ತಾರಾತಿಗಡಿ: ಹಲೋ ನಾವು ಡಿಜಿಟಲ್ ಅರೆಸ್ಟ್ ಕಂಪನಿಯವರು

0
50

ತಾರಾತಿಗಡಿ: ಚಾಲೂಗಿರಿಯಲ್ಲಿ ಭಯಂಕರ ಹೆಸರು ಮಾಡಿದ್ದ ತಿಗಡೇಸಿ ಹತ್ತು ಹರದಾರಿಗುಂಟ ಫೇಮಸ್‌ ಆಗಿದ್ದ. ಆತನ ಚಾಲೂಗಿರಿಯಿಂದಲೇ ಇಷ್ಟೆಲ್ಲ ಆಗಿದ್ದಾನೆಯೇ ಹೊರತು ಮತ್ತೇನಕ್ಕೂ ಅಲ್ಲ ಎಂದು ಮುಂಗಾಲ್ಪುಟಗಿ ಮುರುಗೇಸಿ ಎಲ್ಲರ ಮುಂದೆ ಹೇಳುತ್ತಿದ್ದ.

ಎಲ್ಲರೂ ಸೇರಿದಾಗ ತಿಗಡೇಸಿ ಚಾಲೂಗಿರಿಯ ಬಗ್ಗೆ ವರ್ಣಿಸುತ್ತಿದ್ದ ಇದರಿಂದ ತಿಗಡೇಸಿಯ ಚಾಲೂಗಿರಿಯಾದರೂ ಎಷ್ಟು ಇರಬಹುದು ಎಂದು ಎಲ್ಲರೂ ಕುತೂಹಲದಿಂದ ಇದ್ದರು. ಒಂದು ದಿನ ತಿಗಡೇಸಿಗೆ ಮಧ್ಯ-ಮಧ್ಯಾಹ್ನ ತೀರ್ಥ ಕೊಡಿಸಿ ತಿಗಡೇಸಿ ಚಾಲೂಗಿರಿಯ ಬಗ್ಗೆ ಕೇಳಿದರು.

ಮೂಡಿನಲ್ಲಿದ್ದ ಮುರಗೇಸಿಯು ಚಾಲೂಕಥೆಯನ್ನು ಹೇಳತೊಡಗಿದ. ಎಲ್ಲಿಯೂ ಒಂದುಪೈಸೆ ಕಳೆದುಕೊಳ್ಳದ ತಿಗಡೇಸಿ ಅವತ್ತು ಅದೇನು ಎಡವಟ್ಟು ಮಾಡಿಕೊಂಡನೋ ಏನೋ ತನ್ನ ಮೊಬೈಲ್‌ಗೆ ಕರೆನ್ಸಿ ಹಾಕಿಸಬೇಕು ಎಂದು ಅಂಗಡಿಗೆ ಹೋದ.

ಅಂಗಡಿಯವನಿಗೆ ಸಾವಿರ ರೂ ಹಾಕು ಎಂದು ಒಂದೇ ಒಂದು ನಂಬರ್ ಮಿಸ್ಸಾಗಿ ಹೇಳಿಬಿಟ್ಟ. ಅದ್ಯಾರಿಗೋ ಕರೆನ್ಸಿ ಹೋಯಿತು. ಅಲಾ ಇವನ ಎಂದು ಆ ನಂಬರ್ ಗೆ ಕರೆ ಮಾಡಿದ ಆತ ಎತ್ತಲಿಲ್ಲ. ಹತ್ತು ನಿಮಿಷ ಕರೆ ಮಾಡಿದ ನೋ…ವೇ. ಏನು ಮಾಡುವುದು ಎಂದು ಚಿಂತೆ ಮಾಡಿ ಕೊನೆಗೆ..

ಯಾರದ್ದೋ ನಂಬರ್‌ನಿಂದ ಕರೆ ಮಾಡಿದಾಗ ಆ ಕಡೆಯಿಂದ ಹಲೋ ಹೇಳಿ ಅಂದರು..ಆಗ ತಿಗಡೇಸಿಯು… ನಮಸ್ಕಾರ…ನಿಮ್ಮ ರಜಿಸ್ಟರ್ ಸಕ್ಸಸ್‌ಫುಲ್ ಆಗಿದೆ. ನಿಮ್ಮಂಥವರು ನಮ್ಮ ಕಂಪನಿಗೆ ಸೇರಲು ಒಪ್ಪಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯವೇ ಇರಬಹುದು ಎಂದು ಹೇಳಿದ…

ಅದಕ್ಕೆ ಆ ಕಡೆಯಿಂದ ಯಾರು ನೀವು ಏನು ರಜಿಸ್ಟ್ರೇಷನ್ ಅಂದಾಗ …ನೋಡಿ ಸಾಹೇಬರೆ ನಾವು ಡಿಜಿಟಲ್ ಅರೆಸ್ಟ್ ಕಂಪನಿಯವರು..ನೀವು ದಿನಾಲೂ ಪೇಪರ್ ನೋಡುತ್ತಿರಬಹುದು…ನಾವು ಹೇಗೆ ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು. ಇದರಲ್ಲಿ ಸಿಕ್ಕಾಪಟ್ಟೆ ಹಣ ಮಾಡಬಹುದು.

ನಮ್ಮ ಕಂಪನಿಯ ನಿಯಮದ ಪ್ರಕಾರ ಕರೆನ್ಸಿ ಕಳಿಸುತ್ತೇವೆ. ಅವರು ಒಪ್ಪಿದರೆ ಅವರು ನಮ್ಮ ಕಂಪನಿಗೆ ಸೇರಲು ಇಷ್ಟ ಪಡುತ್ತಾರೆ ಎಂದು ಅರ್ಥ. ಈಗ ನೀವು ನಮ್ಮ ಕಂಪನಿಗೆ ಸೇರಿದ್ದೀರಿ ಸಂತೋಷ ಅಂದಾಗ ಆ ಕಡೆಯಿಂದ ನೋವೇ ಹಂಗಲ್ಲ ಸರ್ ಅಂದರು..ಅದಕ್ಕೆ ತಿಗಡೇಸಿ.. ಓಕೆ.. ಇದರಲ್ಲಿ ನಿಮಗೇನೂ ಫೋರ್ಸ್ ಇಲ್ಲ.

ನೀವು ನಮ್ಮ ಕಂಪನಿ ಸೇರಿಕೊಳ್ಳದೇ ಇದ್ದರೆ ಸಾವಿರದ ಐದುನೂರು ರೂ ವಾಪಸ್ ಕಳಿಸಿ ನಿಮ್ಮ ರಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿಕೊಳ್ಳಬಹುದು ಎಂದು ಹೇಳಿದ… ಆ ಕಡೆಯಿಂದ ನಡಗುವ ಧನಿಯಲ್ಲಿ ಆಯಿತು ಸ್ವಾಮಿ ಆಯಿತು ಎಂದು ಮರುಕ್ಷಣವೇ ತಿಗಡೇಸಿ ಫೋನ್ ಪೇ ಗೆ ಸಾವಿರದ ಐನೂರು ಕಳುಹಿಸಿ ಕೈ ಮುಗಿಯುವ ಇಮೋಜಿ ಕಳುಹಿಸಿದ….

ನನ್ನ ಜತೆ ಅದೂ ಎಂದು ಮೀಸೆ ಮೇಲೆ ಕೈ ಹಾಕಿಕೊಂಡ ತಿಗಡೇಸಿ…ಇದಕ್ಕಿಂತ ಚಾಲೂಗಿರಿ ಬೇಕೇನ್ರಿ ಎಂದು ಮುಂಗಾಲ್ಪುಟಗಿ ಹೇಳಿದಾಗ ಎಲ್ಲರೂ ಭೇಷ್ ತಿಗಡೇಸಿ ಅಂದರು.

Previous articleಲಕ್ಷ್ಮಿ ಹೆಬ್ಬಾಳ್ಕರ್  ಮತ್ತೊಂದು ‘ಗ್ಯಾರಂಟಿ’ ಘೋಷಣೆ; 3 ಹೊಸ ಯೋಜನೆಗಳಿಗೆ ಚಾಲನೆ
Next articleರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಹಾಡು ರಚನೆ

LEAVE A REPLY

Please enter your comment!
Please enter your name here