ತಾರಾತಿಗಡಿ: ಭೇಟಿಯಾಗಲು ಮನೆಗೆ ಹೋದರೆ…ಒಳಗಡೆ ಇದ್ದು ಇಲ್ಲ ಎಂದು ಹೇಳಿ ಕಳುಹಿಸಿದರು…ಹೊರಗಡೆ ಕಾದು ಕುಳಿತು ಅವರು ಹೊರಗಡೆ ಬಂದಾಕ್ಷಣ…ರಪ್ಪನೇ ಹೋಗಿ ನಿಂತು ಮಾತನಾಡಿಸಬೇಕು ಅಂದರೆ… ಅವರ ಕಾರಿನ ಕರಿ ಟಿಂಟೆಡ್ ಗಾಜಿನಲ್ಲಿ ಒಳಗಡೆ ಯಾರಿದ್ದಾರೆ ಎಂದು ಕಾಣಿಸುವುದೇ ಇಲ್ಲ.
ನನಗೆ ನೋಡಿದರೆ ಅವರನ್ನು ಮಾತನಾಡಿಸದೇ ಒಂದು ಹೆಜ್ಜೆ ಇಡಲು ಆಗುವುದಿಲ್ಲ ಎಂದು ದುರದುಂಡೇಸಿ ಮಿಡುಕಾಡಿ ಮೊಬೈಲ್‌ನಿಂದ ಕರೆ ಮಾಡಿದರೆ ಮರುಕ್ಷಣವೇ ಫೀಸ್ ವೇಟ್ ಐ ವಿಲ್ ಕಾಲ್ ಎಂಬ ಮೆಸೇಜು ಬಂದಿತ್ತು. ದುಂಡೇಸಿಯೂ ಸುಮ್ಮನೇ ಇರುವ ಮನುಷ್ಯನೇ ಅಲ್ಲ…ಮತ್ತೆ ಕರೆ ಮಾಡಿದರೆ ವೇಟ್.. ವೇಟ್ ಎಂದು ಬಂದಿತ್ತು.
ಮೂರನೇ, ನಾಲ್ಕನೇ ಸಲ ಕಾಲ್ ಮಾಡಿದರೂ ವೇಟ್ ಐ ವಿಲ್ ಕಾಲ್ ಎಂದು ಮತ್ತೆ ಬಂದಿತ್ತು. ಇವರು ಬೇಕಂತಲೇ ಮಾಡುತ್ತಾರೋ ಏನೋ ಎಂಬ ಅನುಮಾನದೊಂದಿಗೆ ತಿಗಡೇಸಿ ಫೋನ್ ಇಸಿದುಕೊಂಡು ಅವರ ನಂಬರ್ ನಿಂದ ಕಾಲ್ ಮಾಡಿದರೆ ರಿಂಗ್ ಆದಾಗ ಆ ಕಡೆಯಿಂದ ಹಲೋ ಅನ್ನುತ್ತಾರೆ…
ಸಾಹೇಬ್ರೆ ನಾನು ಅಂದ ಕೂಡಲೇ ಅದ್ಯಾವುದೋ ಹೆಣ್ಣುಮಗಳು ನೀವು ಕರೆ ಮಾಡಿರುವ ಚಂದಾದಾರರು…ಎಂದು ಉಲಿಯುತ್ತಾಳೆ… ಇದೇನು ಮೊಬೈಲ್‌ಗಳದ್ದೇ ತಪ್ಪೋ? ನೆಟ್‌ವರ್ಕ್‌ದ್ದೋ ಎಂದು ಒಂದು ತಿಳಿಯದ ಹಾಗೆ ಆಗಿದೆ ಎಂದು ಕರಿಲಕ್ಷುಂಪತಿಯ ಹತ್ತಿರ ಕವಡೆ ಹಾಕಿಸಿ ಕೇಳಿದಾಗ…
ಪಡೋಬೇಕು ಅಂದರೆ ತಡ್ಕೊಬೇಕು ಎಂದು ಹೇಳಿದ್ದ. ಅವರು ಫೋನೆತ್ತಿ ಒಂದೇ ಒಂದು ಸಲ… ಆಯೋಗಯ್ಯ ಅಂದರೆ ನನ್ನ ಕೆಲಸ ಮುಂದುವರಿಸುತ್ತೇನೆ ಎಂದು ಅಂದುಕೊಂಡು.. ಮರುಕ್ಷಣವೇ ಆದದ್ದಾಗಲಿ ಎಂದು ಎಲ್ಲರಿಗೂ ಈ ವಿಷಯ ತಿಳಿಸಿಬಿಡೋಣ ಎಂದು ಓಣೋಣಿ ತಿರುಗಾಡಿ…
ನೋಡ್ರಪ ಹೀಗಾಯ್ತು…ನೀನು ನನ್ನೊತೆ ಇರಬೇಕು ಎಂದು ಹೇಳಿದಾಗ ಅವರು ಹೇಳಿದರೆ ಓಕೆ ಅಂದರು…ನಿಮ್ಮ ಎದುರಿಗೇ ಹೇಳಿಸುತ್ತೇನೆ ತಡೀರಿ ಎಂದು ದುರದುಂಡೇಸಿ ಮತ್ತೆ ಕರೆ ಮಾಡಿದಾಗ…ಫೀಸ್ ವೇಟ್…ಪ್ಲೇಸ್ ವೇಟ್ ಐ ವಿಲ್ ಕಾಲ್ ಅಂದಿತ್ತು…ಭೇಟಿಯಾಗಿದ್ದವರೂ ಸಹ ಪಡ್ಕೊಬೇಕು ಅಂದರೆ ತಡ್ಕೊಬೇಕು ಎಂದರು ದುರದುಂಡೇಸಿ ತಲೆ ಕೆರೆದುಕೊಂಡು ನೋಡ್ತೀನಿ..ನೋಡ್ತೀನಿ ಅಂದುಕೊಂಡು ಹೊರಟು ಹೋದ.
























