RCB ಬಳಗಕ್ಕೆ ಹೊಸ ಸಾರಥಿ: ಮೆಗಾ ಹರಾಜಿಗೂ ಮುನ್ನ ದೊಡ್ಡ ಬದಲಾವಣೆ!

0
17

RCB: ವುಮೆನ್ಸ್ ಪ್ರೀಮಿಯರ್ ಲೀಗ್ನ ನಾಲ್ಕನೇ ಆವೃತ್ತಿಗೆ ರಣಕಹಳೆ ಮೊಳಗಿದೆ. ಬಹುನಿರೀಕ್ಷಿತ ಮೆಗಾ ಹರಾಜಿನ ಕಾವು ಏರುವ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಆಡಳಿತ ಮತ್ತು ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸ್ಮೃತಿ ಮಂಧಾನ ನೇತೃತ್ವದ ತಂಡವನ್ನು ಮುನ್ನಡೆಸಲು ಹೊಸ ತಂತ್ರಗಾರನ ಆಗಮನವಾಗಿದೆ.

ಲೂಕ್ ಔಟ್, ಮಲೋಲನ್ ಇನ್!: ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ತೆರವಾದ ಈ ಪ್ರಮುಖ ಸ್ಥಾನಕ್ಕೆ ಆರ್‌ಸಿಬಿ ಆಡಳಿತ ಮಂಡಳಿ, ತಮಿಳುನಾಡು ಮೂಲದ ಪ್ರತಿಭಾವಂತ ಮಾಜಿ ಕ್ರಿಕೆಟಿಗ ಮಲೋಲನ್ ರಂಗರಾಜನ್ ಅವರನ್ನು ನೇಮಕ ಮಾಡಿದೆ.

ಮಲೋಲನ್ ರಂಗರಾಜನ್ ಆರ್‌ಸಿಬಿ ಕುಟುಂಬಕ್ಕೆ ಹೊಸಬರೇನಲ್ಲ. ಈ ಹಿಂದೆ ಅವರು ಆರ್‌ಸಿಬಿ ಪುರುಷರ ಹಾಗೂ ಮಹಿಳಾ ತಂಡಗಳ ಪ್ರತಿಭಾನ್ವೇಷಣೆ (ಸ್ಕೌಟಿಂಗ್) ಮುಖ್ಯಸ್ಥರಾಗಿ ಅದ್ಭುತ ಕೆಲಸ ನಿರ್ವಹಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಅವರು ನಿಪುಣರು.

ಅಷ್ಟೇ ಅಲ್ಲದೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (CPL) ‘ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯಾಟ್ಸ್’ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಈಗ ಮುಖ್ಯ ಕೋಚ್ ಆಗಿ ಆರ್‌ಸಿಬಿ ಮಹಿಳಾ ತಂಡಕ್ಕೆ ಹೊಸ ಚೈತನ್ಯ ತುಂಬಲು ಸಜ್ಜಾಗಿದ್ದಾರೆ.

ಬೌಲಿಂಗ್ ವಿಭಾಗಕ್ಕೂ ಹೊಸ ಬಲ: ಮಲೋಲನ್ ಅವರೊಂದಿಗೆ ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಅನ್ಯಾ ಶ್ರಬ್ಸೋಲ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ನೂತನ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಶ್ರಬ್ಸೋಲ್ ಅವರ ಆಗಮನವು ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಲಿದೆ.

ಮೆಗಾ ಹರಾಜಿನ ಲೆಕ್ಕಾಚಾರ ಹೇಗಿದೆ?: ನವೆಂಬರ್ 26 ರಿಂದ 29 ರೊಳಗೆ ನಡೆಯಲಿರುವ ಡಬ್ಲ್ಯುಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ. ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿ ಗರಿಷ್ಠ 5 ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಳ್ಳಲು (Retain) ಅವಕಾಶವಿದೆ.

ರಿಟೆನ್ಶನ್ ಸ್ಲಾಬ್ ವಿವರ.

ಮೊದಲ ಆಟಗಾರ್ತಿ: 3.50 ಕೋಟಿ ರೂ.

ಎರಡನೇ ಆಟಗಾರ್ತಿ: 2.50 ಕೋಟಿ ರೂ.

ಮೂರನೇ ಆಟಗಾರ್ತಿ: 1.75 ಕೋಟಿ ರೂ.

ನಾಲ್ಕನೇ ಆಟಗಾರ್ತಿ: 1 ಕೋಟಿ ರೂ.

ಐದನೇ ಆಟಗಾರ್ತಿ: 50 ಲಕ್ಷ ರೂ.

ಒಟ್ಟಾರೆ 9.25 ಕೋಟಿ ರೂ.ಗಳನ್ನು ವ್ಯಯಿಸಿ 5 ಜನರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.

ಆರ್‌ಟಿಎಂ ಕಾರ್ಡ್ ಬಳಕೆ ಹೇಗೆ?: ಒಂದು ತಂಡ ನೇರವಾಗಿ ಐವರನ್ನು ಉಳಿಸಿಕೊಂಡರೆ, ಹರಾಜಿನಲ್ಲಿ ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಸಲು ಸಾಧ್ಯವಿಲ್ಲ. ಒಂದು ವೇಳೆ ನಾಲ್ವರನ್ನು ಮಾತ್ರ ಉಳಿಸಿಕೊಂಡರೆ, ಹರಾಜಿನಲ್ಲಿ ಒಬ್ಬ ಆಟಗಾರ್ತಿಯ ಮೇಲೆ ಆರ್‌ಟಿಎಂ ಬಳಸಬಹುದು. ಮೂವರನ್ನು ಉಳಿಸಿಕೊಂಡರೆ ಇಬ್ಬರ ಮೇಲೆ ಆರ್‌ಟಿಎಂ ಬಳಸಲು ಅವಕಾಶವಿರುತ್ತದೆ. ಒಟ್ಟಿನಲ್ಲಿ, ಉಳಿಸಿಕೊಳ್ಳುವಿಕೆ ಮತ್ತು ಆರ್‌ಟಿಎಂ ಸೇರಿ ಗರಿಷ್ಠ ಸಂಖ್ಯೆ 5 ಮೀರಬಾರದು.

ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾರನ್ನು ಉಳಿಸಿಕೊಳ್ಳಲಿದೆ, ಯಾರನ್ನು ಕೈಬಿಡಲಿದೆ ಎಂಬುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೊಸ ಕೋಚ್ ಮಲೋಲನ್ ಅವರ ನೇತೃತ್ವದಲ್ಲಿ ತಂಡ ಯಾವ ರೀತಿಯ ಹೊಸ ತಂತ್ರಗಳನ್ನು ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಸಾಯೋದು ಬೇಡಪ್ಪಾ…! ಮಗುವಿನ ಮಾತು ಕರುಳು ಹಿಂಡಿತು – ಪಣಂಬೂರು ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರ ಜೀವ ಉಳಿಯಿತು
Next article2000ದ ನೋಟು ಕೊಟ್ರೆ ದುಪ್ಪಟ್ಟು ಹಣ ಕೊಡೋದಾಗಿ Rs18 ಲಕ್ಷ ನಾಮ

LEAVE A REPLY

Please enter your comment!
Please enter your name here