ಸಂ.ಕ. ಸಮಾಚಾರ ಮೈಸೂರು: ಬಸವ ಕಲ್ಯಾಣದಲ್ಲಿನ ಅನುಭವ ಮಂಟಪ ಪುನಶ್ಚೇತನಕ್ಕೆ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಮಾಡಿದ ಶಿಫಾರಸ್ಸಿನ ಮೇರೆಗೆ ಅನುಭವ ಮಂಟಪ ಪುನರುಜ್ಜೀವನಕ್ಕಾಗಿ ೬೦೦ ವೆಚ್ಚದಲ್ಲಿ ಯೋಜನೆ ಕೈಗೊಂಡಿದ್ದು, ಅದು ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಕಲಾಮಂದಿರದಲ್ಲಿ ಶನಿವಾರ ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ವೀರಶೈವ- ಲಿಂಗಾಯತ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಜಾತಿಯವರೂ ಅನುಭವ ಮಂಟಪದಲ್ಲಿ ಇದ್ದರು. ಅಭಿಪ್ರಾಯ ಹೇಳಲು ಅಲ್ಲಿ ಎಲ್ಲರಿಗೂ ಮುಕ್ತ ಸ್ವಾತಂತ್ರö್ಯ ಇತ್ತು. ಅಂದಿನ ಸಂಸತ್ ಅದಾಗಿತ್ತು. ಪ್ರಜಾಪ್ರಭುತ್ವದ ವ್ಯವಸ್ಥೆ ಅಲ್ಲಿತ್ತು. ಪುರುಷ, ಮಹಿಳೆಯರ ನಡುವೆ ವ್ಯತ್ಯಾಸ ಇರಲಿಲ್ಲ. ಎಲ್ಲ ವರ್ಗದವರೂ ಅಭಿಪ್ರಾಯ ವ್ಯಕ್ತಪಡಿಸಬಹುದಾತ್ತೆಂದರು.
ಬಸವಣ್ಣನವರು ಕ್ರಾಂತಿಕಾರಿ ಪುರುಷ ಮಾತ್ರವಲ್ಲ, ದೊಡ್ಡ ಆರ್ಥಿಕ ತಜ್ಞರೂ ಆಗಿದ್ದರು. ಅವರ ದಾಸೋಹ, ಕಾಯಕ ತತ್ವ ಪರಿಕಲ್ಪನೆಗಳನ್ನು ಆರ್ಥಿಕ ವಿಶ್ಲೇಷಣೆ ದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ. ಎಲ್ಲರೂ ಕಾಯಕ ಮಾಡಬೇಕೆ ಹೊರತು ಸೋಮಾರಿ ಆಗಬಾರದು. ದುಡಿಯದೇ ಮಜಾ ಮಾಡಬಾರದು. ಬಂದುದನ್ನು ಎಲ್ಲರೂ ಅನುಭವಿಸಬೇಕು. ಯಾವುದೇ ವೃತ್ತಿ ಕೀಳಲ್ಲ, ಯಾವುದೂ ಸಹಾ ಮೇಲಲ್ಲ. ಹೀಗಾಗಿ ಕಾಯಕವೇ ಕೈಲಾಸ ಎಂದು ಅವರು ಹೇಳುವ ಮೂಲಕ ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಈ ಸಂದೇಶ ಸಾರಿದರೆಂದರು.
ಬಸವಾದಿ ಶರಣರು ಬಹುಶಃ ಜಗತ್ತಿನಲ್ಲಿ ಎಲ್ಲೂ ಆಗದ ಕ್ರಾಂತಿಯನ್ನು ರಾಜ್ಯದಲ್ಲಿ ಮಾಡಿದರು. ಸಾಮಾಜಿಕ ಕ್ರಾಂತಿ ಅವರಿಂದ ಸಾಧ್ಯವಾಯಿತು. ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ, ಅಸಮಾನತೆ ವಿರುದ್ಧ ಹೋರಾಡಿ, ಸಮ ಸಮಾಜನದ ನಿರ್ಮಾಣಕ್ಕೆ ಯತ್ನಿಸಿದರು. ಇದಕ್ಕಾಗಿ ಜೀವನದಲ್ಲಿ ನುಡಿದಂತೆ ನಡೆದರು. ಮಾನವೀಯತೆಯಿಂದ ಕೂಡಿದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು ಎಂದು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಮೈಲಿಗಲ್ಲಾಗಿವೆ. ಬಹುಸಂಖ್ಯಾತ ಜನರು ಸಾಮಾಜಿಕ ವ್ಯವಸ್ಥೆಯಲ್ಲಿ ಅಕ್ಷರ ಸಂಸ್ಕೃತಿಯಿAದ ವಂಚಿತರಾಗಿದ್ದರು. ಶಿಕ್ಷಣ ಮೇಲ್ವರ್ಗದವರ ಆಸ್ತಿಯಾಗಿತ್ತು. ವಚನ ಸಂಸ್ಕೃತಿ ಇದಕ್ಕೆ ವಿರುದ್ಧವಾದುದಾಗಿತ್ತು. ಬಹುಶಃ ಅಂಬೇಡ್ಕರ್ ಅವರು ಬಸವಣ್ಣನವರ ವಚನ ಓದಿದ್ದರೆನಿಸುತ್ತದೆ. ಅವುಗಳ ಆಶಯವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಹೀಗಾಗಿ ನಾವು ಸಂವಿಧಾನ ಉಳಿಸಬೇಕು. ಒಂದು ವೇಳೆ ಅದು ಹೋದರೆ ನಾವೂ ಹೋದಂತೆ ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಬಸವ ಜಯಂತಿ ಆಚರಣೆ ಜಗತ್ತಿನ ಪ್ರಜಾಪ್ರಭುತ್ವ ಸ್ಥಾಪನೆಗೆ ನಡೆದ ಹೋರಾಟ ನೆನಪಿಸುವಂತದ್ದಾಗಿದೆ. ಈ ಎಲ್ಲ ಚಳವಳಿಗಳ ಪೀಠಿಕೆ ೧೨ ನೇ ಶತಮಾನದ ಬಸವ ಚರಿತ್ರೆಯನ್ನು ಓದುವುದರಿಂದ ಅರಿವಾಗುತ್ತದೆ. ಅದಕ್ಕಿಂತ ಹಿಂದೆ ೬ ನೇ ಶತಮಾನದಲ್ಲಿ ಬುದ್ಧ, ಸನ್ಯಾಸಿಗಳ ಮೂಲಕ ಪ್ರಜಾಪ್ರಭುತ್ವದ ಬೀಜ ನೆಟ್ಟರು. ಅದು ಅನುಭವ ಮಂಟಪದಲ್ಲಿ ಮೊಳಕೆಯೊಡೆಯಿತು. ನಂತರ ಸಂವಿಧಾನದ ಮೊದಲಾದವುಗಳ ಮೂಲಕ ಹೆಮ್ಮರವಾಗಿ ಬೆಳೆಯಿತು ಎಂದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ ಜಗತ್ತು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆ. ಅವರು ನೀಡಿದ ಸಂದೇಶ ಸಾರ್ವಕಾಲಿಕವಾದುದಾಗಿದೆ. ಅಪೂರ್ವ ತತ್ವಗಳನ್ನು ಅವರು ನೀಡಿದರು. ಅವುಗಳನ್ನು ಪಾಲಿಸುವುದರೊಡನೆ ಜೀವನದಲ್ಲಿ ಅಳವಡಿಸಿಕೊಂಡರೆ ಸುಖೀ ಸಮಾಜ ನಿರ್ಮಾಣ ಸಾಧ್ಯವೆಂದರು.
ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಗಳಾದ ತನ್ವೀರ್‌ಸೇಠ್, ಜಿ.ಟಿ. ದೇವೇಗೌಡ, ಎಚ್.ಎಂ. ಗನೇಶ್ ಪ್ರಸಾದ್, ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ಗೌಡ, ಡಾ.ಡಿ. ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ್, ಡಿ. ರವಿಶಂಕರ್, ಹಿನಕಲ್ ಬಸವರಾಜು ಮೊದಲಾದವರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.
ರಾಜಪ್ಪ ಮೇಷ್ಟ್ರು ಮರೆಯಲಾರೆ: ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಹುಯ್ಯುವ ಶಿಕ್ಷೆ ಇದ್ದುದ್ದರಿಂದ ಶೂದ್ರ ಸಮುದಾಯ ಶಿಕ್ಷಣದಿಂದ ವಂಚಿತರಾದರು. ನನ್ನ ಅಪ್ಪ, ಅಮ್ಮ ಇಬ್ಬರೂ ಶಿಕ್ಷಣದಿಂದ ವಂಚಿತರಾಗಿದ್ದರು. ರಾಜಪ್ಪ ಮೇಸ್ಟ್ರು ಕಾರಣದಿಂದ ನಾನು ನೇರವಾಗಿ ಐದನೇ ತರಗತಿಗೆ ದಾಖಲಾಗಿ ಶಿಕ್ಷಣ ಪಡೆದು ಎರಡು ಬಾರಿ ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರ ಕಾರಣದಿಂದ ನನಗೆ ಶಿಕ್ಷಣ ಸಿಕ್ಕರೆ, ಸಂವಿಧಾನದ ಕಾರಣದಿಂದ ನಾನು ಮುಖ್ಯಮಂತ್ರಿಯಾದೆ ಎಂದು ಸಿಎಂ ಹೇಳಿದರು.