ಆಡದೆ ಮಾಡು, ಮಾಡಿ ಮರೆತುಬಿಡು…

ಮಾತಿಗಿಂತ ಕೃತಿ ಮೇಲು',ಆಡದೆ ಮಾಡುವವನು ರೂಢಿಯೊಳಗುತ್ತಮನು’ – ಹೀಗೆ ಮುಂತಾಗಿ ಕ್ರಿಯಾಶೀಲತೆಯ ಪ್ರಾಮುಖ್ಯತೆಯನ್ನು ನಾವೆಲ್ಲ ಕೇಳಿದ್ದೇವೆ. ಬರೀ ಮಾತನಾಡಿ ಯಾವುದೇ ಕೆಲಸ ಮಾಡದೆ ಇದ್ದವರಿಗೆ ವಾಚಾಳಿ ಎಂದೂ ಕರೆಯುತ್ತೇವೆ. ಬರಿ ಮಾತನಾಡಿ ಕಾಲಹರಣ ಮಾಡುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಪ್ರತಿಯೊಂದು ಕ್ಷೇತ್ರ ಮಾತುಗಳಿಂದ ತುಂಬಿ ಕ್ರಿಯಾಶೂನ್ಯವಾಗಿದೆ. ಮಾತುಗಳನ್ನು ರಂಜಿಸಿ ಹಿಗ್ಗಿಸಿ ಹೇಳುವ ವಾಹಿನಿಗಳು, ಬಾನುಲಿ, ಪತ್ರಿಕೆಗಳು ಆಡಂಬರದ ಮಾತುಗಳಿಂದ ತುಂಬಿವೆ. ಏನೂ ಕೆಲಸ ಮಾಡದೆ ಮಾತುಗಳಿಂದ ಜನರನ್ನು ಮರುಳು ಮಾಡುವವರಿಂದ ದೂರವಿರಲು ಕುರಾನ್ ಎಚ್ಚರಿಸಿದೆ. ಅಲ್ ಇಮ್ರಾನ್ ಅಧ್ಯಾಯದ ಒಂದು ವಚನದಲ್ಲಿ (೩:೧೮೮) ತಾವು ಮಾಡಿದ ಕೆಲಸಗಳನ್ನು ತಾವೇ ಸಂತುಷ್ಟರಾಗಿರುವವರು ಹಾಗೂ ತಾವು ಮಾಡದೆ ಇದ್ದ ಕೆಲಸಗಳನ್ನು ಮಾಡಿದ್ದೇವೆ ಎಂದು ಜನರು ತಮ್ಮನ್ನು ಹೊಗಳಬೇಕು ಎನ್ನುವವರು ವಿಜಯಶಾಲಿಗಳಾಗುವುದಿಲ್ಲ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವರೆಂದು ಭಾವಿಸಬೇಡಿ. ಅವರಿಗೆ ಕಠಿಣ ಶಿಕ್ಷೆ ಕಾದಿದೆ.' ಪ್ರವಾದಿವರ್ಯ ಮುಹಮ್ಮದ(ಸ) ಅವರ ಕಾಲದಲ್ಲಿ ಮದೀನಾದಲ್ಲಿ ಕೆಲವರು ಸತ್ಯದ ಬಗ್ಗೆ ಬರೀ ಮಾತನಾಡುತ್ತಿದ್ದರು. ಆದರೆ ಅವರು ಸತ್ಯವಂತರಾಗಿರಲಿಲ್ಲ. ತಮ್ಮ ತಪ್ಪುಗಳನ್ನು ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳಲು ಸುಂದರವಾದ ಪದಗಳಿಂದ ಮಾತನಾಡುತ್ತಿದ್ದರು. ಅಂಥವರಿಂದ ಎಚ್ಚರವಾಗಿರಲು ಕುರಾನ್ ಹೇಳಿದೆ. ಈ ತತ್ತ್ವದ ಪ್ರಕಾರ ಮುಖ್ಯವಾದುದು ಕ್ರಿಯೆ, ಕೆಲಸ. ಕೇವಲ ಮಾತುಗಳಲ್ಲ. ದೇವರ ದೃಷ್ಟಿಯಲ್ಲಿ ಬರೀ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. ಇಂಥವರನ್ನು ವಂಚಕರೆಂದು ಕರೆಯಲಾಗುತ್ತದೆ. ನೈತಿಕತೆ, ಸತ್ಯ ಮುಂತಾದ ಗುಣಗಳನ್ನ ಕುರಿತು ಉದ್ದುದ್ದ ಭಾಷಣ ಬಿಗಿದು ಏನೂ ಮಾಡದೆ, ಅನೈತಿಕತೆ, ಸುಳ್ಳುಗಳನ್ನು ಸೃಷ್ಟಿಸುವವನು ಜನರಿಂದ ಮನ್ನಣೆಯನ್ನೇನೋ ಪಡೆಯುತ್ತಾನೆ. ಆದರೆ ಅವನು ಸುಳ್ಳಿನ ಅಪರಾಧಿಯಾಗುತ್ತಾರೆ. ಆರಾಧನಾಲಯಗಳಲ್ಲಿ ಅಂತಹವರಿಗೆ ಸ್ಥಳ ಸಿಗುವುದಿಲ್ಲ. ವಾಚಾಳಿಗಳು ಏನೂ ಮಾಡದೆ ಸುಂದರ ಪದಗಳಿಂದ ಕಾವ್ಯಾತ್ಮಕವಾಗಿ ಭಾವನಾಪರವಶರಾಗಿ ಮಾತನಾಡುತ್ತಾರೆ. ಪ್ರೇಕ್ಷಕರು ಚಪ್ಪಾಳೆ ತಟ್ಟಬಹುದು, ಕೇಕೆ ಹಾಕಬಹುದು. ಓದುಗರ ಪ್ರಶಂಸೆಯಿಂದ ವಾಚಾಳಿಗಳ ಬರಹಗಳು ಹೆಚ್ಚು ಮಾರಾಟವಾಗಬಹುದು. ಆದರೆ ಇವೆಲ್ಲ ದೇವಾರಾಧನೆಯ ಮಾರ್ಗದಲ್ಲಿ ಯಾವುದೇ ಮೌಲ್ಯ ಪಡೆಯುವುದಿಲ್ಲ. ನಮ್ಮ ಮಾತು ಮತ್ತು ಕೃತಿಗಳಿಗೆ ಸಾಮ್ಯವಿರಬೇಕು. ಕಾರ್ಯಶೀಲರಾಗಿ ಕೆಲಸ ಮಾಡಿದರೆ ಆ ಕಾರ್ಯಶೀಲನು ಆ ಕೆಲಸಕ್ಕಿಂತ ಎತ್ತರದಲ್ಲಿರುತ್ತಾನೆ. ಸಾಮಾಜಿಕ ನಡವಳಿಕೆ ಹಾಗೂ ನಿಜವಾದ ನೈತಿಕತೆಯ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಸಾಮಾಜಿಕ ನಡತೆಯಲ್ಲಿ ತಪ್ಪು ಮಾಡಿ ತಿದ್ದಿಕೊಳ್ಳಬಹುದು. ಆದರೆ ನೈತಿಕತೆಯಲ್ಲಿ ತಪ್ಪಿಗೆ ಅವಕಾಶವೇ ಇರುವುದಿಲ್ಲ. ನುಡಿದಂತೆ ನಡೆಯುವುದು ನಿಜವಾದ ನೈತಿಕತೆ.ಆಡದೆ ಮಾಡುವವನು ರೂಢಿಯೊಳಗುತ್ತಮನು’ ಎಂಬ ನಾಣ್ಣುಡಿ ಇದೆ. ಇದು ಕಾರ್ಯಕ್ಕಿಂತ ಮೊದಲು ಕಾಯಕದ ಸ್ವರೂಪವನ್ನು ನೀಡಿ ಕಾಯಕದಷ್ಟೇ ಶಕ್ತಿ ಸಾಮರ್ಥ್ಯಗಳನ್ನು ನೀಡುತ್ತದೆ. ಆದ್ದರಿಂದ ಆಡದೆ ಮಾಡಿ ಮಾಡಿದುದನ್ನು ಮರೆತುಬಿಡಬೇಕಾದ ಕೆಲಸ ಅಜರಾಮರ.