ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಬಂದ ಬ್ರಿಟಿಷರು ವ್ಯವಹಾರದ ಬಗ್ಗೆ ಯೋಚಿಸಬೇಕೇ ಹೊರತು ಸ್ಥಳೀಯ ಆಡಳಿತವನ್ನಲ್ಲ. ಶಿಕ್ಷಣ, ಧಾರ್ಮಿಕತೆ, ಆಂತರಿಕ ಸಮಾಚಾರಗಳಿಗೆ ಮೂಗುತೂರಿಸುವ ಬುದ್ಧಿ ವಿದೇಶಿಗರಿಗೆ ಒಳ್ಳೆಯದಲ್ಲ. ಒಂದೊಮ್ಮೆ ಭಾರತೀಯರು ಇಂಗ್ಲೆಂಡ್‌ನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರದಲ್ಲಿ ಹಸ್ತಕ್ಷೇಪಗೈಯುವುದನ್ನು ನೀವೊಪ್ಪುವಿರೇ' ಎಂದು ಆಂಗ್ಲ ಮೇಲಧಿಕಾರಿಗಳನ್ನು ನೇರಾನೇರ ಪ್ರಶ್ನಿಸಿದ ರಾಮಗೋಪಾಲ ಘೋಷ್, ಆಧುನಿಕ ಭಾರತದ ಶೈಕ್ಷಣಿಕ ಮಾರ್ಗದರ್ಶಕರೆಂದೇ ಗುರುತಿಸಲ್ಪಟ್ಟ ಮೇಧಾವಿ. ಕಲ್ಕತ್ತೆಯ ವ್ಯಾಪಾರಿ ಗೋವಿಂದಚಂದ್ರ ಘೋಷ್ ದಂಪತಿಗೆ ಜನಿಸಿದ ರಾಮಗೋಪಾಲರು ಹಿಂದು ವಿದ್ಯಾಲಯದಲ್ಲಿ ಶಿಕ್ಷಿತರಾದರು. ಭಾರತೀಯ ಪರಂಪರೆಯ ವಿದ್ಯೆ ಹಾಗೂ ಪ್ರಾಚೀನ ಶಾಸ್ತ್ರಗಳ ಬಗೆಗೆ ಬಾಲ್ಯದಲ್ಲೇ ಆಸಕ್ತಿ ಹೊಂದಿ ಇಂಗ್ಲಿಷ್ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರಗಳಲ್ಲಿ ಹಿಡಿತ ಸಾಧಿಸಿ ವಿದೇಶೀ ವಿದ್ವಾಂಸರನೇಕರ ಮೆಚ್ಚುಗೆ ಗಳಿಸಿದ ಘೋಷರ ಭಾಷಾಶುದ್ಧತೆ ಹಾಗೂ ಸ್ಪಷ್ಟ ಮಾತುಕತೆ ಆಂಗ್ಲ ಅಧಿಕಾರಿಗಳ ವಲಯದಲ್ಲಿ ಬಹುಪ್ರಭಾವ ಬೀರಿತು. ಭಿನ್ನ ಭಿನ್ನ ಶೈಕ್ಷಣಿಕ ಮಂಡಳಿಗಳ ಸಕ್ರಿಯ ಸದಸ್ಯರಾಗಿ ಭಾರತೀಯ ಜ್ಞಾನ ಮತ್ತು ವಿದೇಶೀ ಪ್ರಗತಿಶೀಲತೆಯ ಸಮನ್ವಯದ ಕನಸು ಬಿತ್ತಿ, ಹಿಂದುಜೀವನ ಪದ್ಧತಿಯಲ್ಲಿ ಹಾಸು ಹೊಕ್ಕಿದ್ದ ವೈಜ್ಞಾನಿಕ ಚಿಂತನೆಗಳನ್ನು ಲೇಖನಗಳ ಮೂಲಕ ಪರಿಚಯಿಸಿದರು. ಮೆಕಾಲೆ ಪ್ರಣೀತ ವಿದ್ಯಾವ್ಯವಸ್ಥೆಯು ಸನಾತನ ಧರ್ಮಕ್ಕೆ ಅಪಾಯಕಾರಿಯಾಗಬಹುದೆಂದು ಆರಂಭದ ದಿನಗಳಲ್ಲೇ ಎಚ್ಚರಿಸಿ ತತ್ಸಂಬಂಧ ಅನೇಕ ಸಂಸ್ಥಾನಗಳ ಮಹಾರಾಜರಿಗೆ ಪತ್ರಮುಖೇನ ಸೂಚನೆಯಿತ್ತರು. ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ತೆರೆಯಲು ಪ್ರೋತ್ಸಾಹಿಸಿ ಸರಕಾರದ ವಿಶ್ವಾಸವನ್ನೂ ಗಳಿಸಿದ ಘೋಷರದು ವಿಶಿಷ್ಟ ವ್ಯಕ್ತಿತ್ವ. ಉನ್ನತ ಶಿಕ್ಷಣದ ಕನಸನ್ನು ಮೊಟಕುಗೊಳಿಸಿ ಉದ್ಯಮದಲ್ಲಿ ತೊಡಗಿಸಿದ ರಾಮಗೋಪಾಲರು ಈಸ್ಟ್ ಇಂಡಿಯಾ ಕಂಪನಿಗೂ ಬಿಸಿ ಮುಟ್ಟಿಸಿದ ಧೀರ ಉದ್ಯಮಿ. ಭಾರತದ ಆರ್ಥಿಕತೆಯ ಮೇಲಿನ ಹಿಡಿತ ತಮ್ಮದಷ್ಟೇ ಆಗಿರಬೇಕೆಂಬ ಆಂಗ್ಲರ ದುರಾಲೋಚನೆಗೆ ಕಡಿವಾಣ ಹಾಕಲೆಂದೇ ಕಲ್ಕತ್ತೆಯನ್ನು ಕೇಂದ್ರವಾಗಿಸಿದ ಘೋಷ್, ಆರ್.ಜಿ. ಆಂಡ್ ಕೊ. ಸಂಸ್ಥೆ ಸ್ಥಾಪಿಸಿ ಅಪಾರ ಸಂಪತ್ತು ಗಳಿಸಿದರು. ಪ್ರತಿಯೊಂದು ನಗರದಲ್ಲೂ ಭಾರತೀಯರು ಔದ್ಯಮಿಕ ರಂಗಕ್ಕೆ ಧುಮುಕಿದರೆ ವಿದೇಶೀ ಪಾರಮ್ಯವನ್ನು ತೊಡೆದುಹಾಕಬಹುದೆಂದು ಅಭಿಪ್ರಾಯಪಟ್ಟು ಆ ದಿಶೆಯಲ್ಲಿ ಮುನ್ನುಗ್ಗುವ ಯುವಕರಿಗೆ ಹಣಕಾಸಿನ ನೆರವನ್ನಿತ್ತರು. ತಾವೊಬ್ಬರೇ ಬೆಳೆಯಬೇಕೆಂಬ ಹಂಬಲವಿಲ್ಲದೆ ತನ್ನೊಡನೆ ಭಾರತೀಯರನ್ನೂ ಬೆಳೆಸಿ ದೇಶ ಉಳಿಸಬೇಕೆಂಬ ಅವರ ಯೋಚನೆಯೇ ಸ್ಫೂರ್ತಿದಾಯಕ. ತಮ್ಮ ಕಷ್ಟಕಾಲದಲ್ಲಿ ಸಹಕರಿಸಿದ ಯಾರನ್ನೂ ಮರೆಯದೆ ಕೈಸಾಲವನ್ನೆಲ್ಲ ತೀರಿಸಿದ ರಾಮಗೋಪಾಲರು ಒಂದು ಹಂತದಲ್ಲಿ ದಿವಾಳಿಯಾಗುವ ಸಂದರ್ಭ ಎದುರಾದರೂ ಸತ್ಯದ ಹಾದಿಯಲ್ಲೇ ನಡೆದರು. ಮೋಸ, ವಂಚನೆಯನ್ನು ನಿರಾಕರಿಸಿ ವರ್ಷಗಳ ಬಳಿಕ ಮತ್ತೆ ಯಶಸ್ಸು ಕಂಡ ಘೋಷರು ರಕ್ತಹೀರುವ ಬ್ರಿಟಿಷ್ ಉದ್ಯಮವನ್ನು ವಿರೋಧಿಸಿದ ಮೊದಲಿಗ. ಬ್ರಿಟಿಷ್ ಇಂಡಿಯನ್ ಅಸೋಸಿಯೇಶನ್ ಸ್ಥಾಪಿಸಿ ಭಾರತೀಯರ ಭಾವನೆ ಹಾಗೂ ಬ್ರಿಟಿಷ್ ಸರಕಾರದ ಅನ್ಯಾಯದ ಮಾರ್ಗವನ್ನು ಇಂಗ್ಲೆಂಡಿಗೆ ತಿಳಿಸುವುದನ್ನು ಮರೆಯದ ಘೋಷರು, ಬ್ರಿಟಿಷ್ ಮೇಲಧಿಕಾರಿಗಳ ಜೊತೆ ತಮಗಿರುವ ಆತ್ಮೀಯತೆಯನ್ನು ವೈಯಕ್ತಿಕ ಲಾಭಕ್ಕೆ ಎಂದಿಗೂ ಉಪಯೋಗಿಸಲಿಲ್ಲ. ದೇಶಹಿತದ ಪ್ರಶ್ನೆ ಎದುರಾದಾಗ ಎತ್ತರದ ಧ್ವನಿಯಲ್ಲಿ ಪ್ರಶ್ನಿಸುವುದನ್ನೂ ಮರೆಯಲಿಲ್ಲ. ತರುಣ ಬಂಗಾಲ ಸಂಘಟನೆಯನ್ನು ಆರಂಭಿಸಿದ ರಾಮಗೋಪಾಲರು ಸ್ವದೇಶೀ ಸ್ವಾಭಿಮಾನವನ್ನು ಜಾಗೃತಗೊಳಿಸಿ ಯುವಕರ ಆಡಳಿತ ಪ್ರವೇಶವನ್ನು ಬಯಸಿದರು. ಭಾರತದ ಆಡಳಿತ ಸೇವೆಗಳಲ್ಲಿ ಭಾರತೀಯ ಯುವಕರದೇ ಹಿಡಿತವಿರಬೇಕೆಂದು ಬಯಸಿದ ಘೋಷರು, ಉನ್ನತ ಶೈಕ್ಷಣಿಕ ವಾತಾವರಣ ನಿರ್ಮಾಣವಾಗದ ಹೊರತು ಆಧುನಿಕ ಜಗತ್ತಿಗೆ ಭಾರತ ತೆರೆಯಲಾರದೆಂದು ಯೋಚಿಸಿ ದೇಶದಾದ್ಯಂತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಆಗ್ರಹಿಸಿದರು. ಅನೇಕರ ಸಹಕಾರದೊಂದಿಗೆ ಭಾರತೀಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕಾಗಿ ಲಂಡನ್‌ಗೆ ಕಳುಹಿಸಲು ಯೋಜನೆ ರೂಪಿಸಿ, ಮೊದಲ ಪ್ರಯೋಗದಲ್ಲೇ ನಾಲ್ವರು ವೈದ್ಯರ ತಂಡವನ್ನು ಕಂಡ ಘೋಷರ ಬದುಕು ಸಾರ್ಥಕವಾಯಿತು.
ಭಾರತ ಭಾರತೀಯರಿಗಾಗಿ’ ಎಂಬ ಅವರ ಘೋಷಣೆಯೇ ಇಂದಿನ ಆತ್ಮನಿರ್ಭರ ಕಲ್ಪನೆಯ ಜೀವಾಳವೆಂದರೂ ತಪ್ಪಾಗಲಾರದು. ಉದ್ಯಮಿ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ವಾಗ್ಮಿ, ಲೇಖಕ, ದಾನಿ, ಬಹುಶ್ರುತ ವಿದ್ವಾಂಸರಾಗಿ ಅಪಾರ ಜನಪ್ರೀತಿ ಗಳಿಸಿ ಭಾರತದ ಡೆಮಾಸ್ತನೀಸ್ ಎಂಬ ಹೊಗಳಿಕೆಗೆ ಪಾತ್ರರಾದ ರಾಮಗೋಪಾಲ ಘೋಷರ ದೇಸೀ ಚಿಂತನೆಗಳು ಸದಾ ಮಾರ್ಗದರ್ಶಿ.ಯಾವುದೋ ಕಾಲದಲ್ಲಿ ನಡೆದ ಘೋರ ಅನ್ಯಾಯಕ್ಕೆ ಹೆದರಿ, ನಮ್ಮ ಮನೆಯ ಹೆಣ್ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಿಡುವುದು ಸರಿಯಲ್ಲ. ಸ್ತ್ರೀಯರಿಗೆ ಶಿಕ್ಷಣವಿತ್ತು ಅವರೂ ಸಾಮಾಜಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವತ್ತ ನಾವು ಗಮನಹರಿಸಬೇಕು. ಅನ್ಯಾಯವನ್ನು ಖಂಡಿಸಿ, ಸಮೃದ್ಧ ಜೀವನವನ್ನು ರೂಪಿಸುವುದು ಭಾರತೀಯರ ಸರ್ವಪ್ರಥಮ ಆದ್ಯತೆಯಾಗಬೇಕು' ಎಂಬ ಗಂಭೀರವಾಣಿಯಿಂದ ದೇಶದಾದ್ಯಂತ ಪ್ರಸಿದ್ಧರಾಗಿ ಮಹಿಳೆಯರ ಸಾಮಾಜಿಕ ಉನ್ನಯನಕ್ಕೆ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ವಾಗ್ಮಿ, ನ್ಯಾಯಾಧೀಶ, ವಿದ್ವಾನ್ ಮಹಾದೇವ ಗೋವಿಂದ ರಾನಡೆಯವರು
ರಾವ್ ಬಹಾದ್ದೂರ್ ರಾನಡೆ’ ಎಂಬ ಅಭಿನಂದನೆಗೆ ಪಾತ್ರರಾದ ಮಹಾನ್ ಚೇತನ. ಮಹಾರಾಷ್ಟ್ರದ ನಾಸಿಕದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಮಹಾದೇವರು ಪ್ರಚಂಡ ಬುದ್ಧಿಶಾಲಿ. ಮುಂಬೈನ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಪದವಿ ಪಡೆದು ವಿಶ್ವವಿದ್ಯಾಲಯದ ಮೊದಲ ತಂಡದ ವಿದ್ಯಾರ್ಥಿಯಾಗಿ ಕಾನೂನು ಪದವಿ ಸಂಪಾದಿಸಿದ ರಾನಡೆಯವರು ವಕೀಲರಾಗಿ ವೃತ್ತಿಜೀವನ ಆರಂಭಿಸಿದರು. ಕಿರಿಯ ಉಪ ನ್ಯಾಯಾಧೀಶರಾಗಿ ಪದೋನ್ನತಿ ಪಡೆದರೂ ಸ್ವಾತಂತ್ರ‍್ಯ ಆಂದೋಲನದಲ್ಲಿ ಸಕ್ರಿಯರಾಗಿದ್ದ ಪರಿಣಾಮ ಅರ್ಹತೆಗಳಿದ್ದರೂ ಉನ್ನತ ಹುದ್ದೆ ಕನಸಿನ ಮಾತಾಗಿ, ಬಹಳ ತಡವಾಗಿ ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಯುಕ್ತರಾದರು. ಆಂಗ್ಲರ ಆಡಳಿತದಡಿ ಮುಖ್ಯಹುದ್ದೆಯನ್ನು ಅಲಂಕರಿಸಿದ್ದರೂ ಭಾರತೀಯ ನ್ಯಾಯಚಿಂತನೆಯ ಆಧಾರದಲ್ಲೇ ನ್ಯಾಯಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದ್ದ ರಾನಡೆಯವರು ಆ ಕಾರಣಕ್ಕಾಗಿಯೇ ಬ್ರಿಟಿಷ್ ಸರಕಾರದ ಕೆಂಗಣ್ಣಿಗೂ ಗುರಿಯಾದರು. ಗ್ರಂಥೋತ್ತೇಜಕ ಸಭಾ, ಪೂನಾ ಸಾರ್ವಜನಿಕ ಸಭಾ, ವಕ್ತೃತ್ವೋತ್ತೇಜಕ ಸಭಾ ಇತ್ಯಾದಿ ಸಂಸ್ಥೆಗಳನ್ನು ಆರಂಭಿಸಿ ರಾಷ್ಟ್ರೀಯ ಹಾಗೂ ಧಾರ್ಮಿಕ ಚಳುವಳಿಯ ನೇತೃತ್ವ ವಹಿಸಿದ ರಾನಡೆಯವರು, ಮಾನವೀಯತೆ, ಸಮಾನತೆ, ಆಧ್ಯಾತ್ಮಿಕತೆ' ಪರಿಕಲ್ಪನೆಯ ವೇದೋಕ್ತ ಜೀವನಪದ್ಧತಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಸಮಾನಮನಸ್ಕರೊಡಗೂಡಿ ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದರು. ಹಿಂದು ಸಮಾಜದ ಧಾರ್ಮಿಕ ಭದ್ರತೆ, ಆಧ್ಯಾತ್ಮಯುಕ್ತ ಬದುಕಿನ ಅನಿವಾರ್ಯತೆ, ಸಾರ್ವಜನಿಕ ಶಿಕ್ಷಣ, ಕುಟುಂಬ ಜೀವನ, ಪಶ್ಚಿಮದ ಸದ್ವಿಚಾರಗಳನ್ನು ತೆರೆದ ಮನಸ್ಸಿನೊಂದಿಗೆ ಸ್ವೀಕರಿಸುವ ಮನೋಭಾವ ಬೆಳೆಸದ ಹೊರತು ಹಿಂದೂ ಧರ್ಮೀಯರ ಕುಂಭಕರ್ಣ ನಿದ್ದೆಯ ಮಂಪರು ಕಳೆಯಲು ಸಾಧ್ಯವಿಲ್ಲವೆಂದರಿತ ರಾನಡೆಯವರು ಇಂಗ್ಲಿಷ್-ಮರಾಠಿ ದಿನಪತ್ರಿಕೆ ಇಂದುಪ್ರಕಾಶವನ್ನು ಆರಂಭಿಸಿದರು. ಯುವಮನಗಳಲ್ಲಿ ದೇಶಭಕ್ತಿಯ ಭಾವಬಿತ್ತಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸುವ ಉದ್ದೇಶದೊಂದಿಗೆ ಆರಂಭವಾದ ಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ ರಾನಡೆಯವರು ಮಂದಗಾಮಿಗಳಿಗೂ, ಕ್ರಾಂತಿಕಾರಿಗಳಿಗೂ ಗುರುಸ್ವರೂಪಿ ಅನ್ನುವುದು ಗಮನಾರ್ಹ. ಬಾಲ್ಯವಿವಾಹ, ಕೇಶಮುಂಡನವನ್ನು ಪ್ರಬಲವಾಗಿ ವಿರೋಧಿಸಿದ ರಾನಡೆ, ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆಯಿತ್ತರು. ವಿಧವಾ ವಿವಾಹ ಸಮಿತಿ, ಮಹಾರಾಷ್ಟ್ರ ಬಾಲಿಕಾ ಶಿಕ್ಷಣ ಸಮಿತಿಗಳನ್ನು ಸ್ಥಾಪಿಸಿ ಹೆಣ್ಮಕ್ಕಳ ಶಾಲೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ರಾನಡೆ, ಪ್ರಖರ ಲೇಖನ ಮತ್ತು ಹೊತ್ತಗೆಗಳ ಮೂಲಕ ಆಂದೋಲನ, ಸುಧಾರಣೆಗಳಿಗೆ ಶಕ್ತಿ ತುಂಬಿದರು. ಪತ್ನಿ ರಮಾಬಾಯಿಯವರನ್ನು ಪ್ರೋತ್ಸಾಹಿಸಿ, ಉನ್ನತ ಶಿಕ್ಷಣದ ಕನಸಿತ್ತು, ಸಾಮಾಜಿಕ ಕಾರ್ಯಗಳಲ್ಲಿ ವ್ಯಸ್ತರಾಗುವಂತೆ ಪ್ರೇರಣೆಯಿತ್ತ ಪರಿಣಾಮ ಮಹಾರಾಷ್ಟ್ರದಲ್ಲಿ ಪರಿವರ್ತನಾ ಕ್ರಾಂತಿಗೆ ತಳಹದಿಯಾಯಿತು. ಸಶಸ್ತ್ರ ಕ್ರಾಂತಿಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದಂತೆ ದಾರಿ ಯಾವುದಾದರೂ, ದಾಸ್ಯಮುಕ್ತ ಭಾರತವೊಂದೇ ತನ್ನ ಉದ್ದೇಶವೆಂದು ಘೋಷಿಸಿದರು. ನೂರಾರು ಕ್ರಾಂತಿಕಾರಿಗಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಬೆಂಬಲಿಸಿ ಆರ್ಥಿಕ ಸಹಕಾರವನ್ನಿತ್ತು ಪೋಷಿಸಿದ ಅವರು ಮಾತೃವಾತ್ಸಲ್ಲದ ಗಣಿ. ತತ್ಕಾಲೀನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಹಿಂದುಹಿತದ ಆಡಳಿತ ವ್ಯವಸ್ಥೆ ರೂಪುಗೊಳ್ಳದಿದ್ದರೆ ಭಾರತ ಆತಂಕದ ದಿನಗಳನ್ನು ಎದುರುನೋಡಬೇಕಾಗಬಹುದೆಂದು ಎಚ್ಚರಿಸಿ ಆ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಹೋರಾಟಗಾರರಿಗೆ ಆಸರೆಯಾದ ಅವರ ಭಾರತಪ್ರೀತಿ ಅತುಲ್ಯ.
ದೇಶಹಿತ ಬಯಸಿ ಕಣ್ಮುಚ್ಚಿದರೆ ಮೋಕ್ಷದ ಹೆಬ್ಬಾಗಿಲು ತೆರೆಯುತ್ತದೆ’ ಎಂಬ ಮಾತು ಅವರ ದೇಶಭಕ್ತಿಗೆ ಸಾಕ್ಷಿ. ಸದಾ ನಾಡಿನೇಳಿಗೆಯ ಬಗ್ಗೆ ಯೋಚಿಸಿ ಕಾರ್ಯತತ್ಪರರಾಗಿದ್ದ ಮಹಾದೇವ ಗೋವಿಂದ ರಾನಡೆಯವರು ಬ್ರಾಹ್ಮಕ್ಷಾತ್ರಗಳ ಮಹಾಸಂಗಮವೆಂದರೆ ಅತಿಶಯೋಕ್ತಿಯಲ್ಲ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಮುಂದೊಂದು ದಿನ ಜಗತ್ತು ಒಪ್ಪಿ, ಅಪ್ಪಿಕೊಳ್ಳುವುದೆಂಬ ಭರವಸೆಯನ್ನು ದೇಶವಾಸಿಗಳಿಗಿತ್ತು ಸದಾಕಾಲ ರಾಷ್ಟ್ರದ ಔನ್ನತ್ಯವನ್ನೇ ಬಯಸಿದ ಘೋಷ್ ಮತ್ತು ರಾನಡೆಯವರ ಸ್ಮೃತಿದಿನವು ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ನವೋತ್ಸಾಹ ತುಂಬಲಿ.