ಬೆಂಗಳೂರು: ವಿಜ್ಞಾನದ ಸಂಕೀರ್ಣ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಕೇಳಿ ಗೊಂದಲಕ್ಕೀಡಾಗುವ ಮಕ್ಕಳು ಮತ್ತು ಪೋಷಕರಿಗೆ ಇಲ್ಲೊಂದು ಸಿಹಿ ಸುದ್ದಿ.
ಬೆಂಗಳೂರಿನ ಜಯನಗರದಲ್ಲಿರುವ ‘ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಈ ತಿಂಗಳು ಪೂರ್ತಿ ವಿಜ್ಞಾನದ ರಸದೌತಣವನ್ನು ಅಚ್ಚ ಕನ್ನಡದಲ್ಲಿ ಉಣಬಡಿಸುವ ವಿನೂತನ ಅಭಿಯಾನವನ್ನು ಆರಂಭಿಸಿದೆ.
ಇದು ಕೇವಲ ವಿವರಣೆ ಮಾತ್ರವಲ್ಲ, ಕನ್ನಡದ ನುಡಿಗಟ್ಟುಗಳ ಹಿಂದಿರುವ ವಿಜ್ಞಾನವನ್ನು ತಿಳಿಸುವ ಮೂಲಕ ಜ್ಞಾನ ಮತ್ತು ಮನರಂಜನೆಯನ್ನು ಒಂದೇ ಸೂರಿನಡಿ ತಂದಿದೆ.
ಕನ್ನಡದಲ್ಲೇ ವಿಜ್ಞಾನದ ಸಂವಾದ: ಈ ಕೇಂದ್ರಕ್ಕೆ ನೀವು ಭೇಟಿ ನೀಡಿದರೆ, ಅಲ್ಲಿರುವ 80ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳ ಹಿಂದಿನ ವೈಜ್ಞಾನಿಕ ರಹಸ್ಯಗಳನ್ನು ಸಿಬ್ಬಂದಿ ನಿಮಗೆ ಶುದ್ಧ ಕನ್ನಡದಲ್ಲಿ ವಿವರಿಸುತ್ತಾರೆ.
ಅಷ್ಟೇ ಅಲ್ಲ, ‘ನೀವು ಬಳಸುವ ಈ ನುಡಿಗಟ್ಟಿನ ಹಿಂದಿನ ವಿಜ್ಞಾನ ಏನು ಗೊತ್ತೇ?’ ಅಥವಾ ‘ಕರ್ನಾಟಕದ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?’ ಎಂಬಂತಹ ಪ್ರಶ್ನೆಗಳನ್ನು ಕೇಳುವ ಮೂಲಕ, ನಮ್ಮ ದೈನಂದಿನ ಬದುಕಿನೊಂದಿಗೆ ವಿಜ್ಞಾನವನ್ನು ಬೆಸೆಯುವ ಒಂದು ಅದ್ಭುತ ಪ್ರಯತ್ನ ಇಲ್ಲಿ ನಡೆಯುತ್ತಿದೆ.
ಇದು ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ವಿಷಯವಾಗಿ ನೋಡದೆ, ನಮ್ಮ ಸಂಸ್ಕೃತಿಯ ಭಾಗವಾಗಿ ಅರಿಯಲು ಸಹಾಯ ಮಾಡುತ್ತದೆ.
ವಾರಾಂತ್ಯದಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಾಗಾ: ಈ ಕನ್ನಡ ಅಭಿಯಾನವನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಲು, ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳಿಗಾಗಿಯೇ ಎರಡು ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
ಬಣ್ಣಗಳ ಲೋಕ (ಟೆಕ್ಸ್‌ಟೈಲ್ಸ್ ವರ್ಕ್‌ಶಾಪ್): ಬಟ್ಟೆಗಳಿಗೆ ಬಣ್ಣ ನೀಡುವುದು ಹೇಗೆ? ರೇಷ್ಮೆಯಂತಹ ನೂಲು ಎಲ್ಲಿಂದ ಬರುತ್ತದೆ? ಇದರ ಹಿಂದಿರುವ ವಿಜ್ಞಾನವೇನು? ಎಂಬುದನ್ನು ಮಕ್ಕಳು ಇಲ್ಲಿ ಪ್ರಾಯೋಗಿಕವಾಗಿ ಕಲಿಯಬಹುದು.
ಧ್ವನಿಯ ವಿಜ್ಞಾನ (ಸೈನ್ಸ್ ಆಫ್ ಸೌಂಡ್): ನಮ್ಮ ಕನ್ನಡದ ಅಕ್ಷರಗಳ ರಚನೆಗೂ, ನಾವು ಮಾತನಾಡುವ ಧ್ವನಿಗೂ ವೈಜ್ಞಾನಿಕ ಸಂಬಂಧವಿದೆ. ಈ ಕಾರ್ಯಾಗಾರದಲ್ಲಿ, ಭಾಷೆ ಮತ್ತು ಧ್ವನಿಯ ಹಿಂದಿನ ವಿಜ್ಞಾನವನ್ನು ಅತ್ಯಂತ ಸರಳವಾಗಿ ವಿವರಿಸಲಾಗುತ್ತದೆ.
ಈ ಕಾರ್ಯಾಗಾರಗಳಿಗೆ ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಏನಿದು ಪರಮ್ ಸೈನ್ಸ್ ಸೆಂಟರ್?: ಜಯನಗರ 7ನೇ ಬ್ಲಾಕ್‌ನಲ್ಲಿರುವ ಈ ಕೇಂದ್ರವು ವಿಜ್ಞಾನವನ್ನು ಕೇವಲ ಓದುವುದಲ್ಲ, ಅದನ್ನು ಅನುಭವಿಸಿ ಕಲಿಯುವ ತಾಣವಾಗಿದೆ. ಕೈನೆಟಿಕ್, ಡಿಜಿಟಲ್, ಇಲ್ಯೂಷನ್ ಸೇರಿದಂತೆ ಆರು ವಿಭಿನ್ನ ಗ್ಯಾಲರಿಗಳಲ್ಲಿ, ವಿಜ್ಞಾನದ ತತ್ವಗಳನ್ನು ಆಟಿಕೆಗಳ ಮೂಲಕ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಅರ್ಥಮಾಡಿಕೊಳ್ಳುವ ಅವಕಾಶ ಇಲ್ಲಿದೆ.
ಭವಿಷ್ಯದ ಬೃಹತ್ ಯೋಜನೆ: ಚನ್ನೇನಹಳ್ಳಿಯಲ್ಲಿ ‘ಪರಮ್ ಸಂಸ್ಕೃತಿ ಕೇಂದ್ರ’: ಈ ಸಂಸ್ಥೆಯು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಭಾರತದ ಅತಿದೊಡ್ಡ ‘ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ’ವನ್ನು ನಿರ್ಮಿಸುತ್ತಿದೆ.
ಇದು ಕೇವಲ ಆಧುನಿಕ ವಿಜ್ಞಾನವಲ್ಲದೆ, ನಮ್ಮ ಪ್ರಾಚೀನ ಭಾರತೀಯ ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಒಂದೇ ಸೂರಿನಡಿ ತರುವ ಬೃಹತ್ ಯೋಜನೆಯಾಗಿದೆ. ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಮಳಿಗೆಗಳು ಮತ್ತು ಅತ್ಯುತ್ತಮ ಸೌಲಭ್ಯಗಳೊಂದಿಗೆ, ಇದು ಏಷ್ಯಾದಲ್ಲೇ ಒಂದು ಶ್ರೇಷ್ಠ ಕಲಿಕಾ ಮತ್ತು ಮನರಂಜನಾ ಕೇಂದ್ರವಾಗಿ ರೂಪುಗೊಳ್ಳಲಿದೆ.


























