ಫೋನ್‌ನಿಂದ ಮಗಳನ್ನು ದೂರ ಇರಿಸಲು ವಿನೂತನವಾಗಿ ಯೋಚಿಸಿದ ವೀಣಾ ಪೀಟರ್ | ಹವ್ಯಾಸವಾಗಿ ಆರಂಭವಾಗಿದ್ದು ಈಗ ಲಕ್ಷಾಂತರ ರೂ. ಬಿಜಿನೆಸ್
ಮಗಳಿಗೆ ಬೊಂಬೆ ತಯಾರಿಸುವ ಮೂಲಕ ಆರಂಭವಾದ ಮಹಿಳೆಯೊಬ್ಬರ ಕೌಶಲ್ಯ ಉದ್ಯಮವಾಗಿ ಪರಿವರ್ತನೆಗೊಂಡ ಪ್ರೇರಣಾದಾಯಕ ಕತೆಯಿದು. ಅವರ ಹೆಸರು ವೀಣಾ ಪೀಟರ್. ಇವರ ಕೌಶಲ್ಯ `ತಾರಾ ಡಾಲ್ ಹೌಸ್’ ಎನ್ನುವ ಉದ್ಯಮವಾಗಿ ಪರಿವರ್ತನೆಗೊಂಡು ಕೆಲವು ವರ್ಷ ಕಳೆದಿದ್ದು, ಈಗ ತಿಂಗಳಿಗೆ 2 ಲಕ್ಷ ರೂ.ಗಳಿಗೆ ಹೆಚ್ಚು ಆದಾಯವನ್ನು ತರುತ್ತಿದೆ. ಇವತ್ತು ಈ ಬೊಂಬೆ ಬ್ರ್ಯಾಂಡ್ ಬೆಂಗಳೂರಲ್ಲಿ ಜನಪ್ರಿಯ.
ತಾರಾ ಎನ್ನುವುದು ವೀಣಾ ಅವರ ಮಗಳ ಹೆಸರು. ಮಗಳು ಡಿಜಿಟಲ್ ಡಿಸ್‌ಟ್ರ್ಯಾಕ್ಷನ್‌ಗೆ ಒಳಗಾಗದಂತೆ ಮಾಡಿದ ಹಲವು ಪ್ರಯತ್ನಗಳಲ್ಲಿ ಒಂದು, ಹೊಸ ಬೊಂಬೆಗಳನ್ನು ತಯಾರು ಮಾಡಿಕೊಡುವುದು. ತಾರಾ ಬೆಳೆದ ಹಾಗೆಲ್ಲ ಅವಳಿಗೆ ತಕ್ಕಂಥ ಬೊಂಬೆಗಳು ಸಿದ್ಧಗೊಂಡವು. ಮಾರುಕಟ್ಟೆಯಲ್ಲಿ ಸಿಗುವ ಬೊಂಬೆಗಳು ಸಾಮಾನ್ಯವಾಗಿ ಪ್ಲಾಸ್ಟಿಕ್ ಅಥವಾ ಸಿಂಥೆಟಿಕ್ ವಸ್ತುವಿನಿಂದ ಸಿದ್ಧಗೊಂಡಿರುತ್ತವೆ.
ಮೊದಲನೆಯದಾಗಿ ಎಕೋ ಫ್ರೆಂಡ್ಲಿ ಆಗಿರುವುದಿಲ್ಲ. ಮಕ್ಕಳಿಗೂ ಹೆಚ್ಚು ಹಿತವಾಗಿರುವುದಿಲ್ಲ. ಮಗಳ ಮೃದುವಾದ ಕೂದಲು ಇರುವಂಥ ಬೊಂಬೆಗಳು ತಯಾರಿಸಬೇಕೆಂದು ಹೊರಟರು. ಬಟ್ಟೆ, ಉಣ್ಣೆ ಬಳಸಿ ಬೊಂಬೆಗಳನ್ನು ತಯಾರಿಸಿದರು. ವೀಣಾ ಅವರ ಸ್ನೇಹಿತರ ಮಕ್ಕಳೂ ತಮಗೆ ಅಂಥ ಬೊಂಬೆ ತಯಾರಿಸಿ ಕೊಡುವಂತೆ ಕೇಳತೊಡಗಿದರು.
ಮೊದಲು ಅವರಿಗೆಲ್ಲ ಅದನ್ನು ತಯಾರಿಸಿ ಕೊಡತೊಡಗಿದರು. ಹೀಗೆ ಕ್ರಮೇಣ ಅದೇ ಉದ್ಯಮವಾಗಿ ಪರಿವರ್ತನೆಗೊಂಡಿತು. ಇಂಥ ಬೊಂಬೆಗಳನ್ನು ತಯಾರಿಸಿ ಮೊದಲು ಸ್ಥಳೀಯ ಬೀದಿ ಬದಿಯ ಮಾರುಕಟ್ಟೆಯಲ್ಲಿಟ್ಟರು. “ನಾನು ಮೊದಲು 30 ಬೊಂಬೆಗಳನ್ನು ತಯಾರಿಸಿದೆ. ಅದಕ್ಕೆ ಎಷ್ಟು ಬೆಲೆ ಇಡಬೇಕು ಎನ್ನುವ ಅಂದಾಜೂ ನನಗೆ ಇರಲಿಲ್ಲ. ಒಂದು ಮೇಳಕ್ಕೆ ಹೋದೆ. ಅಲ್ಲಿ ಅದನ್ನಿಟ್ಟೆ. ದಿನ ಮುಗಿಯುವ ಹೊತ್ತಿಗೆ ಎಲ್ಲವೂ ಮಾರಾಟವಾಗಿದ್ದವು” ಎಂದು ತಮ್ಮ ಪ್ರಾರಂಭದ ದಿನವನ್ನು ವೀಣಾ ವಿವರಿಸುತ್ತಾರೆ.
ಅಂದರೆ ಇಂಥ ಬೊಂಬೆಗಳಿಗೆ ಬೇಡಿಕೆ ಇದೆ ಎನ್ನುವುದು ವೀಣಾ ಅವರಿಗೆ ಖಚಿತವಾಯಿತು. ಅವು ಮಕ್ಕಳಿಗೂ ಇಷ್ಟವಾಗುತ್ತದೆ ಮತ್ತು ಪೋಷಕರಿಗೂ ಚೆನ್ನ ಎನ್ನಿಸುತ್ತದೆ ಎನ್ನುವುದು ಗೊತ್ತಾಯಿತು. ಜೊತೆಗೆ ತಮ್ಮ ಬಳಿ ಇರುವ ಕೌಶಲ್ಯ ಉದ್ಯಮವಾಗಬಲ್ಲದು ಎಂದು ಅನುಭವಕ್ಕೆ ಬಂದಿತು. ಇನ್ನಷ್ಟು ಬೊಂಬೆ ತಯಾರಿಸಲಿಕ್ಕೆ ಧೈರ್ಯವೂ ಬಂದಿತು. ಉತ್ಸಾಹವೂ ಮೂಡಿತು. ಮಗಳಿಗಾಗಿಯೇ ಬೊಂಬೆ ತಯಾರು ಮಾಡಲು ಶುರು ಮಾಡಿದ್ದಲ್ಲವೆ? ಹೀಗಾಗಿ ಮಗಳ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟರು.
2023ರಲ್ಲಿ ಅಧಿಕೃತವಾಗಿ ಉದ್ಯಮ ಶುರುವಾಯಿತು. ಈ ಉದ್ಯಮದ ಯಾವುದೇ ಅನುಭವವಾಗಲಿ, ಔಪಚಾರಿಕ ಅಧ್ಯಯನವಾಗಲಿ ನಡೆದಿರಲಿಲ್ಲ. ಹೀಗಾಗಿ ವೀಣಾ ಪಿಂಟೆರೆಸ್ಟ್, ಯೂಟ್ಯೂಬ್ ಮೂಲಕ ಬೊಂಬೆಗಳ ತಯಾರಿಕೆ, ಅವುಗಳಲ್ಲಿ ಬಳಸುವ ವಸ್ತುಗಳು ಮತ್ತು ಚಿತ್ರಗಳು ಮುಂತಾದವನ್ನು ಕಲಿತರು. ತಪ್ಪಾಗಿರುವುದನ್ನು ನೋಡಿ ತಿದ್ದಿಕೊಳ್ಳುತ್ತಾ ಕಲೆಯನ್ನು ಇನ್ನಷ್ಟು ಚೆನ್ನಾಗಿ ಕೈಗೂಡಿಸಿಕೊಂಡರು.
ಕಾಟನ್ ಬಟ್ಟೆಯ ಮೇಲೆ ಮೊದಲು ಸ್ಕೆಚ್ ಹಾಕಿ, ಕತ್ತರಿಸಿ ನಂತರ ಹೊಲಿದು ಒಳಗೆ ಹತ್ತಿ ಮತ್ತು ಪಾಲಿಯೆಸ್ಟರ್ ತುಂಬಿ ತಯಾರಿಸುವ ಗೊಂಬೆಗಳು ಜನರಿಗೆ ಇಷ್ಟವಾಗ ತೊಡಗಿದವು. ಬೊಂಬೆಗಳೊಳಗೆ ಬರೀ ಹತ್ತಿ ತುಂಬಿದರೆ, ಒಂದು ಬಾರಿ ಒಗೆದ ಕೂಡಲೇ ಅದು ಕುಗ್ಗಿ ಆಕಾರಗೆಡುತ್ತದೆ ಎನ್ನುವುದು ಅನುಭವಕ್ಕೆ ಬಂದಿತು. ಹೀಗಾಗಿ ಪಾಲಿಯೆಸ್ಟರ್ ಸೇರಿಸಿದರು. ಬೊಂಬೆಗಳ ಕೂದಲನ್ನು ಉಣ್ಣೆಯಿಂದ ಮಾಡತೊಡಗಿದರು. ಅವುಗಳಿಗೆ ತೊಡಿಸುವ ಬಟ್ಟೆಗಳನ್ನು ಒಗೆಯುವ ಸಲುವಾಗಿ ತೆಗೆಯುವಂತೆ ಹೊಲಿದಿರುತ್ತದೆ.
ಮೊದಲು ಅವರೊಬ್ಬರೇ ಇದನ್ನೆಲ್ಲ ಮಾಡುತ್ತಿದ್ದರು. ಹೀಗಾಗಿ ಬೆಳಗ್ಗೆ ಬೇಗನೆ ಎದ್ದು ಮಾಡಬೇಕಾಗುತ್ತಿತ್ತು. ಆದರೆ ಬೇಡಿಕೆ ಹೆಚ್ಚಾದಂತೆಲ್ಲ, ಇದು ಒಬ್ಬರ ಕೆಲಸ ಅಲ್ಲ ಎನ್ನುವುದು ಅವರಿಗೆ ಮನದಟ್ಟಾಯಿತು. ಕೆಲಸವನ್ನು ಬೇರೆ ಮಹಿಳೆಯರಿಗೆ ಔಟ್‌ಸೋರ್ಸ್ ಮಾಡಿದರು. ಜೊತೆಗೆ ಮೂವರು ಮಹಿಳೆಯರನ್ನು ಪೂರ್ಣಾವಧಿ ನೇಮಿಸಿಕೊಂಡರು. ಫ್ಯಾಷನ್ನು, ಸಂಪ್ರದಾಯ ಎಲ್ಲವೂ ಮೇಳೈಸುವಂಥ ಬೊಂಬೆಗಳನ್ನು ತಯಾರಿಸತೊಡಗಿದ್ದಾರೆ. ಯಶಸ್ವಿ ಉದ್ಯಮಿಯೆನ್ನಿಸಿಕೊಂಡಿದ್ದಾರೆ.
ಕಡೇಗೊಂದ್ಮಾತು: ನಮ್ಮ ಬಳಿ ಇರುವ ಶಕ್ತಿ, ಕೌಶಲ್ಯವನ್ನು ಮೊದಲು ನಾವು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಉದ್ಯಮವೊಂದನ್ನು ಆರಂಭಿಸಲು ದಾರಿ ಸಿಗುತ್ತದೆ.


























