ಖಾದ್ಯ ತೈಲ ಆಮದಿಗೆ ಅಲ್ಪವಿರಾಮ

ಪ್ರಸಕ್ತ ಸಾಲಿನ ಫೆಬ್ರುವರಿಯಲ್ಲಿ ಖಾದ್ಯ ತೈಲ ಆಮದು ೮.೮೫ ಲಕ್ಷ ಟನ್‌ದಷ್ಟಾಗಿದ್ದು, ಕೋವಿಡ್ ಸಮಯದಲ್ಲಿನ ೨೦೨೦ ಮೇ ತಿಂಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎನ್ನಲಾಗಿದೆ. ಖಾದ್ಯ ತೈಲ ದಾಸ್ತಾನು ಹೆಚ್ಚಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
೨೦೨೪-೨೫ನೇ ಸಾಲಿನ ತೈಲ ವರ್ಷದ(ನವೆಂಬರ್-ಅಕ್ಟೋಬರ್) ಫೆಬ್ರವರಿ ತಿಂಗಳಿನಲ್ಲಿ ಖಾದ್ಯ ತೈಲ ಆಮದು ೮.೮೫ ಲಕ್ಷ ಟನ್‌ದಷ್ಟಾಗಿದೆ. ೨೦೨೩-೨೪ರಲ್ಲಿ ಇದು ೯.೫೮ ಲಕ್ಷ ಟನ್‌ದಷ್ಟಿತ್ತು. ಶೇ.೭.೬೪ರಷ್ಟು ಇಳಿಕೆಯಾಗಿದೆ. ಮೇ.೨೦೨೦ರಲ್ಲಿ ಇದು ೭.೨೦ ಲಕ್ಷ ಟನ್‌ದಷ್ಟಾಗಿತ್ತು. ಇದಾದ ನಂತರ ಈಗ ಫೆಬ್ರುವರಿ ತಿಂಗಳಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಖಾದ್ಯ ತೈಲ ಆಮದಾಗಿದೆ. ಈ ಅವಧಿಯಲ್ಲಿ ಒಟ್ಟು ೩.೭೩ ಲಕ್ಷ ಟನ್ ಪಾಮೆಣ್ಣೆ ಆಮದಾಗಿದೆ. ಹಿಂದಿನ ವರ್ಷ ಇದು ೪.೯೭ ಲಕ್ಷ ಟನ್‌ದಷ್ಟಿತ್ತು. ರಿಫೈನಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಆಮದುದಾರರು ಸಾಫ್ಟ್ ಆಯಿಲ್ ಆಮದಿಗೆ ಒಲವು ತೋರಿದ್ದಾರೆಂದು ಮೂಲಗಳು ತಿಳಿಸಿವೆ.
ಸಾಫ್ಟ್ ಆಯಿಲ್ ಆಮದು ೫.೧೨ ಲಕ್ಷ ಟನ್‌ದಷ್ಟಾಗಿದ್ದು, ಹಿಂದಿನ ೪.೭೦ ಲಕ್ಷ ಟನ್‌ಗಿಂತ ಶೇ.೮.೩೪ರಷ್ಟು ಹೆಚ್ಚಳವಾಗಿದೆ. ೨೦೨೪-೨೫ನೇ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ಒಟ್ಟು ಆಮದು ೪೬.೬೯ ಲಕ್ಷ ಟನ್‌ಗೆ ಏರಿಕೆಯಾಗಿದೆ. ಹಿಂದಿನ ಅವಧಿಯಲ್ಲಿದ್ದ ೪೬.೦೬ ಲಕ್ಷ ಟನ್‌ಗಿಂತ ಶೇ.೧.೩೫ರಷ್ಟು ಅಧಿಕವಾಗಿದೆ. ೨೦೨೪ರ ನವೆಂಬರ್‌ವರೆಗೆ ಖಾದ್ಯ ತೈಲದ ಅಧಿಕ ದಾಸ್ತಾನು ಸಂಗ್ರಹವಾಗಿದ್ದರ ಹಿನ್ನೆಲೆಯಲ್ಲಿ ಸದ್ಯಕ್ಕೆ ಆಮದು ಇಳಿಕೆಯಾಗಿದೆ. ಇದೀಗ ಎರಡು ಮಿಲಿಯನ್ ಟನ್‌ಗಿಂತಲೂ ಕಡಿಮೆಯಾಗಿದೆ. ಇದು ಪಾಮೆಣ್ಣೆಯ ಹೆಚ್ಚಿನ ಖರೀದಿಗೆ ದಾರಿ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಚ್ಚಾ ಪಾಮೆಣ್ಣೆ ದರ ಕೊಂಚ ದೃಢಗೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಪರ್ಧಾತ್ಮಕತೆ ದುರ್ಬಲವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಪಾಮೆಣ್ಣೆ ಆಮದು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ೨೦೨೪-೨೫ರಲ್ಲಿ ಖಾದ್ಯ ತೈಲ ಬಳಕೆ ಮಂದಗತಿಯಲ್ಲಿ ಇರುವದೆಂದು ಅಂದಾಜಿಸಲಾಗಿದೆ. ಪಾಮೆಣ್ಣೆಯ ಮೇಲಿನ ಅಧಿಕ ಪ್ರೀಮಿಯಮ್ ದರದ ಪರಿಣಾಮವಾಗಿ ಇತ್ತೀಚೆಗೆ ಇದರ ಬಳಕೆ ಹಾಗೂ ಆಮದು ಇಳಿಮುಖವಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಸೋಯಾಬೀನ್ ಹಾಗೂ ಸೂರ್ಯಕಾಂತಿ ಎಣ್ಣೆಗಳ ಬಳಕೆ ಹೆಚ್ಚಳಕ್ಕೆ ನಾಂದಿಯಾಗಿದೆ.