ಕಡೂರಿನಲ್ಲಿ ಅಕ್ರಮ ಸ್ಫೋಟಕ ವಶ: ಆರೋಪಿ ಬಂಧನ

0
20

ಚಿಕ್ಕಮಗಳೂರು: ಅಕ್ರಮವಾಗಿ ಸ್ಫೋಟಕಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ನಗರದ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಕಡೂರು ಠಾಣೆಯ ಸಿಬ್ಬಂದಿ, ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ಪಟ್ಟಣದ ವೆಂಕಟೇಶ್ವರ ಬಡಾವಣೆಯ ವಾಸಿ ನಾಗರಾಜ್ ಎಂಬುವವರು ತಮ್ಮ ಮನೆಯ ಮಂಚದ ಕೆಳಗೆ ಮೂರು ಬಾಕ್ಸ್‌ಗಳಲ್ಲಿ ಬರೋಬ್ಬರಿ 388 ಜಿಲೆಟಿನ್ ಪೇಸ್ಟ್ ಟ್ಯೂಬ್‌ಗಳು ಹಾಗೂ 250 ಅಡಿ ಬತ್ತಿಯನ್ನು ಶೇಖರಿಸಿದ್ದರು. ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಆಂತರಿಕ ಭದ್ರತಾ ಪೊಲೀಸರು ದಾಳಿ ನಡೆಸಿ ಸ್ಫೋಟಕಗಳ ಸಮೇತ ಆರೋಪಿ ನಾಗರಾಜನನ್ನು ಬಂಧಿಸಿದ್ದಾರೆ.
ಜಿಲೆಟಿನ್ ಪೇಸ್ಟ್ ಟ್ಯೂಬ್ ಸ್ಫೋಟಕಗಳನ್ನು ಕಲ್ಲು ಕ್ವಾರಿಗಳನ್ನು ಸ್ಫೋಟಿಸಲು ಬಳಸಲಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಸ್ಫೋಟಕವಾಗಿದ್ದು, ಇದನ್ನು ಸಂಗ್ರಹಿಸಿಡಲು ಅಧಿಕೃತವಾಗಿ ಪರವಾನಿಗೆ ಪಡೆದು, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಇಲ್ಲಿ ಯಾವುದೇ ಪರವಾನಗಿ ಇಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ಮಂಚದಡಿ ಸ್ಫೋಟಕ ಸಂಗ್ರಹಿಸಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Previous articleಸಾಲದ ಶೂಲಕ್ಕೆ ರೈತ ಆತ್ಮಹತ್ಯೆ
Next articleಈಜಲು ಹೋದ ಇಬ್ಬರು ಯುವಕರ ಸಾವು