ತಾರಾತಿಗಡಿ: ಯಾರಾಗ್ತರೆ ಎಂದು ಯಾರನ್ನೇ ಕೇಳಿದರೂ… ನಂಗೊತ್ತಿಲ್ಲ ನಂಗೊತಿಲ ನೋಡಬೇಕು ಎಂದು ಹೇಳುವುದನ್ನು ಕೇಳಿ, ಕೇಳಿ ತಲೆಕೆಡೆಸಿಕೊಂಡ ತಿಗಡೇಸಿ ಇದಕ್ಕೆಲ್ಲ ಅದೇ ಬರೋಬ್ಬರಿ ಎಂದು ಶಾಸ್ತ್ರ ಹೇಳುವ ಕರಿಲಕ್ಷುಂಪತಿ ಹತ್ತಿರ ಹೋಗಿ ನೋಡಿ…ಯಾರಾಗ್ತಾರೆ ಎಂದು ಒಂದು ಬಾರಿ ಹೇಳಿಬಿಡಿ ಎಂದು ಕೇಳಿದ.
ಅದಕ್ಕೆ ಕರಿಲಕ್ಷುಂಪತಿ ಸ್ವಲ್ಪ ಹೊತ್ತು ಸುಮ್ಮನಿದ್ದು ಕವಡೆ ಹಾಕಿ…ನೀವು ವೇಟ್ ಮಾಡಬೇಕು ಈಗಲೇ ಹೇಳಲು ಆಗುವುದಿಲ್ಲ ಎಂದು ಹೇಳಿ ನನ್ನ ದಕ್ಷಿಣೆ ಕೊಡು ಎಂದು ಗಂಟು ಬಿದ್ದು ಇಸಿದುಕೊಂಡ…ಕುಂಟಿರುಪ್ತಿಯೂ ಸಹ ನಾ ಕರೆಕ್ಕಾಗಿ ಹೇಳಿದರೆ ಅಲ್ಲೋಲ ಕಲ್ಲೋಲ ಆಗುತ್ತದೆ ಆದ್ದರಿಂದ ನಾನೇನೂ ಹೇಳುವುದಿಲ್ಲ ಎಂದು ಹೇಳಿದ.
ಇನ್ನೇನಿದ್ದರೂ ಅಲ್ಲಿಗೆ ಹೋಗುವುದು ಲೇಸು ಎಂದು ಹತ್ತೂರು ದಾಟಿಕೊಂಡು ಆ ಊರಿಗೆ ಮಟಮಟ ಮಧ್ಯಾಹ್ನ ತಲುಪಿದ. ಹಾಗೆಯೇ ನಡೆದುಕೊಂಡು ಹೋದಾಗ ದೊಡ್ಡ ಆಲದ ಮರದ ಕೆಳಗೆ ಬಿಳಿ ಗಡ್ಡದ ಎಳೆ ಮುದಕುನಂತವನು ಕುಳಿತಿದ್ದ.
ಆತನಿಗೆ ಹೋಗಿ ಶಿರಿಸಾಸ್ಟಾಂಗ ನಮಸ್ಕಾರ ಹಾಕಿದ. ಆ ಎಳೆ ಮುದುಕಪ್ಪ ಬಾ..ಬಾ ಎಂದು ಬೆನ್ನುಸವರಿ ಮೇಲೆಬ್ಬಿಸಿ ಕೂಡಿಸಿ ಏನ್ ಬಂದದ್ದು ಎಂದು ಕೇಳಿದಾಗ….ಸ್ವಾಮೀ ಇಡೀ ರಾಜ್ಯದಲ್ಲಿ ಬರೀ ಅವೇ ಮಾತುಗಳನ್ನು ಕೇಳಿ ಸಾಕಾಗಿದೆ…
ಅವರು ನೋಡಿದರೆ ನಾನೇ ನಾನು ಅನ್ನುತ್ತಿದ್ದಾರೆ…ಇವರು ನೋಡಿದರೆ…ಪೆನ್ನು ಹಾಳಿ ಹಿಡಿದುಕೊಂಡು ಸೈ ಮಾಡಿ…ಸೈ ಮಾಡಿ ಅನ್ನುತ್ತಿದ್ದಾರೆ… ನಾನು ಮೊದಲೇ ಸಮಾಜಜೀವಿ..ಇದರಿಂದ ನನಗೆ ತಲೆಕೆಟ್ಟು ಹೋಗಿದೆ…ಯಾರಾಗುತ್ತಾರೆ ಎಂದು ನಿಮ್ಮ ಗಿಳಿಶಾಸ್ತ್ರ ಹೇಳಿ ಸ್ವಾಮಿ ಅಂದ.
ಅದಕ್ಕೆ ಸ್ವಲ್ಪ ಹೊತ್ತು ಸುಮ್ಮನಿದ್ದ ಆತ ಓಹೋ ಇದಾ ಸಮಚಾರ? ಎಂದು ಪಕ್ಕದಲ್ಲಿದ್ದ ಗಿಳಿಯ ಪಂಜರ ಮುಂದಿಟ್ಟುಕೊಂಡ. ಪಂಜರದ ಮುಂದೆಯೇ ಇಸ್ಪೀಟ್ ಕಾರ್ಡಿನಂಥವು ಇಟ್ಟುಕೊಂಡು…ಅರೆರೆರೆ ಗಿಣಿರಾಮಾ… ಅರೆರೆರೆ ಗಿಣಿರಾಮಾ…ಹೊರಬಂದು ನಿಜ ಹೇಳು…ನಿನ್ನ ಮೇಲೆ ಹಜಾರ್ ಮಂದಿ ನಂಬಿಕೆ ಇದೆ ಎಂದು ಅಂದು ಪಂಜರದಿಂದ ಗಿಳಿಯನ್ನು ಹೊರಬಿಟ್ಟ…
ಆ ಗಿಳಿ ಹೊರಬಂದು ಇಬ್ಬರನ್ನೂ ಪಿಳಿಪಿಳಿ ನೋಡಿ…ಕಾರ್ಡು ಕಡೆ ಹೋಗುವುದನ್ನು ಬಿಟ್ಟು..ಅಲ್ಲಿ ಬಿದ್ದಿದ್ದ ಪೋಸ್ಟರ್ ನ್ನು ಎತ್ತಿ ತೆಗೆದುಕೊಂಡು ಬಂತು…ಇಬ್ಬರೂ ಅದರ ಮೇಲೆ ಏನು ಬರದಿದೆ ಎಂದು ನೋಡಿದಾಗ…ಕೆಲಸವಿಲ್ಲದ ಮುರಾಳ ಆದ ನೋಡು ಗೋಟ್ಯಾಳ ಎಂದು ಬರೆದಿತ್ತು…
























