ತಿಂಗಳಿಗೆ 7 ಲಕ್ಷ ರೂ. ಆದಾಯ ಪಡೆಯುತ್ತಿರುವ ಲೋಹಿತ್ | ಹೂವಿನ ಖರೀದಿಗೆ ದೇಶದ ವಿವಿಧ ನಗರಗಳಿಂದ ಬರುವ ವ್ಯಾಪಾರಸ್ಥರು
ಹೆಸರು ಲೋಹಿತ್ ರೆಡ್ಡಿ. ಊರು ಬೆಂಗಳೂರಿನ ಕೊಮ್ಮಸಂದ್ರ. ಓದಿದ್ದು ಇಂಜಿನಿಯರಿಂಗ್. ಮಾಡುತ್ತಿರುವುದು ವಾಣಿಜ್ಯ ಹೂವಿನ ಕೃಷಿ. ತಿಂಗಳ ಆದಾಯ 7 ಲಕ್ಷಕ್ಕೂ ಜಾಸ್ತಿ. ಇದು ಪುಷ್ಪ ಕೃಷಿಯಲ್ಲಿ ಯಶಸ್ಸು ಕಂಡ ಕರ್ನಾಟಕದ ಯುವಕನ ಕತೆ. ಸಾಂಪ್ರದಾಯಿಕ ಕೃಷಿ ಕುಟುಂಬದಿಂದ ಬಂದ ಲೋಹಿತ್‌ಗೆ ಮೊದಲಿನಿಂದಲೂ ಹೂವಿನ ಕೃಷಿ ಮೇಲೆ ಆಸಕ್ತಿ. ಅವರದು ಸ್ವಂತ 4 ಎಕರೆ ಜಮೀನಿದ್ದು, ಲೋಹಿತ್ ತಂದೆ ತಾಯಿ ಅಲ್ಲಿ ರಾಗಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.
ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿಕೊಂಡು ಬಂದ ಲೋಹಿತ್, ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಲು ಹೋಗಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಲೋಹಿತ್ ಯೋಚನೆಯೇ ಬೇರೆ ಇತ್ತು. ಹೂವಿನ ಕೃಷಿ ಮಾಡುವುದರ ಕನಸು ಲೋಹಿತ್‌ಗಿತ್ತು.
ಲೋಹಿತ್ ಸೋದರ ಸಂಬಂಧಿ ಗೋಪಾಲ್ ರೆಡ್ಡಿ ಮೊದಲಿನಿಂದಲೂ ರೋಸ್ ಕೃಷಿ ಮಾಡುತ್ತಿದ್ದರು. ಲೋಹಿತ್‌ಗೆ ಪುಷ್ಪ ಕೃಷಿ ಬಗ್ಗೆ ಗಮನ ಹೋಗಿದ್ದೇ ಅಲ್ಲಿಂದ. ಇಂಜಿನಿಯರಿಂಗ್ ಮುಗಿಸಿದ ನಂತರ ತನ್ನ ಸಂಬಂಧಿಯು ಬೆಳೆಯುತ್ತಿದ್ದ ರೋಸ್ ಕಡೆ ಇನ್ನಷ್ಟು ಗಮನ ಹೋಯಿತು. ಇದೇ ವೃತ್ತಿಯಲ್ಲಿ ಮುಂದುವರಿಯಲು ನಿರ್ಧರಿಸಿದರು. 2013ರಲ್ಲಿ ಗೋಪಾಲ್ ಯುಕೆಗೆ ಶಿಫ್ಟ್ ಆದಾಗ, ಅವರ ತೋಟವನ್ನು ನೋಡಿಕೊಳ್ಳುವ ಅವಕಾಶ ಲೋಹಿತ್‌ಗೆ ಒದಗಿಬಂದಿತು.
ಇದರಲ್ಲಿ ಅನುಭವ ಪಡೆದುಕೊಂಡ ನಂತರ, 2018ರಲ್ಲಿ ಲೋಹಿತ್ 15 ಲಕ್ಷ ರೂ. ಖರ್ಚು ಮಾಡಿ ತನ್ನದೇ ಆದ ಪುಷ್ಪ ವಾಣಿಜ್ಯ ಕೃಷಿ ಆರಂಭಿಸಿದರು. ಅದರಲ್ಲಿ 8 ಲಕ್ಷ ರೂ. ಪಾಲಿಹೌಸ್ ನಿರ್ಮಾಣಕ್ಕೆ ಖರ್ಚಾಯಿತು. 4 ಲಕ್ಷ ರೂ. ನೀಡಿ 12,000 ಜರ್ಬರಾ ಗಿಡಗಳನ್ನು ಖರೀದಿಸಿದರು. ಈಗ ತಿಂಗಳಿಗೆ 40,000 ದಿಂದ 50,000 ಜರ್ಬರಾ ಹೂಗಳನ್ನು ಬೆಂಗಳೂರು ಮಾರ್ಕೆಟ್‌ಗೆ ಮಾರುತ್ತಿದ್ದಾರೆ.
ಇದರಿಂದ ಕನಿಷ್ಠ 1.5 ಲಕ್ಷ ರೂ. ಆದಾಯವಿದೆ. ಜರ್ಬರಾ ಒಂದು ಬಾರಿ ಹಾಕಿದಲ್ಲಿ ಮೂರು ವರ್ಷಗಳ ತನಕ ಹೂ ಬಿಡುತ್ತದೆ. ಈ ಕಾರಣಕ್ಕೆ ಅದನ್ನು ಲೋಹಿತ್ ಆರಿಸಿಕೊಂಡರು. ಅದಾದ ನಂತರ ಸೇವಂತಿಗೆಗೆ ಕೈ ಹಾಕಿದರು. ಆಗ ಅದನ್ನು ಕಡಿಮೆ ಜನ ಬೆಳೆಯುತ್ತಿದ್ದರು. ಬೇಡಿಕೆ ಕೂಡ ಅಷ್ಟೊಂದಿರಲಿಲ್ಲ. ಆದರೆ ಇದರಲ್ಲಿ ಮುಂದೆ ಬೇಡಿಕೆ ಬರಬಹುದು ಎನ್ನುವ ಮುಂದಾಲೋಚನೆ ಇಟ್ಟುಕೊಂಡು ಶುರು ಮಾಡಿದರು. ಅಂದುಕೊಂಡಂತೆ ಯಶಸ್ಸು ದೊರೆಯಿತು.
ಸೇವಂತಿಗೆಗೆ ಹೆಚ್ಚು ಕಾಲ ಕತ್ತಲು ಇರಬೇಕಾಗುತ್ತದೆ. ಆದರೆ ಅದರಲ್ಲೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸ್ಯಾಂಟಿನಿ, ಯೆಲ್ಲೋ ಸ್ಯಾಂಟಿನಿ, ರೆಡ್ ಕ್ಯಾಲಿಮೆರೋ ಮುಂತಾದವನ್ನು ಗುರುತಿಸಿ ಅದನ್ನು ಬೆಳೆಯಲು ಶುರು ಮಾಡಿದರು. ಅದು ಕೂಡ ಯಶಸ್ಸು ತಂದುಕೊಟ್ಟಿತು.
ಉತ್ತಮ ಗುಣಮಟ್ಟದ ಹೂಗಳನ್ನು ಬೆಳೆಯುವ ಕಡೆಗೆ ಲೋಹಿತ್ ಗಮನಕೊಟ್ಟರು. ಜನ ಹೆಚ್ಚು ದುಡ್ಡು ಕೊಟ್ಟು ಖರೀದಿಸುತ್ತಾರೆ ಎಂದ ಮೇಲೆ ಒಂದು ವಾರವಾದರೂ ಫ್ರೆಶ್ ಆಗಿರಬೇಕು ಎನ್ನುವುದು ಅವರ ನಿರೀಕ್ಷೆ.
ಅದಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಹೂಗಳನ್ನು ನೀಡುವ ಕಡೆಗೆ ಲೋಹಿತ್ ಗಮನಕೊಟ್ಟರು. ಪ್ರಾರಂಭದಲ್ಲಿ ಬೆಂಗಳೂರು ಮಾರ್ಕೆಟ್‌ಗೆ ಮಾತ್ರ ಹೂಗಳನ್ನು ಒದಗಿಸುತ್ತಿದ್ದ ಹೋಲ್‌ಸೇಲ್ ಮಾರಾಟಗಾರರಿಗೆ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ನೀಡುವುದರಲ್ಲಿ ಹೆಚ್ಚು ಲಾಭವಿದೆ ಎಂದು ಕಂಡುಕೊಂಡರು. ಮೊದಲು ಕಡಿಮೆ ಬೆಲೆಯಲ್ಲಿಯೇ ಅವರಿಗೆ ನೀಡಿ, ವಿಶ್ವಾಸ ಗಳಿಸಿದರು.
ಲೋಹಿತ್ ಯಶಸ್ಸಿಗೆ ಇನ್ನೊಂದು ಪೂರಕ ಅಂಶವಾಗಿದ್ದು, ವಿವಿಧ ನಗರಗಳಿಂದ ಆನ್‌ಲೈನ್ ಆರ್ಡರ್‌ಗಳನ್ನು ಪಡೆದುಕೊಂಡು ಅವರಿಗೆ ಫ್ರೆಶ್ ಹೂಗಳನ್ನು ಪೂರೈಸಿದ್ದು. ಅಷ್ಟೇ ಅಲ್ಲ, ಹೂಗಳು ಫ್ರೆಶ್ ಆಗಿ ಹೆಚ್ಚು ದಿನ ಇರುವಂತೆ ಕೋಲ್ಡ್ ಚೈನ್ ಸಿಸ್ಟಮ್ ಮೇಲೂ ಬಂಡವಾಳ ಹೂಡಿದರು. ಇದರಿಂದ ಗ್ರಾಹಕರಿಗೆ ಫ್ರೆಶ್ ಆಗಿ ಹೂಗಳನ್ನು ಒದಗಿಸಲು ಅನುಕೂಲವಾಯಿತು.
ದೇಶದ ವಿವಿಧ ನಗರಗಳ ಸಗಟು ವ್ಯಾಪಾರಸ್ಥರು ನೇರವಾಗಿ ಲೋಹಿತ್ ಅವರಿಂದ ಹೂಗಳನ್ನು ಖರೀದಿಸುತ್ತಾರೆ. ಇದೆಲ್ಲದರಿಂದ ಈಗ ತಿಂಗಳಿಗೆ 7 ಲಕ್ಷ ರೂ.ನಷ್ಟು ಆದಾಯವಿದೆ. ಹೂಗಳು ನಿರಂತರವಾಗಿ ಬರುತ್ತಿರಬೇಕು. ಹೀಗಾಗಿ 10 ದಿನಗಳಿಗೊಮ್ಮೆ ಅವುಗಳನ್ನು ನೆಡುತ್ತೇವೆ ಎನ್ನುವ ಲೋಹಿತ್, ತಮ್ಮ ತೋಟದಲ್ಲಿ 20ಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಯಶಸ್ವಿ ಪುಷ್ಪೋದ್ಯಮಿಯಾಗಿದ್ದಾರೆ.
ದೇಶದ ವಿವಿಧ ನಗರಗಳ ಸಗಟು ವ್ಯಾಪಾರಸ್ಥರು ನೇರವಾಗಿ ಲೋಹಿತ್ ಅವರಿಂದ ಹೂಗಳನ್ನು ಖರೀದಿಸುತ್ತಾರೆ. ಇದೆಲ್ಲದರಿಂದ ಈಗ ತಿಂಗಳಿಗೆ 7 ಲಕ್ಷ ರೂ.ನಷ್ಟು ಆದಾಯವಿದೆ. ಹೂಗಳು ನಿರಂತರವಾಗಿ ಬರುತ್ತಿರಬೇಕು. ಹೀಗಾಗಿ 10 ದಿನಗಳಿಗೊಮ್ಮೆ ಅವುಗಳನ್ನು ನೆಡುತ್ತೇವೆ ಎನ್ನುವ ಲೋಹಿತ್, ತಮ್ಮ ತೋಟದಲ್ಲಿ 20ಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
ಕಡೇಗೊಂದ್ಮಾತು: ಯಾವುದೇ ಉದ್ಯೋಗವನ್ನು ಅಚ್ಚುಕಟ್ಟಾಗಿ, ಹೊಸತನದಿಂದ ಇಷ್ಟಪಟ್ಟು ಮಾಡಿ, ಅವಕಾಶಗಳನ್ನು ಹುಡುಕಿಕೊಂಡಲ್ಲಿ ಯಶಸ್ವಿ ಉದ್ಯಮಿಯಾಗಬಹುದು.


























