದ್ದಾರೆ. ರೈಲ್ವೆ ಸ್ಟೇಷನ್‌ನಲ್ಲಿ ಎಸ್ಕಲೇಟರ್ ಬೇಕು. ರೈಲು ಬಹಳ ಹೊತ್ತು ನಿಲ್ಲದಿರುವುದರಿಂದ ಎಸ್ಕಲೇಟರ್ ಅಗತ್ಯವಿದೆ. ಇದಕ್ಕೆ ಪ್ರಯಾಣಿಕರು ಎಷ್ಟು ಎಂದು ಯೋಚಿಸಬೇಡಿ, ಇದೊಂದು ವಿಶೇಷ ಪ್ರಕರಣ ಅಂತ ತಿಳಿದು ಜಾರಿ ಮಾಡಿ, ರಾಣೆಬೆನ್ನೂರಿನ ರೈಲ್ವೆ ಸ್ಟೇಷನ್ ಅನ್ನು ಅಮೃತ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೆ ತೆಗೆದುಕೊಂಡಿದ್ದು, ರಾಣೆಬೆನ್ನೂರು ಗುಡ್‌ಶೆಡ್ ವಿಸ್ತರಣೆ ಮಾಡಬೇಕು. ರಾಣೆಬೆನ್ನೂರು ಬಹಳ ಮಹತ್ವದ ವಾಣಿಜ್ಯ ಕೇಂದ್ರ ಅಲ್ಲಿಂದ ಆಹಾರ ಪದಾರ್ಥಗಳನ್ನು ಬಾಂಗ್ಲಾ, ಶ್ರೀಲಂಕಾಕ್ಕೆ ರಫ್ತು ಮಾಡಲಾಗುತ್ತಿದೆ. ಅಲ್ಲದೆ ಆಮದು ಮಾಡಿಕೊಳ್ಳಲಾಗುತ್ತಿದೆ. ಬ್ಯಾಡಗಿ ರೈಲ್ವೆ ಸ್ಟೇಷನ್ ಅಭಿವೃದ್ಧಿ ಮಾಡಲು ತೆಗೆದುಕೊಂಡಿದ್ದಿರಿ, ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿಕಾಯಿ ಮಾರುಕಟ್ಟೆ. ಶಿಕಾರಿಪುರ, ರಾಣೆಬೆನ್ನೂರು ಹೊಸ ಲೈನು ಬರುತ್ತಿದೆ. ಶಿವಮೊಗ್ಗದಿಂದ ಶಿಕಾರಿಪುರದವರೆಗೆ ಅಭಿವೃದ್ಧಿ ಆಗುತ್ತಿದೆ. ಈ ಕಡೆ ಆಗುತ್ತಿಲ್ಲ. ಅದಷ್ಟು ಬೇಗ ಭೂಸ್ವಾಧೀನ ಮಾಡಬೇಕು. ಒಂದು ತಿಂಗಳಲ್ಲಿ ಭೂಸ್ವಾಧೀನ ಕಾರ್ಯ ನಾವು ಮಾಡಿಸಿಕೊಡುತ್ತೇವೆ. ಶೇ 90ರಷ್ಟು ಭೂಸ್ವಾಧಿನ ಪ್ರಕ್ರಿಯೆ ಮುಗಿದ ತಕ್ಷ ಕೆಲಸ ಪ್ರಾರಂಭಿಸಿ, ಯಲವಿಗಿ ಗದಗ 690 ಕೋಟಿ ರೂ. ಮಂಜೂರಾಗಿದೆ. 280 ಕೋಟಿ ಬಿಡುಗಡೆಯಾಗಿದೆ. ಮೇ ತಿಂಗಳಿನಲ್ಲಿ ಎರಡಕ್ಕೂ ಅನುಮೊದನೆ ಕೊಟ್ಟು ಕೆಲಸ ಆರಂಭಿಸಬೇಕು ಎಂದು ಮನವಿ ಮಾಡಿದರು.
ಹಲವಾರು ಟ್ರೇನ್‌ಗಳ ನಿರ್ಣಯ ಮಾಡಬೇಕಿದೆ. ರಾಣೆಬೆನ್ನೂರು, ಚಳ್ಳಕೆರಿ, ಹಾವೆರಿಗೆ ಟ್ರೇನ್ ನಿಲ್ಲಬೇಕು ಎಂಬ ಬೇಡಿಕೆ ಇದೆ. ಹಾವೇರಿಗೆ ಮೂರು ಟ್ರೈನ್ ನಿಲ್ಲಬೇಕಿದೆ. ಯಲವಿಗಿ ಮೊದಲ ಹಂತ ಗದಗ ಕಡೆಗೆ ಆಗಿದೆ. ಹಾವೇರಿಗೆ ಸಂಪರ್ಕ ಮಾಡಿದರೆ, ಅದು ಕೊಪ್ಪಳ, ವಾಡಿವರೆಗೂ ಆಗುತ್ತದೆ. ಯಲವಿಗಿಯಿಂದ ಹಾವೇರಿಗೆ ಎರಡನೇ ಹಂತದಲ್ಲಿ ತೆಗೆದುಕೊಳ್ಳಬೇಕು. ಯಲವಿಗಿ ಹತ್ತಿರ ಎರಡು ಕೆಳ ಸೇತುವೆ ಮಾಡಿದರೂ ಪ್ರಯೋಜನ ಆಗಿಲ್ಲ, ಮೇಲು ಸೇತುವೆ ಆಗಬೇಕು. ಎರಡು ಆರ್‌ಒಬಿ ಬ್ಯಾಡಗಿ ಮುಖ್ಯ ಲೈನ್, ಕಾಕೋಳದಿಂದ ಎರಡು ಆರ್‌ಒಬಿ ಆಗಬೇಕು. ಆರ್‌ಒಬಿ ಆರ್‌ಯುಬಿ ಎಷ್ಟು ಕೊಟ್ಟರೂ ಮಾಡುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಹಾವೇರಿ ಹತ್ತಿರ ನಾಗಿನಮಟ್ಟಿ ಹತ್ತಿರ ಆರ್‌ಒಬಿ ಆಗಬೇಕು ಎಂದು ಮನವಿ ಮಾಡಿದರು.

ಅಮೃತ ಯೋಜನೆ
ಪ್ರಧಾನಿ ನರೇಂದ್ರ ಮೋದಿಯವರು ಬಂದ ಮೇಲೆ ಅಮೃತ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿ 51 ರೈಲ್ವೆ ಸ್ಟೇಷನ್‌ಗಳು ಆಧುನಿಕರಣಯಾಗಿವೆ. 6000 ಕಿಲೋ ಮೀಟರ ಹೈವೆ ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ 3000 ಕಿಲೋ‌ಮೀಟರ್ ಆಗಿದೆ. ಇನ್ನೂ 3000 ಕಿಲೊಮೀಟರ್ ಅಭಿವೃದ್ಧಿ ಆಗಬೇಕಿದೆ. ಅದಕ್ಕೆ 6000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ ರೈಲ್ವೆ ಯೋಜನೆಗೆ 7000 ಕೋಟಿ ರೂ. ನೀಡಲಾಗುತ್ತಿದೆ. ಆದರೆ ಅದು ಉಪಯೋಗ ಆಗುತ್ತಿಲ್ಲ. ಭೂಸ್ವಾಧಿನ ಆಗುತ್ತಿಲ್ಲ. ರೈಲ್ವೆ ಅಭಿವೃದ್ಧಿಯಾದರೆ ವ್ಯಾಪಾರ, ವ್ಯವಹಾರ, ಸಾಂಸ್ಕೃತಿಕ ರಂಗ ಎಲ್ಲ ರಂಗದಲ್ಲೂ ಅಭಿವೃದ್ಧಿಯಾಗುತ್ತದೆ ಎಂದರು.

ಕೃಷಿ ಸಿಂಚಾಯಿ ಹಣ ಬಿಡುಗಡೆಗೆ ಮನವಿ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಹಾವೇರಿ ಗದಗ ಜಿಲ್ಲೆಗಳಿಗೆ ಹಣ ಬಿಡುಡಗೆಯಾಗಿಲ್ಲ. ರಾಜ್ಯ ಸರ್ಕಾರದಿಂದ ಈ ವಾರದಲ್ಲಿ ಅನುಮತಿ ಕೊಡೆಸಿ ಸಿಡಬ್ಲುಸಿಗೆ ಕಳುಹಿಸುತ್ತೇನೆ. ಹಾವೇರಿ ಜಿಲ್ಲೆಗೆ 60 ಕೋಟಿ, ಗದಗ ಜಿಲ್ಲೆಗೆ 40 ಕೋಟಿ ರೂ. ಯೋಜನೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.