ಗೋಕರ್ಣ: ರೆಸಾರ್ಟ್ ಉದ್ಯಮ ಬೆಳೆಯಲು ಪ್ರಚಾರ ಹಾಗೂ ಸಹಕಾರ ನೀಡುವುದಾಗಿ ಬೆಂಗಳೂರಿನ ಯುವತಿಯೊರ್ವಳು ಇಲ್ಲಿನ ರೆಸಾರ್ಟ್ ಮಾಲಿಕನೊಬ್ಬನನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಇಲ್ಲಿನ ಬೇಲೆಕಾನ್‌ನಲ್ಲಿರುವ ರೆಸಾರ್ಟ್ ಮಾಲಿಕನಿಗೆ ಇನ್ಸ್ಟಾಗ್ರಾಂನಲ್ಲಿ ಯುವತಿಯ ಪರಿಚಯವಾಗಿದ್ದು, ಅವರ ಸ್ನೇಹ ವರ್ಷಗಟ್ಟಲೇ ಉತ್ತಮವಾಗಿಯೇ ಮುಂದುವರಿದಿದೆ. ಒಂದು ದಿನ, ತನಗೆ ಹಣದ ಅವಶ್ಯಕತೆ ಇದೆ ಎಂದು ಯುವತಿ ತಿಳಿಸಿ, ನಂಬಿಕೆ ಬರುವಂತೆ ಮಾಡಿ ಒಟ್ಟು ೩,೨೯,೪೦೦ ರೂಪಾಯಿಗಳನ್ನು ಮಾಲಿಕನಿಂದ ಪಡೆದಿದ್ದಾಳೆ. ನಂತರ ಮಾಲಿಕ ಹಣ ನೀಡುವಂತೆ ಕೇಳಿದ್ದರೂ, ಆಕೆ ಕಾರಣ ಹೇಳುತ್ತಾ ಮುಂದೂಡಿದ್ದು, ಪ್ರಸ್ತುತ ಅವಳು ನಾಪತ್ತೆಯಾಗಿರುವುದಾಗಿ ರೆಸಾರ್ಟ್ ಮಾಲಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಕೆ ಆನ್‌ಲೈನ್ ಮೂಲಕ ಒಟ್ಟು ೨೩,೪೦೦೦ ಹಾಗೂ ನಗದು ೯೫,೦೦೦ ರೂಪಾಯಿ ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.