ಹೈಡ್ರೋಜನ್-ಚಾಲಿತ ವಾಹನಗಳ ಬಿಡುಗಡೆ

ದೇಶದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್ ಪ್ರಯೋಗ: ಭಾರತದ ಹಸಿರು ಸಾರಿಗೆ ಕ್ಷೇತ್ರದ ಭವಿಷ್ಯದ ಹಾದಿಯನ್ನು ತೆರೆದ ಟಾಟಾ ಮೋಟಾರ್ಸ್

16 ಟ್ರಕ್‌ಗಳು ಪ್ರಮುಖ ಸರಕು ಮಾರ್ಗಗಳಲ್ಲಿ ಸಾಗಲಿದ್ದು, ಇಂಗಾಲ ಶೂನ್ಯ ಭವಿಷ್ಯಕ್ಕೆ ದಾರಿ ಮಾಡಿಕೊಡಲಿವೆ

ನವದೆಹಲಿ: ಹೈಡ್ರೋಜನ್ ಭಾರತದ ಸುಸ್ಥಿರ ಮತ್ತು ಇಂಗಾಲ ಶೂನ್ಯ ಭವಿಷ್ಯಕ್ಕೆ ನೆರವಾಗುವ ಪ್ರಮುಖ ಇಂಧನವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ, ಟಾಟಾ ಮೋಟಾರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರೊಂದಿಗೆ ದೇಶದ ಮೊದಲ ಹೈಡ್ರೋಜನ್ ಟ್ರಕ್ ಪ್ರಯೋಗಗಳಿಗೆ ಹಸಿರು ನಿಶಾನೆ ತೋರಿಸಿ ಬಳಿಕ ಮಾತನಾಡಿದ ಅವರು ಈ ಪ್ರಯೋಗವು ಭಾರತದ ಸಾರಿಗೆ ವಲಯದಲ್ಲಿ ಹಸಿರು ಹೈಡ್ರೋಜನ್‌ ನ ಸಾಮರ್ಥ್ಯವನ್ನು ತೋರಿಸಿ ಕೊಡಲಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನ ಭಾಗವಾಗಿ ನಡೆಯುತ್ತಿರುವ ಈ ಪ್ರಯೋಗವು ಭಾರತದ ಇಂಧನ ಸ್ವಾತಂತ್ರ್ಯ ವಿಚಾರದಲ್ಲಿ ನೆರವಾಗಲಿದೆ ಮತ್ತು ಜಾಗತಿಕ ಹವಾಮಾನ ಗುರಿ ಸಾಧನೆಗೆ ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಟಾಟಾ ಮೋಟಾರ್ಸ್ ಗೆ ಅಭಿನಂದನೆ ಎಂದರು.

ಹೈಡ್ರೋಜನ್ ಭವಿಷ್ಯದ ಇಂಧನ: ದೇಶದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಹೈಡ್ರೋಜನ್ ಭವಿಷ್ಯದ ಇಂಧನವಾಗಿದ್ದು, ಭಾರತದ ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಿ, ಇಂಧನ ಸ್ವಾವಲಂಬನೆ ತರುವ ಸಾಮರ್ಥ್ಯ ಹೊಂದಿದೆ. ಈ ಹೊಸ ಪ್ರಯೋಗವು ಭಾರೀ ಟ್ರಕ್‌ ಗಳ ವಿಭಾಗದಲ್ಲಿ ಸುಸ್ಥಿರ ಸಾರಿಗೆಯನ್ನು ಅಳವಡಿಸುವ ವಿಚಾರದಲ್ಲಿ ವೇಗ ಒದಗಿಸಲಿದೆ ಮತ್ತು ಭವಿಷ್ಯದಲ್ಲಿ ಇಂಗಾಲ ರಹಿತ ಸಾರಿಗೆ ಸಾಧಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಟಾಟಾ ಮೋಟಾರ್ಸ್‌ ಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

2070ರ ವೇಳೆಗೆ ಇಂಗಾಲ ಶೂನ್ಯತೆ ಸಾಧಿಸುವ ಭಾರತದ ಗುರಿಯತ್ತ ಸಾಗುವ ಮಹತ್ವದ ಹೆಜ್ಜೆಯಾಗಿ, ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮೊತ್ತ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಭಾರೀ ಟ್ರಕ್‌ ಗಳ ಪ್ರಯೋಗವನ್ನು ಆರಂಭಿಸಿದೆ. ಸುದೀರ್ಘ ದೂರದ ಸರಕು ಸಾಗಣೆ ಕ್ಷೇತ್ರವನ್ನು ಸುಸ್ಥಿರಗೊಳಿಸುವ ಈ ಪ್ರಯೋಗವನ್ನು ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮಾನ್ಯ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದರು. ಟಾಟಾ ಮೋಟಾರ್ಸ್‌ ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಹಾಗೂ ಭಾರತ ಸರ್ಕಾರ ಮತ್ತು ಎರಡು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದರು.

ಈ ಐತಿಹಾಸಿಕ ಕಾರ್ಯದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಹಸಿರು ಇಂಧನ ಗುರಿಯನ್ನು ಸಾಧಿಸುವುದರ ಜೊತೆಗೆ ಸುಸ್ಥಿರ ಸಾರಿಗೆ ಉತ್ಪನ್ನಗಳ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ ಅಡಿಯಲ್ಲಿ ನವೀಕರಿಸಬಹುದಾದ ಶಕ್ತಿ ಸಚಿವಾಲಯದಿಂದ ಧನಸಹಾಯ ಪಡೆದು ನಡೆಸುತ್ತಿರುವ ಈ ಪ್ರಯೋಗದ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ಗೆದ್ದಿದೆ. ಇದು ಸುದೀರ್ಘ ದೂರದ ಸರಕು ಸಾಗಣೆಗೆ ಹೈಡ್ರೋಜನ್ ಚಾಲಿತ ವಾಹನಗಳ ವಾಣಿಜ್ಯ ಬಳಕೆಯ ಕುರಿತು ಹೆಚ್ಚು ಅರಿಯುವಲ್ಲಿ ಮತ್ತು ಅಗತ್ಯ ಮೂಲಸೌಕರ್ಯ ಸ್ಥಾಪನೆ ವಿಚಾರದಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಪ್ರಯೋಗವು 24 ತಿಂಗಳವರೆಗೆ ನಡೆಯಲಿದ್ದು, ಈ ಪ್ರಯೋಗದಲ್ಲಿ ವಿವಿಧ ಸಂರಚನೆಗಳು ಮತ್ತು ಸಾಗಣೆ ಸಾಮರ್ಥ್ಯಗಳ 16 ಅತ್ಯಾಧುನಿಕ ಹೈಡ್ರೋಜನ್ ಚಾಲಿತ ಟ್ರಕ್‌ಗಳನ್ನು ಬಳಸಲಾಗುವುದು. ಹೈಡ್ರೋಜನ್ ಇಂಟರ್ನಲ್ ಕಂಬಷನ್ ಎಂಜಿನ್ (ಹೆಚ್2-ಐಸಿಇ) ಮತ್ತು ಪ್ಯೂಯಲ್ ಸೆಲ್ (ಹೆಚ್2-ಎಫ್ ಸಿ ಇ ವಿ) ತಂತ್ರಜ್ಞಾನಗಳನ್ನು ಹೊಂದಿರುವ ಈ ಟ್ರಕ್‌ಗಳನ್ನು ಮುಂಬೈ, ಪುಣೆ, ದೆಹಲಿ- ಎನ್‌ಸಿಆರ್, ಸೂರತ್, ವಡೋದರಾ, ಜಮ್‌ ಶೆಡ್‌ಪುರ ಮತ್ತು ಕಾಳಿಂಗನಗರದ ಪ್ರಮುಖ ಸರಕು ಮಾರ್ಗಗಳಲ್ಲಿ ಪರೀಕ್ಷಿಸಲಾಗುವುದು.

ನಿರಂತರ ಆವಿಷ್ಕಾರ: ಭಾರತವನ್ನು ಹಸಿರು, ಸ್ಮಾರ್ಟ್ ಮತ್ತು ಸುಸ್ಥಿರ ಸಾರಿಗೆಯ ಕಡೆಗೆ ಸಾಗುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಇರುವುದಕ್ಕೆ ಟಾಟಾ ಮೋಟಾರ್ಸ್ ಹೆಮ್ಮೆ ಪಡುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ದೀರ್ಘಕಾಲದ ಬದ್ಧತೆ ಹೊಂದಿರುವ ಕಂಪನಿಯಾಗಿ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಸಾರಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನಾವು ನಿರಂತರವಾಗಿ ಆವಿಷ್ಕಾರವನ್ನು ಮಾಡುತ್ತಿದ್ದೇವೆ. ಇಂದು, ಈ ಹೈಡ್ರೋಜನ್ ಟ್ರಕ್ ಪ್ರಯೋಗಗಳನ್ನು ಆರಂಭಿಸುವ ಮೂಲಕ ಸುದೀರ್ಘ ದೂರದ ಸಾರಿಗೆಗಾಗಿ ಸ್ವಚ್ಛ, ಇಂಗಾಲ ಶೂನ್ಯ ಇಂಧನ ಬಳಕೆಗೆ ಪರಿವರ್ತನೆ ಹೊಂದುವ ನಿಟ್ಟಿನಲ್ಲಿ ಮುಂಚೂಣಿಯ್ಲಿ ನಿಲ್ಲುವ ಮೂಲಕ ಈ ಪರಂಪರೆಯನ್ನು ಮತ್ತಷ್ಟು ಮುಂದುವರಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಇದನ್ನು ಸಾಧ್ಯವಾಗಿಸಿದ ಭಾರತ ಸರ್ಕಾರದ ದೂರದೃಷ್ಟಿಯ ನಾಯಕತ್ವಕ್ಕೆ ನಾವು ಕೃತಜ್ಞರಾಗಿದ್ದೇವೆ ಮತ್ತು ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಒದಗಿಸುವ ಸುಸ್ಥಿರ, ಭವಿಷ್ಯಕ್ಕೆ ಸಿದ್ಧವಾದ ಸಾರಿಗೆ ಉತ್ಪನ್ನಗಳನ್ನು ನಿರ್ಮಿಸುವಲ್ಲಿ ನಮ್ಮ ಪಾತ್ರವನ್ನು ನಿಭಾಯಿಸಲು ನಾವು ಬದ್ಧರಾಗಿದ್ದೇವೆ.

ಗಿರೀಶ್ ವಾಘ್: ಟಾಟಾ ಮೋಟಾರ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ

ಈ ಪ್ರಯೋಗದಲ್ಲಿ ಬಳಸಲಾಗುವ ಟ್ರಕ್‌ ಗಳು ಹೈಡ್ರೋಜನ್ ಆಂತರಿಕ ದಹನ ಎಂಜಿನ್ (H2ICE) ಮತ್ತು ಇಂಧನ ಸೆಲ್ ಎಲೆಕ್ಟ್ರಿಕ್ ವಾಹನ (FCEV) ತಂತ್ರಜ್ಞಾನಗಳನ್ನು ಒಳಗೊಂಡಿವೆ. ಇದರಲ್ಲಿ ಟಾಟಾ ಪ್ರಿಮಾ H.55S ಮತ್ತು H.28 ಟ್ರಕ್‌ಗಳಿದ್ದು, 300-500 ಕಿ.ಮೀ. ದೂರ ಚಲಿಸಬಲ್ಲವು. ಇವು ಸುರಕ್ಷತೆ, ಚಾಲಕರ ಸೌಲಭ್ಯ ಮತ್ತು ಉತ್ತಮ ಕಾರ್ಯಕ್ಷಮತೆಗೆ ಮಾನದಂಡ ಆಗಿವೆ. ಪ್ರೀಮಿಯಂ ಪ್ರೈಮಾ ಕ್ಯಾಬಿನ್ ಮತ್ತು ಅತ್ಯಾಧುನಿಕ ಚಾಲಕ ಸಹಾಯ ಸುರಕ್ಷತಾ ಫೀಚರ್ ಗಳನ್ನು ಒಳಗೊಂಡಿರುವ ಇವು, ಚಾಲಕರ ಅನುಕೂಲತೆಯನ್ನು ಹೆಚ್ಚಿಸುತ್ತವೆ, ಆಯಾಸವನ್ನು ಕಡಿಮೆ ಮಾಡುತ್ತವೆ ಮತ್ತು ಉತ್ಪಾದಕತೆಯನ್ನು ಸುಧಾರಿಸುತ್ತವೆ. ಜೊತೆಗೆ ಟ್ರಕ್ಕಿಂಗ್‌ ವಿಭಾಗದಲ್ಲಿ ಸುರಕ್ಷತೆಯಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಟ್ಟಿವೆ.

ಟಾಟಾ ಮೋಟಾರ್ಸ್ ಬ್ಯಾಟರಿ ಎಲೆಕ್ಟ್ರಿಕ್, ಸಿಎನ್‌ಜಿ, ಎಲ್‌ಎನ್‌ಜಿ, ಹೈಡ್ರೋಜನ್ ಇಂಟರ್ನಲ್ ಕಂಬಷನ್ ಮತ್ತು ಹೈಡ್ರೋಜನ್ ಫ್ಯೂಯಲ್ ಸೆಲ್‌ನಂತಹ ಪರ್ಯಾಯ ಇಂಧನ ತಂತ್ರಜ್ಞಾನಗಳಿಂದ ಚಾಲಿತವಾದ ನವೀನ ಸಾರಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಸಣ್ಣ ವಾಣಿಜ್ಯ ವಾಹನಗಳು, ಟ್ರಕ್‌ ಗಳು, ಬಸ್‌ ಗಳು ಮತ್ತು ವ್ಯಾನ್‌ ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರ್ಯಾಯ ಇಂಧನ ಚಾಲಿತ ವಾಣಿಜ್ಯ ವಾಹನಗಳ ದೃಢವಾದ ಸಂಗ್ರಹವನ್ನು ನೀಡುತ್ತದೆ. ಕಂಪನಿಯು 15 ಹೈಡ್ರೋಜನ್ ಎಫ್‌ಸಿಇವಿ ಬಸ್‌ ಗಳ ಟೆಂಡರ್ ಗೆದ್ದಿತ್ತು, ಇವು ಭಾರತೀಯ ರಸ್ತೆಗಳಲ್ಲಿ ಯಶಸ್ವಿಯಾಗಿ ಸಾಗಲಿವೆ.