ಚಿಕ್ಕಬಳ್ಳಾಪುರ: ತನ್ನ ತಾಯಿಯ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ ವಿಕೃತ ಅಪರಾಧಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಾಧೀಶರಾದ ಕಾಂತರಾಜು ಎಸ್.ವಿ. ಈ ಅಪರಾಧಿಗೆ ಜೀವಾವಧಿ ಶಿಕ್ಷೆಯ ಜೊತೆಗೆ 25 ಸಾವಿರ ರೂಪಾಯಿ ದಂಡವನ್ನು ಸಹ ವಿಧಿಸಿದ್ದಾರೆ.
ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ. 38 ವರ್ಷದ ಅಪರಾಧಿಯು ತನ್ನ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದ. ವಿವಾಹವಾಗಿದ್ದರೂ ಆತನ ಪತ್ನಿ ದೂರವಾಗಿದ್ದಳು.
ಮದ್ಯದ ಅಮಲಿನಲ್ಲಿ ಅಮಾನವೀಯ ಕೃತ್ಯ: 2024ರ ಆಗಸ್ಟ್ 4ರಂದು ರಾತ್ರಿ, ಮದ್ಯ ಸೇವಿಸಿ ಮನೆಗೆ ಬಂದ ಅಪರಾಧಿ ತನ್ನ ತಾಯಿಯೊಂದಿಗೆ ಜಗಳವಾಡಿದ್ದಾನೆ. ಅತಿರೇಕದ ವರ್ತನೆ ತೋರಿದ ಆತ, ತಾಯಿಗೆ ತೀವ್ರವಾಗಿ ಥಳಿಸಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.
ತಾಯಿಯ ಕಿರುಚಾಟವನ್ನು ಲೆಕ್ಕಿಸದೆ, ಮನೆ ಸಮೀಪದ ತಿಪ್ಪೆಯ ಬಳಿಗೆ ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಅಮಾನವೀಯ ವಿಕೃತಿ ಮೆರೆದಿದ್ದಾನೆ.
ಈ ಘಟನೆಯ ನಂತರ, ಸಂತ್ರಸ್ತ ತಾಯಿಯು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಗುಡಿಬಂಡೆ ಸಿಪಿಐ ನಯಾಜ್ ಬೇಗ್ ಶೀಘ್ರವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಅಪರಾಧಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ನ್ಯಾಯಾಲಯವು ಇಂತಹ ಘೋರ ಕೃತ್ಯಗಳ ವಿರುದ್ಧ ಸ್ಪಷ್ಟ ಸಂದೇಶ ರವಾನಿಸಿದೆ. ತೀರ್ಪಿನ ಪ್ರಕಾರ ವಿಧಿಸಲಾದ ದಂಡದ ಮೊತ್ತ 25 ಸಾವಿರ ರೂಪಾಯಿಗಳನ್ನು ಕಟ್ಟಲು ತಪ್ಪಿದಲ್ಲಿ, ಅಪರಾಧಿಯು ಮತ್ತಷ್ಟು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ತಾಯಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಗನಿಗೆ ಜೀವಾವಧಿ ಶಿಕ್ಷೆಯಾಗಿರುವುದು ಇಡೀ ಜಿಲ್ಲೆಯಲ್ಲಿ ಸುದ್ದಿಗೆ ಗ್ರಾಸವಾಗಿದೆ.























