ಕರ್ನಾಟಕಕ್ಕೆ ಪ್ರತ್ಯೇಕ ಕೃಷಿ ರಫ್ತು ವಿಭಾಗ

ಕರ್ನಾಟಕಕ್ಕೆ ಪ್ರತ್ಯೇಕ ಕೃಷಿ ರಫ್ತು ವಿಭಾಗವನ್ನು ರಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿರುವುದು ಶುಭಸೂಚನೆ. ಇದರಿಂದ ರಾಜ್ಯದಲ್ಲಿ ರಫ್ತಿಗೆ ಬೇಕಾಗುವ ಕೃಷಿ ಉತ್ಪನ್ನಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ಸಿಗಲಿದೆ. ಅಲ್ಲದೆ ನಿಗದಿತ ಆದಾಯವನ್ನು ರೈತರು ನಿರೀಕ್ಷಿಸಬಹುದು. ಈಗ ಕೃಷಿ ಆದಾಯ ತರುವ ವೃತ್ತಿಯಾಗಿ ಉಳಿದಿಲ್ಲ. ಆಹಾರಧಾನ್ಯಗಳು ನಿರೀಕ್ಷಿತ ವರಮಾನ ತರುವುದಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ಧಾರಣೆ ಇದ್ದಕ್ಕಿದ್ದಂತೆ ಬದಲಾಗುವುದರಿಂದ ರೈತ ಬಹುತೇಕ ಸಮಯ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆಹಾರ ಧಾನ್ಯಗಳ ಬೆಲೆ ಅಧಿಕಗೊಂಡಾಗ ಎಲ್ಲರೂ ಅದನ್ನು ಟೀಕಿಸುತ್ತಾರೆ. ಆದರೆ ಬೆಲೆ ಕುಸಿದಾಗ ರೈತನ ಪರ ಯಾರೂ ಮಾತನಾಡುವುದಿಲ್ಲ. ಇದಕ್ಕೆ ಪರಿಹಾರ ಈಗ ಕಂಡು ಬರುತ್ತಿರುವುದು ರಫ್ತಾಗುವ ಕೃಷಿ ಉತ್ಪನ್ನಗಳು. ಅದರಲ್ಲೂ ಸಾವಯವ ಕೃಷಿ ಅವಲಂಬಿತ ಆಹಾರ ಧಾನ್ಯಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಬೆಂಗಳೂರು ಮೂಲಕ ಹಲವು ದೇಶಗಳಿಗೆ ಆಹಾರ ಧಾನ್ಯಗಳು, ಕಾಫಿ, ಗೋಡಂಬಿ, ಏಲಕ್ಕಿ, ಮೆಣಸು ಮತ್ತಿತರ ವಸ್ತುಗಳು ಹಾಗೂ ವಿವಿಧ ರೀತಿಯ ಪುಷ್ಪಗಳು ರಫ್ತಾಗುತ್ತಿದೆ. ಈಗ ಇವುಗಳನ್ನು ಕೈಗಾರಿಕೆ ವಸ್ತುಗಳ ರಫ್ತಿನೊಂದಿಗೆ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಇದಕ್ಕೆ ಪ್ರತ್ಯೇಕ ವಿಭಾಗ ತೆರೆದರೆ ಕೃಷಿ ಉತ್ಪನ್ನಗಳು ಬಾಡುವ ಮುನ್ನ ವಿದೇಶಗಳನ್ನು ತಲುಪುವ ಹಾಗೆ ಮಾಡಬಹುದು. ಗುಲಾಬಿ, ಈರುಳ್ಳಿ ಸೇರಿದಂತೆ ಹಲವು ಪದಾರ್ಥಗಳು ರಫ್ತಿಗೆ ಪ್ರತ್ಯೇಕ ತಳಿಗಳಿವೆ. ಒಟ್ಟು ಕೃಷಿ ಉತ್ಪನ್ನಗಳೇ ವಾರ್ಷಿಕ ೨೭೮೦.೩೬ ದಶಲಕ್ಷ ಡಾಲರ್‌ಗಳಷ್ಟು ರಫ್ತಾಗಿ ವಿದೇಶಿ ವಿನಿಮಯ ತರುತ್ತಿವೆ. ಇದು ದೇಶದ ಒಟ್ಟು ರಫ್ತಿನಲ್ಲಿ ಶೇ. ೭.೩೭ರಷ್ಟಾಗಿದೆ. ಇದಕ್ಕಿಂತ ದೊಡ್ಡದು ಪುಷ್ಪೋದ್ಯಮ. ಒಟ್ಟು ೧೮,೦೦೦ ಹೆಕ್ಟೇರ್‌ನಲ್ಲಿ ೪೦ ಕಂಪನಿಗಳು ಹೂವುಗಳನ್ನು ಬೆಳೆದು ವಿದೇಶಗಳಿಗೆ ಪ್ರತಿದಿನ ರವಾನಿಸುವ ಕೆಲಸ ಕೈಗೊಂಡಿದೆ.
ಸಾವಯವ ಕೃಷಿ ನಮ್ಮಲ್ಲಿ ಮೊದಲಿನಿಂದಲೂ ಬಳಕೆಯಲ್ಲಿತ್ತು. ಆದರೆ ರಸಗೊಬ್ಬರ ಬಂದ ಮೇಲೆ ಅದನ್ನು ಕೈಬಿಡಲಾಯಿತು. ಹಸಿರು ಕ್ರಾಂತಿಯಾದ ಮೇಲೆ ಆಹಾರ ಉತ್ಪಾದನೆ ಅಧಿಕಗೊಂಡಿದ್ದು ನಿಜವಾದರೂ ವಿದೇಶಗಳಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ರಾಸಾಯಿನಿಕ ಅಂಶ ಇರುವುದನ್ನು ಅವರು ಒಪ್ಪುವುದಿಲ್ಲ. ಹೀಗಾಗಿ ವಿದೇಶಗಳಿಗೆ ಕೃಷಿ ಉತ್ಪನ್ನ ರಫ್ತು ಮಾಡಬೇಕು ಎಂದರೆ ಸಾವಯವ ಕೃಷಿಪದ್ಧತಿಯನ್ನು ಅನುಸರಿಸಲೇಬೇಕು. ಅದರೊಂದಿಗೆ ಬೆಳೆ ಕೊಯ್ಲಿಗೆ ಬಂದಾಗ ಅದಕ್ಕೆ ಪ್ರತ್ಯೇಕ ಪದ್ಧತಿಗಳನ್ನು ಅನುಸರಿಸಬೇಕು. ಈಗ ಕೃಷಿ ಅವಲಂಬಿಸಿರುವ ಯುವ ಪೀಳಿಗೆ ಈ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು ಕಾಫಿ ಉತ್ಪನ್ನ ಈಗಲೂ ವಿದೇಶಗಳಲ್ಲಿ ಈಗಲೂ ಅಧಿಕ ಬೇಡಿಕೆ ಇದೆ. ಇದಕ್ಕೆಲ್ಲ ಮುಖ್ಯ ಕಾರಣ ಸೂಕ್ತ ವಾತಾವರಣ. ಈಗ ಪರಿಸರ ಮಾಲಿನ್ಯದಿಂದ ಬದಲಾವಣೆಗಳು ಕಂಡು ಬರುತ್ತಿರುವುದರಿಂದ ಕೃಷಿಕರು ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯವಾಗಿದೆ. ಹಸಿರು ಮನೆಗಳನ್ನು ನಿರ್ಮಿಸಿ ಅಲ್ಲಿ ನಿಗದಿತ ಬೆಳೆಗೆ ವ್ಯವಸ್ಥೆ ಮಾಡುವವರೂ ಇದ್ದಾರೆ. ಆದರೆ ಇದು ದುಬಾರಿಯಾಗುವುದರಿಂದ ನಿಗದಿತ ಮಾರುಕಟ್ಟೆ ಇದ್ದರೆ ಮಾತ್ರ ಬೆಳೆಯಬಹುದು. ಪ್ರತಿಯೊಂದು ಸ್ಥಳದಲ್ಲೂ ವಿಶಿಷ್ಟ ಮಣ್ಣಿನ ಗುಣ ಇರುತ್ತದೆ. ಆ ಪ್ರದೇಶದಲ್ಲಿ ನಿಗದಿತ ಬೆಳೆಯನ್ನೇ ಕೃಷಿ ಮಾಡಬೇಕು. ಹಿಂದೆ ನಂಜನಗೂಡು ಬಾಳೆ, ಬೆಂಗಳೂರು ನೀಲಿ ದ್ರಾಕ್ಷಿ ಎಂದು ಹೇಳುತ್ತಿದ್ದರು. ಈಗ ಅವು ಮಾಯವಾಗಿವೆ. ಇವುಗಳನ್ನು ಮತ್ತೆ ಪುನರುತ್ಥಾನಗೊಳಿಸಲು ಕೃಷಿ ವಿಜ್ಞಾನಿಗಳು-ರೈತರು ಒಟ್ಟಿಗೆ ಶ್ರಮಿಸುವ ಅಗತ್ಯವಿದೆ. ಕೈಗಾರಿಕೆ ಉತ್ಪನ್ನದ ಮೇಲೆ ಪರಿಸರದ ಪ್ರಭಾವ ಇರುವುದಿಲ್ಲ. ಕೃಷಿ ಉತ್ಪನ್ನಗಳ ಮೇಲೆ ಹಲವು ರೀತಿಯ ಪ್ರಭಾವಗಳಿರುತ್ತವೆ. ಅವುಗಳನ್ನು ನೋಡಿಕೊಂಡು ವ್ಯವಹರಿಸುವುದು ಅಗತ್ಯ.
ರಾಜ್ಯಕ್ಕೆ ಪ್ರತ್ಯೇಕ ರಫ್ತು ವಿಭಾಗವಾದಲ್ಲಿ ಇವುಗಳ ಬಗ್ಗೆ ಚಿಂತನೆ ನಡೆಸಲು ಸಾಧ್ಯವಾಗಲಿದೆ. ಅಲ್ಲದೆ ರಫ್ತಾಗುವ ಬೆಳೆಗಳ ರಕ್ಷಣೆಗೆ ಬೇಕಾದ ವಿಭಿನ್ನ ಕ್ರಮಗಳನ್ನು ಕೈಗೊಳ್ಳಬಹುದು. ಅಲ್ಲದೆ ವಿಮಾನ ನಿಲ್ದಾಣಗಳಲ್ಲಿ ಕೆಲವು ವಿಶಿಷ್ಟ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬಹುದು. ಈಗ ಆಂಧ್ರದಲ್ಲಿ ಮೆಣಸಿನಕಾಯಿ ರಫ್ತಿಗೆ ವಿಶೇಷ ವ್ಯವಸ್ಥೆ ಇದೆ.ಅದೇರೀತಿ ನಮ್ಮಲ್ಲೂ ರೈತರ ಅನುಕೂಲಕ್ಕಾಗಿ ಕೆಲವು ವ್ಯವಸ್ಥೆಗಳನ್ನು ಮಾಡಬೇಕು ಎಂದರೆ ಪ್ರತ್ಯೇಕ ವಿಭಾಗ ರಚಿಸುವುದು ಅಗತ್ಯ. ಕೃಷಿ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಮಾತ್ರ ರಫ್ತಿಗೆ ಬಗ್ಗೆ ವಿಶೇಷ ಅಧ್ಯಯನ ಮತ್ತು ತರಬೇತಿಗಳನ್ನು ಕೈಗೊಳ್ಳಬಹುದು. ಅದಕ್ಕೆ ರಫ್ತು ವಿಭಾಗ ವೇದಿಕೆ ಆಗಲಿದೆ. ಕೃಷಿ ಭೂಮಿ ದಿನೇದಿನೇ ಇಳಿಮುಖಗೊಳ್ಳುತ್ತಿರುವುದರಿಂದ ಲಭ್ಯವಿರುವ ಭೂಮಿಯನ್ನೇ ನಾಜೂಕಾಗಿ ಬಳಸಿಕೊಳ್ಳುವುದು ಅಗತ್ಯ. ಭೂಮಿ ಕೂಡ ವಾಣಿಜ್ಯ ವಸ್ತು ಎಂಬುದನ್ನು ರಫ್ತು ರಂಗ ರೈತರಿಗೆ ತೋರಿಸಿಕೊಟ್ಟಿದೆ. ಇದರಿಂದ ರೈತರಲ್ಲಿರುವ ಕೀಳರಿಮೆ ನಿವಾರಣೆಯಾಗಲಿದೆ. ಕೃಷಿಕ ಕೂಡ ರಫ್ತುದಾರನಾಗುತ್ತಾನೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ರಫ್ತು ಕೂಡ ಪ್ರಮುಖ ಆಗಲಿದೆ.