ಬಾಹ್ಯಾಕಾಶ ನಿಲ್ದಾಣದಲ್ಲಿ ಚಿಗುರಿದ ಧಾರವಾಡ ಧಾನ್ಯ

ನವದೆಹಲಿ: ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕೊನೆಯ ಹಂತದಲ್ಲಿ ರೈತರಾಗಿ ಪರಿವರ್ತನೆಗೊಂಡಿದ್ದಾರೆ. ಧಾರವಾಡದಿಂದ ಒಯ್ಯಲಾಗಿದ್ದ ಮೆಂತೆ ಮತ್ತು ಹೆಸರು ಬೇಳೆ ಧಾನ್ಯಗಳ ಬೀಜಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಮೊಳಕೆಯೊಡೆದಿವೆ.
ಬೀಜಗಳ ಮೊಳಕೆಯೊಡುವಿಕೆ ಹಾಗೂ ಸಸ್ಯಗಳ ಆರಂಭಿಕ ಬೆಳವಣಿಗೆ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಅಧ್ಯಯನ ಭಾಗವಾಗಿ ಅವುಗಳನ್ನು ಶೇಖರಣಾ ಫ್ರೀಜರ್‌ಗೆ ಸೇರಿಸಿದ್ದಾರೆ.
ಶುಕ್ಲಾ ಅವರು ಆಕ್ಸಿಯಮ್-೪ ತಂಡದ ಅನ್ಯ ಸದಸ್ಯರ ಜೊತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ೧೨ ದಿನಗಳನ್ನು ಕಳೆದಿದ್ದಾರೆ. ಫ್ಲೋರಿಡಾ ಕರಾವಳಿಯ ಹವಾಮಾನ ಪರಿಸ್ಥಿತಿ ಅವಲಂಬಿಸಿ ಜುಲೈ ೧೦ರ ನಂತರ ಈ ತಂಡವು ಭೂಮಿಗೆ ಮರಳುವರೆಂದು ಇದುವರೆಗೆ ಹೇಳಲಾಗುತ್ತಿತ್ತು. ಆದರೆ ಜುಲೈ ೧೦ರ ನಂತರವೂ ಶುಕ್ಲಾ ಮತ್ತವರ ತಂಡವು ಬಾಹ್ಯಾಕಾಶದಲ್ಲಿ ಉಳಿಯುವ ಸಾಧ್ಯತೆ ಇದೆ.
ಪೂರ್ವ ನಿಗದಿಯಂತೆ ಆಕ್ಸಿಯಮ್ ತಂಡವು ಎರಡು ವಾರ ಅಂತರಿಕ್ಷದಲ್ಲಿ ಉಳಿಯುವುದೆಂದು ತೀರ್ಮಾನಿಸಲಾಗಿತ್ತು. ಆದರೀಗ ಈ ತಂಡವು ಮೂರು ವಾರಗಳವರೆಗೂ ಮುಂದುವರಿಯಬಹುದು
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಆಕ್ಸಿಯಮ್-೪ ತಂಡವು ೧೪ ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿದೆ. ಆದಾಗ್ಯೂ ಈ ತಂಡವು ಬಾಹ್ಯಾಕಾಶದಿಂದ ಭೂಮಿಗೆ ಮರಳುವ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಆದರೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಅನುಸಾರ, ಶುಕ್ಲಾ ಅವರ ಸಹೋದ್ಯೋಗಿಗಳಲ್ಲೊಬ್ಬರಾದ ಪೋಲ್ಯಾಂಡಿನ ಸ್ಲಾವೋಸ್ಟ್-ವಿಸಿವ್ಸ್ಕಿ ಅವರು ಜುಲೈ ೧೪ರ ಮೊದಲೇ ಜರ್ಮನಿಗೆ ಹಿಂದಿರುಗಲಿದ್ದಾರೆ. ಅವರು ಬಾಹ್ಯಾಕಾಶದಿಂದ ಇಳಿದು ಭೂಸ್ಫರ್ಶ ಮಾಡಿದ ನಂತರ ಯುರೋಪಿಯನ್ ಅಸ್ಟ್ರೋನಾಟ್ ಸೆಂಟರ್ ಹಾಗೂ ಜರ್ಮನ್ ಏರೋಸ್ಪೇಸ್ ಸೆಂಟರ್‌ನಲ್ಲಿ ವರದಿ ಮಾಡುತ್ತಾರೆ. ಅಲ್ಲಿ ಅವರಿಗೆ ವೈದ್ಯಕೀಯ ಮೇಲ್ವಿಚಾರಣೆ ಹಾಗೂ ಮರು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಬೀಜ ಮೊಳಕೆ ಪ್ರಯೋಗಕ್ಕೆ ಧಾರವಾಡ ಕೃಷಿ ವಿವಿ ನೇತೃತ್ವ
ಅಂತರಿಕ್ಷದಲ್ಲಿ ಬೀಜಗಳ ಮೊಳಕೆ ಪ್ರಯೋಗದ ನೇತೃತ್ವವನ್ನು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಧಾರಾವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸುಧೀರ್ ಸಿದ್ಧಾಪುರ ರೆಡ್ಡಿ ನೇತೃತ್ವ ವಹಿಸಿದ್ದಾರೆ. ಶುಭಾಂಶು ಶುಕ್ಲಾ ಭೂಮಿಗೆ ಹಿಂದಿರುಗಿದ ಬಳಿಕ ಬೀಜಗಳ ತಳಿ ಶಾಸ್ತ್ರ, ಸೂಕ್ಷ್ಮ ಜೀವಿಯ ಪರಿಸರ ವ್ಯವಸ್ಥೆ ಹಾಗೂ ಪೌಷ್ಠಿಕಾಂಶದ ಬದಲಾವಣೆಗಳನ್ನು ಪರೀಕ್ಷಿಸಲು ಅವುಗಳನ್ನು ಹಲವಾರು ತಲೆಮಾರುಗಳವರೆಗೆ ಬೆಳೆಸಲಾಗುತ್ತದೆ ಎಂದು ಆಕ್ಸಿಯಮ್ ಸ್ಪೇಸ್ ಹೇಳಿಕೆ ತಿಳಿಸಿದೆ. ಬಾಹ್ಯಾಕಾಶ ಕಾರ್ಯಾಚರಣೆ ನಂತರ ಆರು ತಲೆಮಾರುಗಳಲ್ಲಿ ಆರು ಪ್ರಬೇಧಗಳನ್ನು ಬೆಳೆಸಲಾಗುತ್ತದೆ.
ಇದೇ ವೇಳೆ ಅಂತರಿಕ್ಷದಲ್ಲಿರುವ ಸೂಕ್ಷ್ಮ ಪಾಚಿಗಳನ್ನು ಸಂಗ್ರಹಿಸುವ ಮೂಲಕ ಮತ್ತೊಂದು ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಇವುಗಳನ್ನು ಆಹಾರದಲ್ಲಿ ಬಳಸಲು ಸಾಧ್ಯವೇ? ಆಮ್ಲಜನಕ ಉತ್ಪಾದನೆಗೆ ಉಪಯುಕ್ತವೇ? ಹಾಗೂ ಜೈವಿಕ ಇಂಧನ ಉತ್ಪಾದಿಸುವ ಸಾಮರ್ಥ್ಯ ಇದೆಯೋ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಯಲಿದೆ.