ರಾಜ್ಯಕ್ಕೆ ಬರಬೇಕಿದ್ದ ಬಾಕಿ ಬಜೆಟ್‌ನಲ್ಲಿ ಕೇಂದ್ರ ನೀಡಲಿ

ರಾಜ್ಯಕ್ಕೆ ಕೇಂದ್ರ ಸರ್ಕಾರ ಒಟ್ಟು ೧೧,೪೯೫ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನು ಫೆಬ್ರವರಿ ೧ರಂದು ಮಂಡಿಸುವ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಇದನ್ನು ಕೊಡುವುದಕ್ಕೆ ಮೀನಮೇಷ ಎಣಿಸುವುದು ಬೇಡ. ರಾಜ್ಯಕ್ಕೆ ನ್ಯಾಯವಾಗಿ ನೀಡಬೇಕಾದ ಹಣವನ್ನು ಸಕಾಲದಲ್ಲಿ ನೀಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುವುದಿಲ್ಲ. ಇದರ ಬಗ್ಗೆ ರಾಜ್ಯ ಸರ್ಕಾರ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೇಂದ್ರದ ಮೌನ ತಿಳಿಯುತ್ತಿಲ್ಲ. ೧೫ನೇ ಹಣಕಾಸು ಆಯೋಗ ರಾಜ್ಯಕ್ಕೆ ವಿಶೇಷ ಅನುದಾನವಾಗಿ ೫,೪೮೫ ಕೋಟಿ ರೂ. ನೀಡಬೇಕೆಂದು ಸೂಚಿಸಿತ್ತು. ಆದರೂ ಇದುವರೆಗೂ ಬಂದಿಲ್ಲ. ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ೩ ಸಾವಿರ ಕೋಟಿ ರೂ. ನಗರಗಳಲ್ಲಿರುವ ಕೆರೆಗಳ ಅಭಿವೃದ್ಧಿಗೆ ೩ ಸಾವಿರ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂ. ನೀಡಬೇಕು. ಇನ್ನೂ ಹಣ ಬಂದಿಲ್ಲ.
ರಾಜ್ಯ ಸರ್ಕಾರ ವೃದ್ಧರು, ವಿಧವೆಯರಿಗೆ ಮಾಸಾಶನ ನೀಡಲು ಪ್ರತಿ ವರ್ಷ ೧೦,೫೫೪ ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದಕ್ಕೆ ಕೇಂದ್ರದ ನೆರವು ೪೭೧ ಕೋಟಿ ರೂ.ಮಾತ್ರ. ಇಂಥ ಸಾಮಾಜಿಕ ನೆರವುಗಳಿಗೆ ಕೇಂದ್ರದ ಪಾಲು ಅಧಿಕಗೊಳ್ಳಬೇಕಿತ್ತು. ೨೦೧೮ ರಲ್ಲಿ ಕೇಂದ್ರದ ಆದಾಯ ೨೪ ಲಕ್ಷ ಕೋಟಿ ರೂ. ಈಗ ಅದು ೪೮ ಲಕ್ಷ ಕೋಟಿ ರೂ. ಆಗಿದೆ. ಆದರೆ ಅದಕ್ಕೆ ಅನುಗುಣವಾಗಿ ರಾಜ್ಯಕ್ಕೆ ನೀಡುವ ಅನುದಾನ ಅಧಿಕಗೊಂಡಿಲ್ಲ. ೪೬ ಸಾವಿರ ಕೋಟಿ ರೂ. ಇದ್ದ ಅನುದಾನ ೬೦ ಸಾವಿರ ಕೋಟಿ ರೂ. ಆಗಿದೆ. ಇದಲ್ಲದೆ ರಾಜ್ಯದ ಯೋಜನೆಗಳಿಗೆ ಅನುದಾನ ವೆಚ್ಚ ಮಾಡಿದ ಮೇಲೆ ಬರುತ್ತದೆ. ಅದರ ಬದಲು ಮುಂಗಡ ಅನುದಾನ ನೀಡುವ ಪದ್ಧತಿ ಜಾರಿಗೆ ಬರಬೇಕು. ಆಶಾ ಕಾರ್ಯಕರ್ತರು ತಮ್ಮ ಗೌರವಧನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೇಂದ್ರದಿಂದ ಬರುವ ೨೩೦೦ ರೂ. ಗೌರವಧನವನ್ನು ೫೦೦೦ ರೂ.ಗಳಿಗೆ ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕದ ಪ್ರತಿ ಯೋಜನೆಗೂ ರಾಜ್ಯ ಮಾಡುವ ವೆಚ್ಚಕ್ಕೆ ಅನುಗುಣವಾಗಿ ಕೇಂದ್ರದ ನೆರವು ಬರಬೇಕು. ಪಶ್ಚಿಮ ಘಟ್ಟಗಳ ರಕ್ಷಣೆಗೆ ೫ ವರ್ಷಗಳ ಯೋಜನೆಗೆ ೧೦ಸಾವಿರ ಕೋಟಿ ರೂ. ನೀಡಬೇಕು. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸಮಗ್ರ ನಗರಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಬೇಕು. ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಿ ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಬೇಕು. ಈಗ ಸಿರಿಧಾನ್ಯಗಳ ಬಳಕೆ ಅಧಿಕಗೊಂಡಿದೆ. ಅದಕ್ಕೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಕೇಂದ್ರದ ನೆರವು ದೀರ್ಘಕಾಲಿಕ ಯೋಜನೆಗಳಿಗೆ ಉದಾರವಾಗಿಬೇಕು. ಅವುಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುವುದರಿಂದ ಮುಂಬರುವ ದಿನಗಳಲ್ಲಿ ಜಿಎಸ್‌ಟಿ ಸಂಗ್ರಹ ಅಧಿಕಗೊಳ್ಳಲಿದೆ. ಎಲ್ಲ ರಾಜ್ಯಗಳನ್ನೂ ಸಮಾನವಾಗಿ ಕಾಣುವುದು ಕೇಂದ್ರದ ಕರ್ತವ್ಯವೂ ಹೌದು. ಇತ್ತೀಚೆಗೆ ದಕ್ಷಿಣ ಭಾರತವನ್ನು ಕಡೆಗಣಿಸುವ ಮನೋಭಾವ ಕೇಂದ್ರದಲ್ಲಿ ಕಂಡು ಬಂದಿದೆ. ಇದು ಸರಿಯಾದ ಕ್ರಮವಲ್ಲ. ಆರ್ಥಿಕವಾಗಿ ಎಲ್ಲ ರಾಜ್ಯಗಳೂ ಸಮಾನವಾದ ಬೆಳವಣಿಗೆ ಕಾಣಬೇಕು. ಇದರಲ್ಲಿ ಪಕ್ಷ ರಾಜಕಾರಣ ಬರಬಾರದು. ಪ್ರತಿ ರಾಜ್ಯಕ್ಕೂ ಅಲ್ಲಿಯ ಆರ್ಥಿಕ-ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಅನುದಾನ ನೀಡುವುದು ಕೇಂದ್ರದ ಕೆಲಸ. ಇದರಲ್ಲಿ ಅಪಸ್ವರ ಕೇಳಿಬರಬಾರದು. ಕೇಂದ್ರಕ್ಕೆ ಇರುವ ಆರ್ಥಿಕ ಸಂಪನ್ಮೂಲ ರಾಜ್ಯಕ್ಕೆ ಇರುವುದಿಲ್ಲ. ಅದರಲ್ಲೂ ಜಿಎಸ್‌ಟಿ ಸಂಗ್ರಹದಿಂದ ಕೇಂದ್ರಕ್ಕೆ ಉತ್ತಮ ಆದಾಯ ಇದೆ. ರಾಜ್ಯಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಪಕ್ಷಪಾತ ಧೋರಣೆ ಕಾಣಬಾರದು. ಹಿಂದಿನಿಂದಲೂ ಕೇಂದ್ರ-ರಾಜ್ಯಗಳ ನಡುವೆ ಆರ್ಥಿಕ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಕಂಡು ಬರುತ್ತಿದೆ. ಸರ್ಕಾರಿಯಾ ಆಯೋಗ ಸಾಕಷ್ಟು ವಿವರಗಳನ್ನು ನೀಡಿದೆ. ಆದರೂ ಇನ್ನೂ ಹಲವು ಸಮಸ್ಯೆಗಳು ಹಗೆ ಉಳಿದುಕೊಂಡಿದೆ. ಹಣಕಾಸು ವಿಚಾರದಲ್ಲಿ ಕೇಂದ್ರ ತನ್ನ ಹಿಡಿತವನ್ನು ಕಡಿಮೆ ಮಾಡಿಕೊಳ್ಳಲು ಸುತರಾಂ ಒಪ್ಪುವುದಿಲ್ಲ. ಜನ ಆರ್ಥಿಕ ಬೆಳವಣಿಗೆಯನ್ನು ಬಯಸುತ್ತಾರೆಯೇ ಹೊರತು ಹಣ ಎಲ್ಲಿಂದ ಬಂದಿತು ಎಂದು ವಿಚಾರಿಸುವುದಿಲ್ಲ. ಕೇಂದ್ರದ ನೆರವು ಕಡಿಮೆಯಾಗುತ್ತಿರುವುದರಿಂದ ರಾಜ್ಯಗಳು ಈಗ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ್ಗದವರಿಗೆ ಹೆಚ್ಚಿನ ನೆರವು ಒದಗಿಸಲು ಪ್ರಯತ್ನಿಸುತ್ತಿವೆ. ಈ ಉಚಿತ ಗ್ಯಾರಂಟಿಗಳಿಗೆ ಸಾಲ ಮಾಡುವುದು ಅನಿವಾರ್ಯ. ಕೇಂದ್ರ ಪಾರದರ್ಶಕವಾಗಿ ಹಣ ಹಂಚಿಕೆ ಮಾಡಿದಲ್ಲಿ ರಾಜ್ಯಗಳು ಉಚಿತ ಗ್ಯಾರಂಟಿಗಳನ್ನು ಘೋಷಿಸಬೇಕಾದ ಪರಿಸ್ಥಿತಿ ಬರುವುದಿಲ್ಲ. ಮೂಲ ತೆರಿಗೆಯ ಮೇಲೆ ಹೆಚ್ಚುವರಿ ಸುಂಕವನ್ನು ಶೇ.೫ಕ್ಕಿಂತ ಹೆಚ್ಚು ವಿಧಿಸಬಾರದು ಎಂದು ನಿಯಮ ಹೇಳುತ್ತದೆ. ಆದರೆ ಕೇಂದ್ರ ಸರ್ಕಾರ ಶೇ.೧೪ ರಷ್ಟು ಅಧಿಭಾರ ವಿಧಿಸಿದೆ. ಇದನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಅನುದಾನದೊಂದಿಗೆ ಸೇರ್ಪಡೆ ಮಾಡಬೇಕು. ಇಲ್ಲವೆ ರಾಜ್ಯ ಜಿಎಸ್‌ಟಿ ಪಾಲಿನಲ್ಲಿ ಸೇರಿಸಬೇಕು. ಎರಡನ್ನೂ ಕೇಂದ್ರ ಮಾಡಿಲ್ಲ. ಕೇಂದ್ರದ ನೆರವು ಉದಾರವಾಗಿ ಸಕಾಲದಲ್ಲಿ ಬಂದಲ್ಲಿ ರಾಜ್ಯದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿ ಅಂದಾಜುವೆಚ್ಚ ಇಳಿಮುಖಗೊಳ್ಳುವುದರಲ್ಲಿ ಸಂದೇಹವಿಲ್ಲ.