ಸಾಕ್ಷಿ ಕಟಕಟೆಯಲ್ಲಿ ನಿಂತ ಅವಳ ಧ್ವನಿಯಲ್ಲಿ ನಡುಕ ಇದ್ದಿತು. ಏನು ಉತ್ತರಿಸಬೇಕು ಎಂದು ತಿಳಿಯದೆ ಅಸಹಾಯಕಳಾಗಿ ಒಮ್ಮೆ ನ್ಯಾಯಾಧೀಶರನ್ನು, ಇನ್ನೊಮ್ಮೆ ತನ್ನ ವಕೀಲರನ್ನು ಸಹಾಯಕ್ಕೆ ಬರಬಹುದೆಂದು ನೋಡುತ್ತಿದ್ದಳು. ನ್ಯಾಯಾಧೀಶರು “ನೋಡಮ್ಮ,ನಿನಗೆ ನಿಮ್ಮ ಎದುರುದಾರ ವಕೀಲರು ಕೇಳುವ ಪ್ರಶ್ನೆ ತಿಳಿಯದಿದ್ದರೆ ಹೇಳು ಇನ್ನೊಮ್ಮೆ ಕೇಳುತ್ತಾರೆ “ಎಂದು ಸೌಜನ್ಯ ತೋರಿಸಿದರು. ಇದೇ ಅವಕಾಶ ಎಂದು ಅವಳ ಪರ ವಕೀಲರು ಉತ್ತರ ಸೂಚಿಸಲು ಎದ್ದು ನಿಂತರು. ನಾನು ಅಪೇಕ್ಷಿಸಿದೆ. ನ್ಯಾಯಾಧೀಶರು ಮತ್ತೊಮ್ಮೆ ಪ್ರಶ್ನೆ ಕೇಳುವಂತೆ ಸೂಚಿಸಿದರು. “ನೋಡಿ, ನಿಮ್ಮ ತಂದೆ ಹಾಗೂ ಅವನ ಸಹೋದರರು ೧೯೭೦ರಲ್ಲಿ ನೋಂದಾಯಿತ ಪಾಲು ಪತ್ರ ಮಾಡಿಕೊಂಡಿದ್ದಾರೆ” ಎಂದು ಸೂಚಿಸಿದೆ. “ಸರ್, ಅವಾಗ ನಾನು ನಾನು ಹುಟ್ಟಿರಲಿಲ್ಲ” ಎಂದು ಉತ್ತ ರಿಸಿದಳು. “ನೋಡಿ ನಿಮ್ಮ ತಂದೆ ಚಿಕ್ಕಪ್ಪ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ” ಎಂದು ಸೂಚಿಸಿದೆ ಅದಕ್ಕೆ “ಹೌದು ಸರ್ “ಎಂದು ಉತ್ತರ ನೀಡಿದಳು. “ನಿಮ್ಮ ತಂದೆಯ ತನ್ನ ಪಾಲಿಗೆ ಬಂದ ಆಸ್ತಿಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ, ಅದನ್ನು ಪ್ರಶ್ನಿಸಿಲ್ಲ, ಆ ಆಸ್ತಿಗಳನ್ನು ಈ ದಾವೆಯಲ್ಲಿ ಸೇರಿಸಿಲ್ಲ” ಎಂದು ಸೂಚಿಸಿದೆ.” ಈ ವಿಷಯ ನನಗೆ ಗೊತ್ತಿಲ್ಲ ಆದರೆ ನಮ್ಮ ಚಿಕ್ಕಪ್ಪಂದಿರ ಹೆಸರಿನಲ್ಲಿ ಇರುವ ನಮ್ಮ ಪಿತ್ರಾರ್ಜಿತ ಸ್ವತ್ತುಗಳಲ್ಲಿ ನಮಗೂ ಪಾಲು ಬೇಕಲ್ಲವೇ?” ಎಂದು ನನಗೆ ಪ್ರಶ್ನೆಯನ್ನು ಎಸೆದಳು. ತಂದೆ ತನ್ನ ಪಾಲಿಗೆ ಬಂದ ಆಸ್ತಿ ಇಂತವರಿಗೆ ಮಾರಾಟ ಮಾಡಿದ್ದಾರೆ ಎಂದು ಸೂಚಿಸಿದೆ. ಗೊತ್ತಿಲ್ಲ ಅನ್ನುವುದು ಉತ್ತರ ವಾಗಿತ್ತು. “ನಿನ್ನ ತಂದೆ ಈಗ ಎಲ್ಲಿರುತ್ತಾರೆ? ಯಾರ ಜೊತೆ ಇರುತ್ತಾರೆ? ಸ್ವತ್ತಿನಲ್ಲಿ ಸ್ವಾಧೀನದಲ್ಲಿದ್ದಾರೆ? ಯಾವ ಮನೆಯಲ್ಲಿದ್ದಾರೆ ಅನ್ನೋದು ನಿನಗೆ ಗೊತ್ತಿದೆಯಾ? ಹೀಗೆ ಒಂದರ ನಂತರ ಒಂದು ಪ್ರಶ್ನೆಗಳ ಬಾಣಗಳನ್ನು ಪ್ರಯೋಗಿಸಿದೆ. ಎಲ್ಲಕ್ಕೂ ಗೊತ್ತಿಲ್ಲ ಅ ನ್ನುವ ಒಂದೇ ಉತ್ತರವನ್ನು ಹೇಳಿ, “ಸರ್ ನಾನು ಯಾವ ಕಾಲಕ್ಕೂ ತಂದೆಯ ಮುಖವನ್ನೇ ನೋಡಿಲ್ಲ. ಈಗ ನ್ಯಾಯಾಲಯದಲ್ಲಿ ಮಾತ್ರ ಮೊದಲ ಸಲ ನೋಡುತ್ತಿದ್ದೇನೆ. ಒಂದು ದಿನವೂ ನನ್ನ ತಂದೆಯ ಜೊತೆ ಕಳೆದ ದಿನಗಳ ಬಗ್ಗೆ ನನಗೆ ನೆನಪಿಲ್ಲ”. ನಿನ್ನ ತಾಯಿ ನೀನು ಚಿಕ್ಕವಳು ಇರುವಾಗ ತನ್ನ ಗಂಡನ ಮನೆಯ ಆಸ್ತಿಯಲ್ಲಿ ನಿನಗೆ ಹಾಗೂ ತನಗೆ ರೂ. ೨ ಲಕ್ಷ ಪಡೆದುಕೊಂಡು ನಿಮ್ಮ ಹಕ್ಕನ್ನು ನಿನ್ನ ತಂದೆಗೆ ಹಕ್ಕು ಬಿಟ್ಟ ಪತ್ರ ಮಾಡಿಕೊಟ್ಟು ಬಿಟ್ಟುಕೊಟ್ಟಿದ್ದಾಳೆ, ಇದು ನಿನಗೆ ಗೊತ್ತಿದೆಯೋ? ಎಂದು ಪ್ರಶ್ನಿಸಿದೆ.” ಗೊತ್ತಿಲ್ಲ” ಅನ್ನುವದು ಉತ್ತರವಾಗಿತ್ತು. ಎಲ್ಲ ಉತ್ತರಗಳು, ಪ್ರತಿವಾದಿ ನನ್ನ ಕಕ್ಷಿದಾರರ ಪರವಾಗಿಯೆ ಇದ್ದವು. ಮುಂದೆ ಮತ್ತೆ ಪ್ರಶ್ನೆಗಳನ್ನು ಸುಮ್ಮನೆ ಕಾಲ ಕಳೆಯುವುದಕ್ಕೆ ಕೇಳಿ, ಹಿಂದೆ ನೀಡಿದ ಸಮಂಜಸ ಉತ್ತರಗಳನ್ನು ನಾಶ ಮಾಡಿಕೊಳ್ಳುವುದು ಕಕ್ಷಿದಾರರ ಹಿತದೃಷ್ಟಿಯಿಂದ ಬೇಡ ಅನಿಸಿ, ಪಾಟಿ ಸವಾಲನ್ನು ನಿಲ್ಲಿಸಿದೆ. ವಾದಿಯು ನನ್ನ ಕಡೆ ದೃಷ್ಟಿ ಬೀರಿ ಏನೇನೋ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿದರು ಎಂದು ಗೊಣ ಗುನುಗುತ್ತ ಕಟಕಟೆಯಿಂದ ಇಳಿದು ಹೋದಳು.
ವಾದಿಯು ತನ್ನ ಇನ್ನಿಬ್ಬರು ಸಾಕ್ಷಿದಾರರನ್ನು ಹಾಜರುಪಡಿಸಿದನು. ಅವರನ್ನು ಪಾಟಿ ಸವಾಲು ಮಾಡಿದೆ. ಸಾಕ್ಷಿದಾರರ ಉತ್ತರಗಳು ವಾದಿಯನ್ನು ಅನುಸರಿಸಿದ್ದವು. ವಾದಿ ಪ್ರತಿವಾದಿಯ ಮನೆತನದ ಬಗ್ಗೆ ಸಾಕ್ಷಿದಾರರಿಗೆ ಯಾವುದೇ ಮಾಹಿತಿ ಇಲ್ಲ ಅನ್ನುವದು ಉತ್ತರದಿಂದ ಸ್ಪಷ್ಟವಾಗುತ್ತಿತ್ತು. ವಾದಿಯು ತನ್ನ ಸಾಕ್ಷಿಯ ಹಂತವನ್ನು ಇಲ್ಲಿಗೆ ಮುಗಿಸಿದಳು. ವಾದಿ ಹಾಗೂ ಅವಳ ತಾಯಿ ಇಬ್ಬರು ಕೂಡಿ, ವಾದಿಯ ತಂದೆ ಹಾಗೂ ಚಿಕ್ಕಪ್ಪ ಇವರ ಮೇಲೆ ದಾವೆ ಸ್ವತ್ತಿನಲ್ಲಿ ಪಾಲು ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ಕುರಿತು ದಾವೆಯನ್ನು ದಾಖಲಿಸಿದ್ದಳು. ಪ್ರತಿವಾದಿಯರ ಪರವಾಗಿ ಹಾಜರಾಗಿ, ಕೈಫಿಯತ್/ ಲಿಖಿತ ಹೇಳಿಕೆ ದಾಖಲಿಸಿದೆ. ಪ್ರತಿವಾದಿಯರು ೧೯೭೦ರಲ್ಲಿ ತಮ್ಮ ಮನೆತನದ ಪಿತ್ರಾರ್ಜಿತ ಜಂಟಿ ಮನೆತನದ ಆಸ್ತಿಗಳನ್ನು ನೋಂದಾಯಿತ ಪಾಲುಪತ್ರ ಮೂಲಕ ವಿಭಜನೆ ಮಾಡಿಕೊಂಡಿದ್ದಾರೆ. ವಾದಿಯ ತಂದೆ ತನ್ನ ಪಾಲಿಗೆ ಬಂದ ಆಸ್ತಿಗಳನ್ನು ೧೯೭೨ರಲ್ಲಿ ಮಾರಾಟ ಮಾಡಿದ್ದಾನೆ. ಉಳಿದ ಸಹೋದರರಿಗೆ ಬಂದ ಆಸ್ತಿಯಲ್ಲಿ, ವಾದಿಗಾಗಲಿ ಅವಳ ತಂದೆಗಾಗಲಿ ಯಾವುದೆ ಹಕ್ಕು ಉಳಿದಿಲ್ಲ. ತಂದೆಯ ಪಾಲಿಗೆ ಬಂದ ಆಸ್ತಿಗಳನ್ನು ಮಾರಾಟ ಮಾಡಿದ ಆಸ್ತಿ, ಖರೀದಿದಾರರನ್ನು ಈ ದಾವೆಯಲ್ಲಿ ಸೇರಿಸಿಲ್ಲ, ಮಾರಾಟವನ್ನು ಪ್ರಶ್ನಿಸಿಲ್ಲ ಎಂದು ಲಿಖಿತ ಹೇಳಿಕೆಯಲ್ಲಿ ವಾದಿಸಿದೆ.
ಪ್ರತಿವಾದಿಯ ಅವರ ಪರ ಸಾಕ್ಷಿದಾರರನ್ನು ಹಾಜರುಪಡಿಸಿದೆ. ವಾದಿ ಪರ ವಕೀಲರು ಸಾಕ್ಷಿದಾರರನ್ನು ಪಾಟಿ ಸವಾಲಿಗೆ ಒಳಪಡಿಸಿದರು.
ವಾದ ವಿವಾದ: ವಾದಿ ಪರ ವಕೀಲರು, ವಾದಿಯ ತಂದೆ ಮಾರಾಟ ಮಾಡಿದ ಆಸ್ತಿಗಳು ಏಕತ್ರ ಕುಟುಂಬ ಆಸ್ತಿಗಳು. ಉಳಿದ ಸಹೋದರರ ಹೆಸರಲ್ಲಿ ಇರುವ ಆಸ್ತಿಗಳಲ್ಲಿ ವಾದಿಯ ತಂದೆಗೆ ಹಿಸ್ಸೆ ಇರುವುದರಿಂದ ವಾದಿಗೆ ಹಿಸ್ಸೆ ಇದೆ ಎಂದು ವಾದಿಸಿದರು. ಪ್ರತಿವಾದಿಯರ ಪರ ನಾನು ವಾದಿಸಿ, ಪ್ರತಿವಾದಿಯರ ನಡುವೆ ನೋಂದಾಯಿತ ಪಾಲು ಪತ್ರವಾಗಿ, ವಾದಿಯ ತಂದೆ ತನ್ನ ಹಿಸ್ಸೆಯ ಆಸ್ತಿ ಮಾರಾಟ ಮಾಡಿದ್ದಾನೆ. ವಾದಿ ಮಾರಾಟ ಮಾಡಿದ ಆಸ್ತಿ ಪ್ರಶ್ನಿಸಿಲ್ಲ, ದಾವೆಯಲ್ಲಿ ಅಳವಡಿಸಿಲ್ಲ. ಪಾಲು ಕೇಳಬೇಕಿದ್ದ ಆಸ್ತಿ ದಾವೆಯಲ್ಲಿ ಇಲ್ಲ ಎಂದು ವಾದಿಸಿದೆ.
ನ್ಯಾಯಾಲಯವು ದಾವೆಯನ್ನು ಖರ್ಚು ಸಹಿತ ವಜಾಗೊಳಿಸಿ ತೀರ್ಪು ನೀಡಿ, ವಾದಿಯ ತಂದೆ ತನ್ನ ಪಾಲಿಗೆ ಬಂದ ಆಸ್ತಿಯನ್ನು ಸುಮಾರು ೪೦ ವರ್ಷಗಳ ಹಿಂದೆ ಮಾರಾಟ ಮಾಡಿದ್ದಾನೆ. ಉಳಿದ ಸಹೋದರರ ಹೆಸರಿರುವ ಆಸ್ತಿಯುಲ್ಲಿ ತಂದೆಗೆ ಹಕ್ಕು ಉಳಿದಿಲ್ಲ. ಆದ್ದರಿಂದ ವಾದಿಗೆ ಹಿಸ್ಸೆ ಇರುವದಿಲ್ಲ. ವಾದಿಯು ನಿಜ ಸಂಗತಿ ಮುಚ್ಚಿಟ್ಟಿದ್ದಾಳೆ. ವಾದಿ ಸ್ವಚ್ಛ ಮನಸ್ಸಿನಿಂದ ಕೋರ್ಟ್ ಬಾಗಿಲು ತಟ್ಟಿಲ್ಲ ಎಂದು ಅಭಿಪ್ರಾಯಪಟ್ಟಿತು. ಕಕ್ಷಿದಾರರು ಸುಳ್ಳು ದಾವೆಯಿಂದ ಬಚಾವಾದ ಸಂತೃಪ್ತಿ ನನ್ನಲ್ಲಿ ಸುಳಿಯಿತು.