ಜೂನ್ ೧೯೯೧ರಲ್ಲಿ, ನರಸಿಂಹ ರಾವ್ ಸರ್ಕಾರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದು, ಭಾರತೀಯ ವೈಮಾನಿಕ ಮಾರುಕಟ್ಟೆ ಜಗತ್ತಿನ ಇತರೆಡೆಗಳೊಡನೆ ಸಂಪರ್ಕಿಸಲು ಕಾರಣವಾಯಿತು.
೧೯೯೨ರಲ್ಲಿ, ಭಾರತದ ಒಂದು ವೈಮಾನಿಕ ಸಂಸ್ಥೆ ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಒಂದು ವೈಮಾನಿಕ ವಸ್ತು ಪ್ರದರ್ಶನವನ್ನು ಏರ್ಪಡಿಸಿತು. ಈ ಸಮಾರಂಭದ ಭಾಗವಾಗಿ, ಪಾಲಮ್‌ನಲ್ಲಿ ಒಂದು ಸುಖೋಯಿ-೨೭ ವಿಮಾನವನ್ನು ಪ್ರದರ್ಶಿಸಲಾಯಿತು.
ಭಾರತೀಯ ವಾಯುಪಡೆಯ (ಐಎಎಫ್) ನಿರ್ಣಯ ಕೈಗೊಳ್ಳುವ ಹಂತದಲ್ಲಿದ್ದ ಅಧಿಕಾರಿಗಳಿಗೆ, ಈ ವಿಮಾನದ ಹಾರಾಟ ನಡೆಸುವ ಅವಕಾಶ ಲಭಿಸಿತು. ಅವರಿಗೆ ವಿಮಾನದ ಪ್ರದರ್ಶನ ಮತ್ತು ಸಾಮರ್ಥ್ಯಗಳ ಕುರಿತು ಧನಾತ್ಮಕ ಭಾವನೆ ಮೂಡಿತು.
ಮೊದಲ ಸಮಾರಂಭದ ಯಶಸ್ಸಿನಿಂದ ಸ್ಫೂರ್ತಿ ಪಡೆದ ಅದೇ ವೈಮಾನಿಕ ಸಂಸ್ಥೆ, ೧೯೯೩ರ ಡಿಸೆಂಬರ್‌ನಲ್ಲಿ ಯಲಹಂಕದಲ್ಲಿ ಪೂರ್ಣ ಪ್ರಮಾಣದ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿತು. ಈ ಪ್ರದರ್ಶನಕ್ಕೆ, ಏವಿಯಾ ಇಂಡಿಯಾ ೧೯೯೩ ಎಂದು ಹೆಸರಿಡಲಾಗಿತ್ತು.
ಭಾರತದ ಮೊದಲ ವೈಮಾನಿಕ ಪ್ರದರ್ಶನವಾಗಿದ್ದ ಏವಿಯಾ ಇಂಡಿಯಾ `೯೩, ಡಿಸೆಂಬರ್ ೧೯೯೩ರಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿತು. ಈ ಸಮಾರಂಭದಲ್ಲಿ, ಒಂದು ಮಿಗ್-೨೯ ಜೆಟ್ ವೈಮಾನಿಕ ಪ್ರದರ್ಶನ ನೀಡಿತ್ತು. ಈ ವೈಮಾನಿಕ ಪ್ರದರ್ಶನ, ಭಾರತದಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಸಬೇಕು ಎನ್ನುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕನಸಿನ ಸಾಕಾರವಾಗಿತ್ತು. ಈ ಸಮಾರಂಭವನ್ನು ಕಾನ್ವೆಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ರಾಜೀವ್ ಗಾಂಧಿಯವರ ಡೂನ್ ಸ್ಕೂಲ್(ಡೆಹ್ರಾಡೂನಿನ ವಸತಿ ಶಾಲೆ) ದಿನಗಳಿಂದಲೂ ಆತ್ಮೀಯ ಸ್ನೇಹಿತರಾಗಿದ್ದ ಆನಂದ್ ಸೇಥಿ ಆಯೋಜಿಸಿದ್ದರು.
ಆನಂದ್ ಸೇಥಿಯವರು ಈ ಪ್ರದರ್ಶನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಡನೆ ಕೈಜೋಡಿಸಿ ಕೆಲಸ ನಿರ್ವಹಿಸಿದ್ದರು. ಅದರೊಡನೆ, ಬೇರೆ ಯಾರಾದರೂ ಕೊಡುಗೆ ನೀಡುವುದಕ್ಕೆ ಮುನ್ನವೇ, ತನ್ನ ಸ್ವಂತದ ೨೫ ಲಕ್ಷ ರೂಪಾಯಿಗಳನ್ನೂ ಇದಕ್ಕಾಗಿ ವೆಚ್ಚ ಮಾಡಿದ್ದರು.
ಕುತೂಹಲಕಾರಿ ವಿಚಾರವೆಂದರೆ, ಮೂಲತಃ ಈ ವೈಮಾನಿಕ ಪ್ರದರ್ಶನವನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಆಯೋಜಿಸಲು ಒಪ್ಪಿಕೊಂಡಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಸಂಸ್ಥೆಯ ಹಿರಿಯ ಅಧಿಕಾರಿಗಳು ಅಂತಿಮ ಹಂತದಲ್ಲಿ ವಿಮಾನ ನಿಲ್ದಾಣದ ಬಳಕೆಗೆ ಅಧಿಕೃತ ಒಪ್ಪಿಗೆ ನೀಡಲು ಹಿಂಜರಿದರು. ಇದರ ಪರಿಣಾಮವಾಗಿ, ವೈಮಾನಿಕ ಪ್ರದರ್ಶನವನ್ನು ಯಲಹಂಕದ ವಾಯು ಸೇನಾ ನೆಲೆಗೆ ಸ್ಥಳಾಂತರಿಸಲಾಯಿತು.
ಎಚ್‌ಎಎಲ್ ಸಂಸ್ಥೆ ತನ್ನ ವಿಮಾನ ನಿಲ್ದಾಣದ ಬಳಕೆಗೆ ಅಧಿಕೃತ ಒಪ್ಪಿಗೆ ನೀಡದಿದ್ದಾಗ, ಆಗಿನ ವಾಯು ಸೇನಾ ಮುಖ್ಯಸ್ಥರಾಗಿದ್ದ ಏರ್ ಚೀಫ್ ಮಾರ್ಷಲ್ ನಿರ್ಮಲ್ ಚಂದ್ರ ಸೂರಿ ಅವರು ವೈಮಾನಿಕ ಪ್ರದರ್ಶನಕ್ಕೆ ಮೂರು ಪರ್ಯಾಯ ತಾಣಗಳನ್ನು ಸೂಚಿಸಿದ್ದರು ಎಂದು ಸುಗಂಧಾ ಸ್ಮರಿಸಿದ್ದರು. “ಯಲಹಂಕವೇ ಅತ್ಯುತ್ತಮ ಆಯ್ಕೆಯಾಗಿತ್ತು” ಎಂದು ಸುಗಂಧಾ ವಿವರಿಸಿದ್ದರು. ಅದರೊಡನೆ, ಆಗ ಡಿಜಿಸಿಎಯ ವೈಮಾನಿಕ ಸಲಹೆಗಾರರಾಗಿದ್ದ ಏರ್ ಮಾರ್ಷಲ್ ಡೆಂಜಿಲ್ ಕೀಲೊರ್ ಅವರು ಮಲೇಷ್ಯನ್ ಏರ್ ಶೋಗೆ ತೆರಳುತ್ತಿದ್ದ ಎಲ್ಲ ವಿಮಾನಗಳಿಗೂ ಬೆಂಗಳೂರಿನಲ್ಲಿ ಇಂಧನ ಮರುಪೂರಣಕ್ಕೆ ನಿಲುಗಡೆ ನೀಡುವಂತೆ ಮನ ಒಲಿಸಿದ್ದರು. ಇದರಿಂದಾಗಿ, ಡಿಸೆಂಬರ್ ೧೫ರಿಂದ ೧೮ರ ತನಕ ನಡೆದ ವೈಮಾನಿಕ ಪ್ರದರ್ಶನದಲ್ಲಿ ಆ ವಿಮಾನಗಳು ಪಾಲ್ಗೊಳ್ಳುವಂತಾಯಿತು.
ವಾಯುಸೇನೆಯ ಮುಖ್ಯ ಕಚೇರಿ ಮತ್ತು ಡಿಆರ್‌ಡಿಓ ಸಂಸ್ಥೆಗಳ ಬೆಂಬಲದೊಡನೆ, ಕರ್ನಾಟಕ ಸರ್ಕಾರವೂ ವೈಮಾನಿಕ ಪ್ರದರ್ಶನದ ಯಶಸ್ಸಿಗಾಗಿ ಮಹತ್ವದ ಹೆಜ್ಜೆಗಳನ್ನು ಇಟ್ಟಿತು. ಕರ್ನಾಟಕ ಸರ್ಕಾರ ವಾಯುಸೇನಾ ನೆಲೆಯ ಸುತ್ತಲೂ ತಡೆಗೋಡೆ ನಿರ್ಮಿಸಲು ೩೦ ಲಕ್ಷ ರೂಪಾಯಿಗಳನ್ನು ಒದಗಿಸಿತು. ಅದರೊಡನೆ, ಬೆಂಗಳೂರಿನಿಂದ ವಾಯುಸೇನಾ ನೆಲೆಯನ್ನು ಸಂಪರ್ಕಿಸುವ ರಸ್ತೆಯ ಮರುನಿರ್ಮಾಣ ನಡೆಸಿತು. ವೀರಪ್ಪ ಮೊಯ್ಲಿ ಅವರು ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಗಿನ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಜೆ ಸಿ ಲಿನ್ ಅವರ ಪ್ರಯತ್ನಗಳ ಕಾರಣದಿಂದ ಇದು ಸಾಧ್ಯವಾಗಿತ್ತು.
ಹಿರಿಯ ಅಧಿಕಾರಿಯಾಗಿದ್ದ ಲಿನ್ ಅವರು ದೆಹಲಿಯಲ್ಲಿನ ತನ್ನ ಮಾಜಿ ಸಹೋದ್ಯೋಗಿಗಳೊಡನೆ ಸಮಾಲೋಚಿಸಿ, ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ನಡೆಸಲು ಅಗತ್ಯವಿದ್ದ ಕಸ್ಟಮ್ಸ್ ಮತ್ತು ಇಮಿಗ್ರೇಶನ್ ಅಧಿಕಾರಿಗಳನ್ನು ಬೆಂಗಳೂರಿಗೆ ಕಳುಹಿಸುವಂತೆ ಕ್ರಮ ಕೈಗೊಂಡರು.
“ನಾನು ನನ್ನ ಸಾಂಪ್ರದಾಯಿಕ ಕಾಂಚೀವರಂ ಸೀರೆ ಉಟ್ಟು, ಲೇ ಬೊರ್ಗಟ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪ್ರವೇಶಿಸುವಾಗ ಸಂಪೂರ್ಣವಾಗಿ ಭಯ ಮತ್ತು ಆತಂಕ ಹೊಂದಿದ್ದೆ. ನನಗೆ ಯಾವುದರ ಬಗ್ಗೆಯೂ ಖಾತ್ರಿ ಇರಲಿಲ್ಲ. ಆದರೆ, ಪ್ಯಾರಿಸ್ ಏರ್ ಶೋನ ಪ್ಲೈಟ್ ಡೈರೆಕ್ಟರ್ ಆಗಿದ್ದ ಕ್ಲೌಡಾ ಮಾರ್ಟಿನ್ ಅವರು ತೋರಿಸಿದ ಕಾಳಜಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಸುಗಂಧಾ ನೆನಪಿಸಿಕೊಂಡಿದ್ದರು.
“ಅದೃಷ್ಟವಶಾತ್, ಫ್ಯಾನ್‌ಬೋರೋ ವೈಮಾನಿಕ ಪ್ರದರ್ಶನದ ಆಯೋಜಕರೂ ಆ ಸಭೆಯಲ್ಲಿ ಉಪಸ್ಥಿತರಿದ್ದರು. ಏವಿಯಾ ಇಂಡಿಯಾ ‘೯೩ರ ಪ್ಲೈಟ್ ಡೈರೆಕ್ಟರ್ ಮತ್ತು ಎಎಸ್‌ಟಿಇ ಕಮಾಂಡೆಂಟ್ ಆಗಿದ್ದ ಅಜಿತ್ ಆಗ್ತೆ ಅವರಿಂದ ನನಗೆ ಹೆಚ್ಚಿನ ಸ್ಪಷ್ಟತೆ ಲಭಿಸಿತು. ವೈಮಾನಿಕ ಪ್ರದರ್ಶನದ ನಿರ್ವಹಣೆಯಲ್ಲಿ ಅಜಿತ್ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದರು” ಎಂದು ಸುಗಂಧಾ ಹೇಳಿದ್ದರು. ಸ್ಪಾನ್ ಏವಿಯೇಷನ್ ಸಂಸ್ಥೆಯ ಗ್ರೂಪ್ ಕ್ಯಾಪ್ಟನ್ ಆಗಿದ್ದ ನಿತೀನ್ ಗುಪ್ತೆ ಅವರ ನೇತೃತ್ವದ ಭೂ ತಂಡ ಏವಿಯಾ ಇಂಡಿಯಾ ‘೯೩ ಯಶಸ್ಸು ಕಾಣುವಂತೆ ಮಾಡಲು ಶ್ರಮಿಸಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಏವಿಯಾ ಇಂಡಿಯಾ ‘೯೩ ಕೇವಲ ಭಾರತದ ಮೊದಲ ವೈಮಾನಿಕ ಪ್ರದರ್ಶನವಷ್ಟೇ ಅಲ್ಲದೆ, ಇನ್ನೊಂದು ವಿಶೇಷತೆಯನ್ನೂ ಒಳಗೊಂಡಿತ್ತು. ಭಾರತದ ಮೊದಲ ಗಗನಯಾತ್ರಿಯಾಗಿದ್ದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ವೈಮಾನಿಕ ಪ್ರದರ್ಶನದ ವೀಕ್ಷಕ ವಿವರಣೆಗಾರರಾಗಿದ್ದರು! ಅವರೊಡನೆ, ಕಾಮೆಂಟರಿ ಬಾಕ್ಸ್‌ನಲ್ಲಿ ವಿಂಗ್ ಕಮಾಂಡರ್ ಬಿ ಜೆ ವಾಜ್ಹ್ ಸೇರಿದ್ದರು. ಅವರಿಬ್ಬರೂ ಜೊತೆಯಾಗಿ, ಮಿರೇಜ್ ೨೦೦೦, ಸೀ ಹ್ಯಾರಿಯರ್ಸ್, ಹಾಕ್ ಟ್ರೈನರ್ ವಿಮಾನಗಳು ಮತ್ತು ಕಾಮೊವ್ ಹೆಲಿಕಾಪ್ಟರ್ ನಡೆಸಿದ ವಿಶೇಷ ಹಾರಾಟಗಳನ್ನು ಬಣ್ಣಿಸಿದ್ದರು.
ಮೊದಲ ಏರೋ ಇಂಡಿಯಾ ಪ್ರದರ್ಶನ ೧೯೯೬ರ ಡಿಸೆಂಬರ್ ತಿಂಗಳಲ್ಲಿ ನಡೆಯಿತು. ರಕ್ಷಣಾ ಸಚಿವಾಲಯ ಏರೋ ಇಂಡಿಯಾ ಪ್ರದರ್ಶನವನ್ನು ದ್ವೈ ವಾರ್ಷಿಕ ಸಮಾರಂಭ ಎಂದು ಘೋಷಿಸಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಅದನ್ನು ನಡೆಸುವುದಾಗಿ ತಿಳಿಸಿತು. ಇದು ಭಾರತದ ವೈಮಾನಿಕ ಹಾದಿಯಲ್ಲಿ ಬಹುದೊಡ್ಡ ಮೈಲಿಗಲ್ಲಾಗಿತ್ತು.
೧೯೯೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಎರಡನೇ ಏರೋ ಇಂಡಿಯಾ ಪ್ರದರ್ಶನವನ್ನು ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಉದ್ಘಾಟಿಸಿದ್ದರು. ಆದರೆ, ಹವಾಮಾನ ವೈಪರೀತ್ಯ, ಮಳೆ ಮತ್ತು ಮೋಡಗಳಂತಹ ಸಮಸ್ಯೆಗಳು ವೈಮಾನಿಕ ಪ್ರದರ್ಶನಕ್ಕೆ ಅಡಚಣೆ ಉಂಟುಮಾಡಿದವು.
ಮೂರನೇ ಏರೋ ಇಂಡಿಯಾ ಸಮಾರಂಭ ೨೦೦೦ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಫೆಬ್ರವರಿ ೨೦೦೧ರಲ್ಲಿ ಆಯೋಜಿಸಲಾಯಿತು. ಅಂದಿನಿಂದ, ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ನಿರಂತರವಾಗಿ ಪಾಲ್ಗೊಳ್ಳುತ್ತಾ ಬಂದು, ಪ್ರದರ್ಶನವನ್ನು ಯಶಸ್ವಿಗೊಳಿಸಿವೆ.