ನಮ್ಮ ಸಂವಿಧಾನದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಲಾಗಿದೆ. ಅವರು ಯಾವುದೇ ರೀತಿ ಭಯಭೀತಿಗೆ ಒಳಗಾಗದೇ ತೀರ್ಪು ನೀಡಲಿ ಎಂದು ಸಂವಿಧಾನಬದ್ಧವಾಗಿ ರಕ್ಷಣೆ ಒದಗಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಕೆಲವು ನಿರ್ಬಂಧಗಳೂ ಇವೆ. ಸಾರ್ವಜನಿಕ ಜೀವನದಲ್ಲಿ ಅವರು ಪಾಲ್ಗೊಳ್ಳಲು ಹಲವು ಕಟ್ಟುಪಾಡುಗಳಿವೆ. ಅವುಗಳನ್ನು ಪಾಲಿಸಲೇಬೇಕು. ಈಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮೇಲೆ ಆರೋಪಗಳು ಕೇಳಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ನ್ಯಾಯಮೂರ್ತಿ ವರ್ಮಾ ಅವರ ಬಂಗಲೆಯಲ್ಲಿ ಅರೆ ಸುಟ್ಟ ನೋಟುಗಳು ಪತ್ತೆಯಾಗಿದ್ದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು ನಿಜ. ನ್ಯಾಯಮೂರ್ತಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಪ್ರಕರಣ ಮುಚ್ಚಿ ಹೋಗುತ್ತದೆ ಎಂದು ತಿಳಿದಿದ್ದ ಜನರಿಗೆ ಸುಪ್ರೀಂ ಕೋರ್ಟ್ ಆಶ್ಚರ್ಯ ಮೂಡಿಸಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಸುಪ್ರೀಂ ಕೋರ್ಟ್ ಸಿಜೆ ಅವರು ಮೂವರು ನ್ಯಾಯಮೂರ್ತಿ ಸಮಿತಿ ರಚಿಸಿ ವರದಿ ನೀಡುವಂತೆ ಕೇಳಿದ್ದರು. ಈಗ ನ್ಯಾಯಮೂರ್ತಿಗಳ ಸಮಿತಿ ಆರೋಪದಲ್ಲಿ ಮೇಲುನೋಟಕ್ಕೆ ನಿಜಾಂಶ ಕಂಡು ಬಂದಿದೆ ಎಂದು ತಿಳಿಸಿದೆ. ಈ ವರದಿಯನ್ನು ಸಿಜೆ ಅವರು ನ್ಯಾಯಮೂರ್ತಿ ವರ್ಮಾ ಅವರಿಗೆ ಕಳುಹಿಸಿಕೊಟ್ಟಿದ್ದರು. ಅವರು ಅದಕ್ಕೆ ಉತ್ತರ ಕೊಡಲಿಲ್ಲ. ಅಲ್ಲದೆ ರಾಜೀನಾಮೆ ನೀಡಲು ಒಪ್ಪಿಲ್ಲ. ಹೀಗಾಗಿ ಸಿಜೆ ಅವರು ರಾಷ್ಟçಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ತಿಳಿಸಿದ್ದಾರೆ. ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸುವುದು ಸುಲಭದ ಕೆಲಸವಲ್ಲ. ಲೋಕಸಭೆ ೧೦೦ ಸದಸ್ಯರು, ರಾಜ್ಯಸಭೆ ೫೦ ಸದಸ್ಯರು ಪದಚ್ಯುತಕ್ಕೆ ಒತ್ತಾಯಿಸುವ ನಿರ್ಣಯ ಮಂಡಿಸಲು ಅನುಮೋದಿಸಬೇಕು. ಸ್ಪೀಕರ್ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪರಿಶೀಲನೆಗೆ ತೆಗೆದುಕೊಳ್ಳುವ ಮೂರು ಸದಸ್ಯರ ಸಮಿತಿ ರಚಿಸಬೇಕು. ಅದರ ವರದಿ ಬಂದ ಮೇಲೆ ನಿರ್ಣಯವನ್ನು ಚರ್ಚೆ ತೆಗೆದುಕೊಳ್ಳಬೇಕು. ಆಗ ನಿರ್ಣಯವನ್ನು ಮತಕ್ಕೆ ಹಾಕಲೇಬೇಕು. ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಒಪ್ಪಿಗೆ ನೀಡಬೇಕು. ಎರಡೂ ಸದನಗಳು ಒಪ್ಪಿಗೆ ನೀಡಬೇಕು. ಇದೂವರೆಗೆ ಸುಪ್ರೀಂ ಕೋರ್ಟ್ ಯಾವ ನ್ಯಾಯಮೂರ್ತಿಗಳೂ ಈ ಶಿಕ್ಷೆಗೆ ಗುರಿಯಾಗಿಲ್ಲ. ನ್ಯಾಯಮೂರ್ತಿ ವಿ ರಾಮಸ್ವಾಮಿ ಪ್ರಕರಣದಲ್ಲೂ ನಿರ್ಣಯಕ್ಕೆ ಬೆಂಬಲ ಸಿಗಲಿಲ್ಲ. ೨೦೧೭ ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ವಿಷಯದಲ್ಲೂ ಪದಚ್ಯುತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ೨೦೧೮ ರಲ್ಲಿ ನ್ಯಾಯಮೂರ್ತಿ ಎಸ್. ಎನ್. ಶುಕ್ಲಾ ಅವರ ಮೇಲೆ ಕ್ರಮ ಕೈಗೊಳ್ಳಲು ಹೇಳಿದರೂ ಆಗಲಿಲ್ಲ. ೨೦೦೮ ರಲ್ಲಿ ಸಿಜೆ ಬಾಲಕೃಷ್ಣ ಅವರು ನ್ಯಾಯಮೂರ್ತಿ ಸೌಮಿತ್ರ ಸೇನ್ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರು. ಆದರೂ ಏನೂ ಆಗಲಿಲ್ಲ. ಬಹುತೇಕ ನ್ಯಾಯಮೂರ್ತಿಗಳು ರಾಜೀನಾಮೆ ಸಲ್ಲಿಸಿ ಬಿಕ್ಕಟ್ಟಿನಿಂದ ಪಾರಾಗಿದ್ದಾರೆ. ನ್ಯಾಯಾಂಗದ ಬಗ್ಗೆ ಜನರಲ್ಲಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮತ್ತು ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕೆ ನ್ಯಾಯಮೂರ್ತಿಗಳ ಯಾವ ಮುಲಾಜಿಗೂ ಒಳಗಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನ್ಯಾಯಮೂರ್ತಿಗಳ ಮೇಲಿನ ಆರೋಪಗಳಿಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು ಕಷ್ಟ ಎಂಬಂತೆ ನಿಯಮಗಳನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಎಲ್ಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರವಿದೆ. ಆದರೆ ಯಾವುದೇ ಕ್ರಮ ಕೈಗೊಂಡರೂ ಅದು ಪಾರದರ್ಶಕವಾಗಿರಬೇಕು. ಗುಪ್ತವಾಗಿ ಏನನ್ನೂ ಮಾಡಲು ಬರುವುದಿಲ್ಲ. ಈಗ ನ್ಯಾಯಮೂರ್ತಿ ಯಶವಂತ ವರ್ಮಾ ವಿಚಾರದಲ್ಲಿ ಸಿಜೆ ಅವರು ಪ್ರತಿ ಹಂತದಲ್ಲೂ ಸಾರ್ವಜನಿಕರಿಗೆ ತಿಳಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಯಾವುದನ್ನೂ ಮುಚ್ಚಿಡಲು ಬರುವುದಿಲ್ಲ. ನ್ಯಾಯಮೂರ್ತಿಗಳೂ ಈ ವಿಷಯದಲ್ಲಿ ಸಂಪೂರ್ಣ ಸಹಕಾರ ನೀಡಲು ಕಾನೂನು ರೀತ್ಯ ಬದ್ಧರು. ಕಾನೂನು ಕುಣಿಕೆಯಿಂದ ಪಾರಾಗಲು ಅವಕಾಶವಿಲ್ಲ. ಎಲ್ಲವೂ ತೆರೆದ ಪುಸ್ತಕವಾಗಿರಲೇಬೇಕು. ಒಂದೇ ಒಂದು ಅವಕಾಶ ಎಂದರೆ ಪದಚ್ಯುತಿಗೆ ಮುನ್ನ ರಾಜೀನಾಮೆ ಕೊಡುವ ಅವಕಾಶ. ಅದರ ಬಗ್ಗೆ ಕಳಂಕ ಹೊತ್ತ ನ್ಯಾಯಮೂರ್ತಿ ವರ್ಮಾ ಇನ್ನೂ ತೀರ್ಮಾನ ಮಾಡಿಲ್ಲ. ಅಲ್ಲಿಯವರೆಗೆ ಯಾವುದೇ ಕೆಲಸ ಒಪ್ಪಿಸಬಾರದು ಎಂದು ಸುಪ್ರೀಂ ಸಿಜೆ ಆದೇಶಿಸಿರುವುದು ಸಕಾಲಿಕವಾಗಿದೆ. ನ್ಯಾಯಾಂಗ ಇನ್ನು ತನ್ನ ಘನತೆ ಗೌರವ ಉಳಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ. ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಿಸಿಕೊಳ್ಳಬೇಕು. ಕರ್ನಾಟಕ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ತಮ್ಮ ಆಸ್ತಿ ಘೋಷಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾದರು. ನ್ಯಾಯಮೂರ್ತಿಗಳನ್ನು ಜನ ದೇವರೆಂದು ಭಾವಿಸುವುದರಿಂದ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಗತ್ಯ. ನ್ಯಾಯಮೂರ್ತಿಗಳಿಗೆ ಕಾನೂನುಗಿಂತ ಮನ:ಸಾಕ್ಷಿ ಮುಖ್ಯ. ಅದರಂತೆ ನಡೆದುಕೊಳ್ಳುವುದು ಅಗತ್ಯ. ನ್ಯಾಯಮೂರ್ತಿಗಳು ಸಂಶಯಾತೀತರಾಗಿರಬೇಕು ಎಂದು ಬಯಸುವುದು ತಪ್ಪೇನಲ್ಲ. ಅದರಿಂದಲೇ ಸಂಸತ್ತು ತನ್ನ ಪರಮಾಧಿಕಾರವನ್ನು ಚಲಾಯಿಸಲು ಬಯಸುವುದಿಲ್ಲ. ನ್ಯಾಯಾಂಗ ಕೂಡ ಅದಕ್ಕೆ ತಕ್ಕಂತೆ ಕೆಲಸ ಮಾಡುವುದು ಅಗತ್ಯ.