Tungabhadra Dam: ಟಿಬಿ ಡ್ಯಾಂನಿಂದ 25 ಟಿಎಂಸಿ ಅಡಿ ನೀರು ಪೋಲು!

ತುಂಗಭದ್ರಾ ಡ್ಯಾಂನಿಂದ ನೀರು ಪೋಲಾಗುತ್ತಿದೆ. ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಈ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮಲ್ಲಿಕಾರ್ಜುನ ಚಿಲ್ಕರಾಗಿ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

ಬಳ್ಳಾರಿ: ರಾಜ್ಯದ ಅನ್ನದ ಬಟ್ಟಲಿಗೆ ನೀರು ಪೂರೈಸುವ ತುಂಗಭದ್ರಾ ಜಲಾಶಯದ ಗೇಟುಗಳ ದುರಸ್ತಿ ಪರಿಣಾಮ ನೀರಿನ ಸಂಗ್ರಹ ಸಾಮರ್ಥ್ಯ 105 ಟಿಎಂಸಿಯಿಂದ 80 ಟಿಎಂಸಿಗೆ ಕುಸಿದಿದೆ. ಒಂದೇ ವಾರದಲ್ಲಿ 25 ಟಿಎಂಸಿ ನೀರನ್ನು ನದಿ ಮೂಲಕ ಹೊರ ಹರಿಸಲಾಗಿದೆ. ಮುಂಗಾರು ಆರಂಭದಲ್ಲೇ ಇಷ್ಟೊಂದು ಪ್ರಮಾಣದ ನೀರು ಪೋಲಾಗಿರುವುದು ಡ್ಯಾಂ ನಿರ್ಮಾಣ ಇತಿಹಾಸದಲ್ಲೇ ಮೊದಲು ಇದರಿಂದ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ.

ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ನೆರೆಯ ಆಂಧ್ರ ಮತ್ತು ತೆಲಂಗಾಣದ ಕೆಲ ಜಿಲ್ಲೆಗಳ ಪಾಲಿಗೆ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ. ಕುಡಿಯುವ ನೀರು, ಕೃಷಿ, ಕಾರ್ಖಾನೆಗಳಿಗೆ ಇದೇ ಜಲಾಶಯ ಆಧಾರವಾಗಿದೆ.

133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಇಲ್ಲಿನ ಜಲಾಶಯದಲ್ಲಿ 28 ಟಿಎಂಸಿಯಷ್ಟು ಹೂಳು ತುಂಬಿದ್ದರಿಂದ 105 ಟಿಎಂಸಿವರೆಗೆ ಮಾತ್ರ ನೀರು ಸಂಗ್ರಹವಾಗುತ್ತಿತ್ತು. ಆದರೆ, ಕಳೆದ 2024ರ ಆಗಸ್ಟ್‌ನಲ್ಲಿ ಡ್ಯಾಂನ 19ನೇ ಕ್ರಸ್ಟ್ ಗೇಟು ಕೊಚ್ಚಿಹೋಗಿತ್ತು. ಈ ವೇಳೆ 35 ಟಿಎಂಸಿ ನೀರು ನದಿ ಮೂಲಕ ಆಂಧ್ರದ ಪಾಲಾಗಿತ್ತು.

ಆದರೆ, ಪ್ರಸಕ್ತ ವರ್ಷ ಮುಂಗಾರು ಆರಂಭದ ಜೂನ್ ಅಂತ್ಯದಲ್ಲೇ ಜಲಾಶಯದಲ್ಲಿ 75 ಟಿಎಂಸಿಯಷ್ಟು ನೀರು ಸಂಗ್ರಹಗೊಂಡಿದೆ. ಒಳಹರಿವು ಉತ್ತಮವಾಗಿದ್ದರಿಂದ ಜು.3ರಿಂದ ನದಿಗೆ ನೀರು ಹರಿಸಲಾಗಿದ್ದು, ಜೂ.9ರವರೆಗೆ (ಬರೋಬ್ಬರಿ ಒಂದು ವಾರ) 25 ಟಿಎಂಸಿ ನೀರು ನದಿ ಮೂಲಕ ಹರಿದು ಆಂಧ್ರ ಸೇರಿದೆ.

19ನೇ ಕ್ರಸ್ಟ್‌ಗೇಟ್ ಕೊಚ್ಚಿದ ಬಳಿಕ ರಾಜ್ಯ ಸರ್ಕಾರ ಹಾಗೂ ಆಂಧ್ರ, ತೆಲಂಗಾಣ ಜಲತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸಾಹಸಪಟ್ಟು ಹರಿಯುವ ನೀರಿನಲ್ಲಿ ತಾತ್ಕಾಲಿಕವಾಗಿ ಸ್ಟಾಪ್‌ಲಾಗ್ ಗೇಟು ಅಳವಡಿಕೆ ಮಾಡಲಾಯಿತು.

ಬಳಿಕ ಸಿಡಬ್ಲ್ಯೂಸಿ (ಕೇಂದ್ರ ಜಲ ಆಯೋಗ) 19 ಸಹಿತ ಜಲಾಶಯದ 33 ಗೇಟುಗಳ ಗುಣಮಟ್ಟ ಪರಿಶೀಲನೆ ಮಾಡಿ, ಎಲ್ಲವನ್ನೂ ಬದಲಾಯಿಸಲು ವರದಿ ನೀಡಿತು. ಈ ಪ್ರಕಾರ ಗೇಟುಗಳ ದುರಸ್ತಿಗೆ 52 ಕೋಟಿ ರೂ. ಹಣ ಹಂಚಿಕೆಯಾಗಿದ್ದು, ಟೆಂಡರ್ ಸಹ ಕರೆಯಲಾಗಿತ್ತು. ಆದರೆ ಹಲವು ತಾಂತ್ರಿಕ ತೊಂದರೆಯಿಂದ ಇದು ಸ್ವೀಕಾರವಾಗಿಲ್ಲ.

ಪ್ರಸ್ತಾವನೆಯಲ್ಲೇ ಪರ್ಯಾಯ ಡ್ಯಾಂ: ಟಿಬಿ ಡ್ಯಾಂನ ಹೂಳಿಗೆ ಪರ್ಯಾಯವಾಗಿ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿದ ಪರ್ಯಾಯ ಡ್ಯಾಂ ಪ್ರಸ್ತಾವನೆಯಲ್ಲೇ ಉಳಿದಿದೆ. 1500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಆಂಧ್ರ, ತೆಲಂಗಾಣ ಒಪ್ಪಿಗೆಯಲ್ಲಿ ಗಿರಕಿ ಹೊಡೆಯುತ್ತಿದೆ.

ಟಿಬಿ ಡ್ಯಾಂ ಆಶ್ರಯಿಸಿ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ಒಟ್ಟು 15 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಕಬ್ಬು, ಬಾಳೆ ಸೇರಿ ಇತರೆ ಬೆಳೆ 1.50 ಲಕ್ಷ ಎಕರೆಯಲ್ಲಿ ಬೆಳೆಯಲಾಗುತ್ತದೆ. ಮೊದಲ ಬೆಳೆಗೆ ಕನಿಷ್ಠ 120 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಡ್ಯಾಂನಲ್ಲಿ ಸಂಗ್ರಹ ಸಾಮರ್ಥ್ಯ 80 ಟಿಎಂಸಿಗೆ ಇಳಿಕೆಯಾಗಿದೆ.

ಗಮನಾರ್ಹ ಸಂಗತಿ ಎಂದರೆ ಜು.1ರಿಂದ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದ್ದು, ಜು.10 ರಿಂದ ಬಲದಂಡೆ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ರೈತರು ಇದುವರೆಗೂ ಭತ್ತ ನಾಟಿ ಆರಂಭವೇ ಮಾಡಿಲ್ಲ. ಇದರಿಂದ ಎರಡನೇ ಬೆಳೆಗೆ ನೀರು ಸಿಗುವುದಿರಲಿ, ಮೊದಲ ಬೆಳೆಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ದಟ್ಟವಾಗಿವೆ.