ಗೃಹ ಉತ್ಪನ್ನಗಳಿಂದಲೇ ಯಶಸ್ವಿ ಉದ್ದಿಮೆ ಕಟ್ಟಿದ ಕರಾವಳಿ ಮಹಿಳೆ

0
39

ಉದ್ದಿಮೆ ಅನ್ನುವುದು ಎಲ್ಲರಿಗೂ ಅಲ್ಲ, ಅದು ಐಐಟಿ, ಐಐಎಂನಿಂದ ಹೊರಬಿದ್ದವರಿಗಷ್ಟೇ ಹೇಳಿಮಾಡಿಸಿರುವ ಕ್ಷೇತ್ರ ಎಂಬ ತಪ್ಪು ಕಲ್ಪನೆ ಇನ್ನೂ ಅನೇಕರಲ್ಲಿದೆ. ಆದರೆ ಬ್ಯುಸಿನೆಸ್ ಅಂದರೆ ಏನು..? ಒಂದು ಕಂಪನಿ ಕಟ್ಟುವುದೇ ಅಥವಾ ಏನೇನೋ ಫಾರ್ಮುಲಾ, ಮ್ಯಾಥ್ಸು, ಟೆಕ್ನಾಲಜಿಗಳನ್ನು ಅಳವಡಿಸಿ ಒಂದು ಆ್ಯಪ್ ಕಂಡು ಹಿಡಿಯುವುದೇ, ಇದಕ್ಕಾಗಿ ಐಐಟಿ, ಐಐಎಂನಲ್ಲಿ ಓದಿದ ಎಲ್ಲಾ ಜ್ಞಾನವನ್ನು ಹೊರಗೆಡಹುವುದೇ..? ಇರಬಹುದು.. ಇದು ಕೂಡ ಉದ್ದಿಮೆ ಅಥವಾ ಬ್ಯುಸಿನೆಸ್ಸೇ ಇರಬಹುದು. ಆದರೆ ಇದಷ್ಟೇ ಉದ್ದಿಮೆಯಾ..? ಖಂಡಿತ ಅಲ್ಲ. ಒಂದು ಹೋಮ್ ಪ್ರಾಡಕ್ಟ್ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದರೂ ಅದು ಉದ್ದಿಮೆಯೇ, ಅದು ಕೂಡ ಬ್ಯುಸಿನೆಸ್ಸೇ, ಅದು ಕೂಡ ಸಾಧನೆಯೇ. ಅಂಥ ಹೋಮ್ ಪ್ರಾಡಕ್ಟನ್‌ನಿಂದ ಕರ್ನಾಟಕದಲ್ಲಿ ಖ್ಯಾತಿ ಗಳಿಸಿಸುತ್ತಿರುವ ಕರಾವಳಿ ಹೆಣ್ಣುಮಗಳು ಲೀಲಾವತಿವಯರವ ಸಾಧನೆಯ ಕತೆ ಇದು.

ಇಡೀ ಮಂಗಳೂರು ಹಾಗೂ ಬಾಂಬೆಯಲ್ಲಿ ಲೀಲಾವತಿ ಅವರ ಚಕ್ಕಲಿ ಹಾಗೂ ಇತರೆ ಹೋಮ್ ಪ್ರಾಡಕ್ಟ್ಗಳು ಖ್ಯಾತಿ ಗಳಿಸಿವೆ. ಆದರೆ ಈ ಹಾದಿ ಸುಲಭದ್ದಾಗಿರಲಿಲ್ಲ. 25 ವರ್ಷಗಳ ಹಿಂದೆ, ಅಂದರೆ 1999ರಲ್ಲಿ ಸಣ್ಣ ಪ್ರಮಾಣದಲ್ಲಿ ಇವರ ಚಕ್ಕಲಿ ಉದ್ದಿಮೆ ಆರಂಭವಾಯಿತು. ಆಗ ಲೀಲಾವತಿ ಅವರ ಪತಿ ತಾವೇ ಖುದ್ದು ಸೈಕಲ್ ಮೇಲೆ ಹೋಗಿ ಅಂಗಡಿಗಳಲ್ಲಿ ಚಕ್ಕಲಿ ಮಾರಿ ಬರುತ್ತಿದ್ದರು. ಇದಾದ ಕೆಲ ವರ್ಷಗಳ ನಂತರ ತಮ್ಮ ಈ ಹೋಮ್ ಪ್ರಾಡಕ್ಟ್ ಉದ್ದಿಮೆಯನ್ನು ಇನ್ನಷ್ಟು ವಿಸ್ತರಿಸಲು ಬಯಸಿದ ಲೀಲಾವತಿ ಅವರು ಚಕ್ಕಲಿ ಫ್ಯಾಕ್ಟರಿಗಾಗಿ ಸಾಲ ಪಡೆಯಲು ಮುಂದಾದರು. ಆದರೆ ಇದಕ್ಕೆ ತರಬೇತಿಯ ಸರ್ಟಿಫಿಕೇಟ್ ಕೇಳಿದಾಗ ರುಡ್‌ಸೆಟ್‌ನಿಂದ ಟ್ರೇನಿಂಗ್ ಪಡೆದುಕೊಂಡು, ಆನಂತರ 1 ಲಕ್ಷದ ಸಾಲದಲ್ಲಿ ಸುಮಾರು 2000 ಸ್ಕ್ವೇರ್‌ಫೂಟ್ ಜಾಗದಲ್ಲಿ ತಮ್ಮದೇ ಸ್ವಂತ ಚಕ್ಕಲಿ ಫ್ಯಾಕ್ಟರಿ ಶುರು ಮಾಡುತ್ತಾರೆ. ಇದು 2004. ಅಲ್ಲಿಂದ ಇಲ್ಲಿಯವರೆಗೆ ಲೀಲಾವತಿ ಅವರ `ದೇವಿ ಹೋಮ್ ಪ್ರಾಡಕ್ಟ್’ ಉದ್ದಿಮೆ ಯಶಸ್ವಿಯಾಗಿ ನಡೆಯುತ್ತಿದೆ.

ಗಂಟೆಗೆ 60 ಕೇಜಿ ಸೇಲ್: ಮೊದಲೆಲ್ಲ ಕೈಯಲ್ಲೇ ಲೀಲಾವತಿ ಹಾಗೂ ಅವರ ಟೀಂ ಚಕ್ಕುಲಿ ತಯಾರಿ ಮಾಡುತ್ತಿತ್ತು. ಕೆಲ ವರ್ಷಗಳ ನಂತರ ಅದಕ್ಕೆಂದೇ ಅತ್ಯಾಧುನಿಕ ಮಷಿನ್ ಒಂದನ್ನು ತರಿಸಿ ಈಗ ಅದರಲ್ಲೇ ಸುಮಾರು 12000 ಕೇಜಿ ಚಕ್ಕುಲಿ ತಯಾರಿ ಮಾಡಲಾಗುತ್ತದೆ.

ಇಲ್ಲಿ ಹೆಚ್ಚು ಕಡಿಮೆ 25ಕ್ಕೂ ಹೆಚ್ಚು ರೀತಿಯ ಚಕ್ಕುಲಿಗಳನ್ನು ತಯಾರಿ ಮಾಡುತ್ತಾರೆ. ಸಾಮಾನ್ಯ ಚಕ್ಕುಲಿಯಿಂದ ಹಿಡಿದು ಬೀಟ್‌ರೂಟ್ ಚಕ್ಕುಲಿಯವರೆಗೆ ಇನ್ನೂ ಅನೇಕ ಥರದ ಉತ್ಪನ್ನಗಳು ಇಲ್ಲಿ ಸಿಗುತ್ತವೆ.

ಒಂದು ಉದ್ದಿಮೆ ಗೆಲ್ಲಲು ಏನು ಮುಖ್ಯ?: `ಒಳ್ಳೆಯ ಗುಣಮಟ್ಟದ ಉತ್ಪನ್ನ ಕೊಡುವುದು, ಸರಿಯಾದ ಸಮಯಕ್ಕೆ ಅದನ್ನು ಸಪ್ಲೈ ಮಾಡುವುದು’ ಇದೇ ಯಶಸ್ವಿ ಉದ್ದಿಮೆಯ ರಹಸ್ಯ ಎನ್ನುತ್ತಾರೆ ಲೀಲಾವತಿ ಅವರು.

50000, 1 ಲಕ್ಷ ದುಡಿಯೋಕೆ ಸಿಟಿಗೆ ಹೋಗ್ಬಾರ್ದು: 25000, 50000 ಸಾವಿರ ಅಥವಾ ಒಂದು ಲಕ್ಷ ದುಡಿಯೋದಕ್ಕಂತ ಊರು ಬಿಟ್ಟು ಸಿಟಿಗಳಿಗೆ ಹೋಗಬಾರದು. ನಾವಿರುವ ಊರಿನಲ್ಲೇ ಏನಾದರೊಂದು ಮಾಡಬೇಕು ಎನ್ನುತ್ತಾರೆ ಲೀಲಾವತಿ ಅವರು. ಇಂಥ ಬಯಕೆ ಅಥವಾ ಮಹತ್ತರವಾದ ಉದ್ದಿಶ್ಯಗಳು ಇದ್ದಾಗ ದಾರಿಗಳು ತನ್ನಿಂತಾನೆ ತೆರೆದುಕೊಳ್ಳುತ್ತವೆ ಎನ್ನುವುದಲ್ಲಿ ಸಂಶಯವೇ ಇಲ್ಲ.

ಆರಂಭದಲ್ಲಿದ್ದ ಶ್ರದ್ಧೆಯೇ ಇಂದೂ ಇದೆ: ಚಕ್ಕುಲಿ ವ್ಯಾಪಾರ ಶುರು ಮಾಡುವ ಆರಂಭದಲ್ಲಿ ಇದ್ದ ಶ್ರದ್ಧೆಯೇ ಈಗಲೂ ನಮ್ಮಲಿದೆ. ಈ ಕೆಲಸ ಬಿಟ್ಟು ಬೇರೆಲ್ಲೂ ನಾವು ಗಮನ ಕೊಡುವುದಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಅದೇ ನಮ್ಮ ತಲೆಯಲ್ಲಿರುತ್ತದೆ. ಉಳಿದದ್ದೆಲ್ಲವೂ ನಮಗೆ ಸೆಕೆಂಡರಿ ಎನ್ನುವ ಲೀಲಾವತಿ ಅವರ ಮಾತುಗಳು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಮಾದರಿಯಾಗುತ್ತವೆ.

Previous articleಸರ್ಕಾರದ ನಿಯಂತ್ರಣಕ್ಕೆ ಆ್ಯಂಬುಲೆನ್ಸ್ ಸೇವೆ
Next articleಟ್ರಂಪ್ ಹೊಸ ರೂಲ್: ಅಮೆರಿಕಕ್ಕೆ ಹೋಗೋದು ಈಗ ಇನ್ನೂ ಕಷ್ಟ!

LEAVE A REPLY

Please enter your comment!
Please enter your name here