ತಾರಾತಿಗಡಿ: ಎಲ್ಲರೂ ಹೋಗುತ್ತೇನೆ ಅನ್ತಾರೆ ನಾನೂ ಡೆಲ್ಲಿಗೆ ಹೋಗುತ್ತೇನೆ…

0
21

ತಾರಾತಿಗಡಿ: ಪಂಚಾಯ್ತಿ ಪಾಮಣ್ಣನೂ ಡೆಲ್ಲಿಗೆ ಹೋಗುತ್ತಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ, ಆತನ ಮನೆಗೆ ಜನ ಸಾಲು ಸಾಲಾಗಿ ಹೋಗತೊಡಗಿದರು. ಕರಿಭಾಗೀರತಿಯಂತೂ ಮುಂಜಾನೆ ಹೋದವಳು ಸಂಜೆವರೆಗೂ ಅಲ್ಲಿಯೇ ಇದ್ದು ಯಾರು ಹೋದರು? ಯಾರು ಬಂದರು ಎಂದು ಲೆಕ್ಕ ಇಡುತ್ತಿದ್ದಳು. ಹತ್ತಾರು ಚಾನಲ್‌ನವರು ಬಂದು ಪಾಮಣ್ಣ ಬಾಯಿಗೆ ಮೈಕ್ ಹಿಡಿದು ಏನ್ಸಾ…ನೀವು ಡೆಲ್ಲಿಗೆ ಹೋಗುತ್ತಿದ್ದೀರಂತೆ ಎಂದು ಕೇಳುತ್ತಿದ್ದರು.

ಹೌದು ಹೋಗುತ್ತಿದ್ದೇನೆ. ಎಲ್ಲ ಬುಕ್ ಆಗಿದೆ ಎಂದು ಹೇಳಿದ ಕೂಡಲೇ ಅವರವರ ಚಾನಲ್‌ಗಳಲ್ಲಿ ಇವರೂ ಸಹ ಡೆಲ್ಲಿಗೆ ಹೋಗುತ್ತಿದ್ದಾರೆ. ಈ ಬಾರಿ ಹೋದವರು ಹಾಗೆಯೇ ಬರುವುದಿಲ್ಲ. ಬೇಕಿದ್ದರೆ ನೋಡಿ ಎಂದೆಲ್ಲ ಹೇಳುತ್ತಿದ್ದರು. ಮಿತಭಾಷಿಗಳೂ ಸಹ ಪಾಮಣ್ಣ ಡೆಲ್ಲಿಗೆ ಹೋಗುತ್ತಿದ್ದಾನಂತೆ ಎಂದು ಮಾತನಾಡತೊಡಗಿದರು.

ಆತ ಡೆಲ್ಲಿಗೆ ಹೋಗುವ ಸುದ್ದಿ ಹತ್ತು ಹರದಾರಿಗುಂಟ ವರ್ಲ್ಡ್ ಫೇಮಸ್ ಆಗತೊಡಗಿತು. ಕುಂಟ್ನಾಗನಂತೂ ಬಸ್‌ಸ್ಟ್ಯಾಂಡಿನಲ್ಲಿ ದೀಪಾವಳಿಗೆ ತಂದದ್ದು ಉಳಿದ ಪಟಾಕಿ ಸಿಡಿಸಿದ. ಯಾಕೆ ಎಂದು ಕೇಳಿದರೆ ಪಾಮಣ್ಣ ಡೆಲ್ಲಿಗೆ ಹೊರಟಿದ್ದಾನೆ ಎಂದು ಅಂದ. ಹೆಡ್‌ಮಾಸ್ತರ ಪಡದಯ್ಯ ಈ ಬಗ್ಗೆ ಚಿಂತೆ ಮಾಡತೊಡಗಿದ. ಆತ ಡೆಲ್ಲಿಗೆ ಹೋದರೆ ಇವರಿಗೇನು? ಈ ಕಣ್ಣಿನಿಂದ ಏನೇನು ನೋಡಬೇಕೋ..? ಕಿವಿಯಿಂದ ಏನೇನು ಕೇಳಬೇಕೋ ಎಂದು ಆಕಾಶದತ್ತ ನೋಡಿ ಕೈ ಮುಗಿದ.

ಅವತ್ತು ಪಾಮಣ್ಣನ ಮೊಬೈಲ್‌ಗೆ ಪಂ.ಲೇವೇಗೌಡ ಕರೆ ಮಾಡಿ, ಏನಯ್ಯ ಡೆಲ್ಲಿಗೆ ಹೋಗುತ್ತಿದ್ದಿಯಂತೆ ಅಂದಾಗ ಹೌದು ಸಾ…ಅಂದ…ಅದಕ್ಕೆ ಅವರು ಒಳ್ಳೇದು…ನಮ್ಮ ಇವರ ಮನೆಗೆ ಹೋಗಿ ಬಾ ಅಲ್ಲೇ ಇದೆ ಎಂದು ಹೇಳಿದರು. ಸುಮಾರಣ್ಣ ಕಾಲ್ ಮಾಡಿ…ನೀ ಡೆಲ್ಲಿಗೆ ಬಂದಾಗ ನಾನು ಅಲ್ಲಿರೋಲ್ಲ ಅಂದರು. ಸಿಟ್ಯೂರಪ್ಪ ಅಂತೂ ಸ್ವಲ್ಪ ದಿನ ತಡೆದರೆ ಇಬ್ಬರೂ ಒಟ್ಟಿಗೆ ಹೋಗಬಹುದಿತ್ತು ಎಂದು ತಿಳಿಸಿದರು. ಮದ್ರಾಮಣ್ಣ ಕಾಲ್ ಮಾಡಿ…ಏನಯ್ಯ ನೀನೂ ಹೊರಟಿಯಂತೆ ಎಂದು ಕೇಳಿದಾಗ…ಹೂಂ ಸಾರ್ ಎಂದ.

ಹೀಗೆ ಎಲ್ಲರೂ ಕಾಲ್ ಮಾಡಿ ಕೇಳಿದರು. ಕೊನೆಗೆ ಕಂಟ್ರಂಗಮ್ಮತ್ತಿ ಮನೆಯಹತ್ತಿರ ಬಂದು..ಏನ್ ಪಾಮಣ್ಣ ಅಂದಾಗ..ಏನಪಾ ಡೆಲ್ಲಿಗೆ ಹೊರಟೀಯಂತೆ ಅಂದಾಗ ಆತ ಹೌದು ಅಂದ….ಒಕೆ…ಡೆಲ್ಲಿಗೆ ಯಾಕೆ ಹೊರಟೆ ಅಂದ ಕೂಡಲೇ…ಅಲ್ಲ ಇವರೇ… ಯಾರು ಡೆಲ್ಲಿಗೆ ಹೋಗುತ್ತೇನೆ ಅಂತಾರೋ ಅವರ ಸುದ್ದಿ ಪೇಪರ್‌ಗಳಲ್ಲಿ, ಟಿವಿಗಳಲ್ಲಿ ಬರುತ್ತದೆ…ಅದಕ್ಕೆ ನಾನು ಯಾಸೆ ಎ ಪಂಚಾಯ್ತಿ ಮೆಂಬರಾಗಿ ಡೆಲ್ಲಿಗೆ ಹೋಗುತ್ತೇನೆ ಎಂದು ಹೇಳಿದ್ದೇನೆ…ನಮ್ಮದೂ ಎಲ್ಲ ಕಡೆ ಬರುತ್ತದೆ ಎಂದು ಹೇಳಿದ. “

Previous articleಚೀನಾಗೆ ಟಕ್ಕರ್ ಕೊಡುವಂತೆ ಕಂಪನಿ ಕಟ್ಟಿದ ಸಾಹಸಿ ಕನ್ನಡಿಗ
Next articleWorld Cup ಅಚ್ಚು: ನಾಯಕಿ ಹರ್ಮನ್‌ಪ್ರೀತ್‌ರ ಟ್ಯಾಟೂ ಹಿಂದಿದೆ ರೋಚಕ ಕಥೆ!

LEAVE A REPLY

Please enter your comment!
Please enter your name here