Darshan Bail News: ದರ್ಶನ್, ಪವಿತ್ರಾ ಗೌಡ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

0
194

ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋಟ್ ಗುರುವಾರ ಆದೇಶಿಸಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರ ಬಂದಿದ್ದರು.

ಕರ್ನಾಟಕ ಸರ್ಕಾರ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಗುರುವಾರ ಆದೇಶವನ್ನು ಪ್ರಕಟಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಹೈಕೋರ್ಟ್‌ ತೀರ್ಪಿನಲ್ಲಿನ ಲೋಪಗಳನ್ನು ಎತ್ತಿ ಹಿಡಿದಿದೆ. ಅಲ್ಲದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರದಲ್ಲಿ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಗುರುವಾರ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಆರ್.ಮಹದೇವನ್ ಅವರಿದ್ದ ವಿಭಾಗೀಯ ಪೀಠವು ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ.

ಇಂದೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳಿಸಲಿದ್ದಾರೆ. ಈಗಾಗಲೇ ಪೊಲೀಸರು ಆರ್.ಆರ್. ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ಆಗಮಿಸಿದ್ದಾರೆ. ದರ್ಶನ್ ನಿವಾಸಕ್ಕೂ ಸಹ ಪೊಲೀಸರು ಆಗಮಿಸುವ ನಿರೀಕ್ಷೆ ಇದೆ.

ನಟ ದರ್ಶನ್ ಮೊದಲು ಬಂಧಿತರಾದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬಳಿಕ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದು ಕೋರ್ಟ್ ಆದೇಶದಂತೆ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಕಳಿಸಲಾಗಿತ್ತು. ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದರು.

ಕೋರ್ಟ್ ಹೇಳಿದ್ದೇನು?: ಇದೊಂದು ಮಹತ್ವದ ತೀರ್ಪು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನು ಕುಮಾರ್, ಎ14 ಪ್ರದೋಶ್, ಎ11 ನಾಗರಾಜು ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದುಗೊಂಡಿದೆ.

ಸರ್ಕಾರ ತನ್ನ ಮೇಲ್ಮನವಿಯಲ್ಲಿ ದರ್ಶನ್‌ಗೆ ಈ ಹಿಂದೆ ಕೂಡ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವು ಎಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ಮರು ದಿನ ಚಿತ್ರ​ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ವಾದಿಸಿತ್ತು.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು ಸರಿ ಇಲ್ಲ. ದಾಖಲೆಗಳಿಗೆ ವಿರುದ್ಧವಾಗಿ ತೀರ್ಪು ನೀಡಲಾಗಿದೆ. ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಆದರೆ, ಮೃತಪಟ್ಟ ವ್ಯಕ್ತಿಯ ಮೈ ಮೇಲಿನ ಗಾಯಗಳು ಇದನ್ನು ಸುಳ್ಳು ಎಂದು ಹೇಳುತ್ತಿವೆ. ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂದು ಅನುಮಾನಿಸಲಾಗಿದೆ ಎಂದು ಹೇಳಿರುವ ಕೋರ್ಟ್, ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಪ್ರಕರಣದ ವಿಚಾರಣೆ ನಡೆಸಿ ಎಂದು ನಿರ್ದೇಶನ ನೀಡಿದೆ.

ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಅಶ್ಲೀಲ ಸಂದೇಶವನ್ನು ಕಳಿಸಿದ್ದ. ಆದ್ದರಿಂದ ನಟ ದರ್ಶನ್ ಸೂಚನೆಯಂತೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬುದು ಆರೋಪವಾಗಿದೆ.

Previous articleWeather Today: ಆಗಸ್ಟ್ 18 ರಿಂದ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ
Next articleDarshan Bail News: ದರ್ಶನ್‌ ಜಾಮೀನು ರದ್ದು, ರಮ್ಯಾ ಪೋಸ್ಟ್ ವೈರಲ್

LEAVE A REPLY

Please enter your comment!
Please enter your name here