ಕೋಲಾರ: “ಸ್ವಾಮೀಜಿಗಳೇ ಮುಖ್ಯಮಂತ್ರಿಗಳನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ” ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಖ್ಯಮಂತ್ರಿ ಆಗಬೇಕಾದರೆ ಶಾಸಕರ ಮೇಜಾರಿಟಿ ಇರಬೇಕು. ಚುನಾವಣೆಯಲ್ಲಿ ಬಹುಮತ ಬಂದ ಮೇಲೆ ಆ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಗಳ ನಿರ್ಧಾರ ಮಾಡುತ್ತದೆ. ಮಠಾಧೀಶರುಗಳ ಮಾತು ಕೇಳಿಕೊಂಡು ಸಿಎಂ ಆಯ್ಕೆ ಮಾಡುವುದಕ್ಕೆ ಆಗುವುದಿಲ್ಲ” ಎಂದು ವಿವರಿಸಿದರು.
“ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾವ ಸಂದರ್ಭದಲ್ಲಿ ಯಾರು ಸಿಎಂ ಆಗಬೇಕು ಎಂಬುದು ಸಹ ಹೈಕಮಾಂಡ್ ನಿರ್ಧಾರಕ್ಕೆ ಒಳಪಟ್ಟಿದ್ದು” ಎಂದ ಅವರು, “ಅಂತಹ ಸಂದರ್ಭ ಬಂದರೆ ಪಕ್ಷದ ವರಿಷ್ಠರು ಶಾಸಕರ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ 138 ಶಾಸಕರು ಡಿಸಿಎಂ ಮತ್ತು ಸಿಎಂ ಪರವಾಗಿದ್ದೇವೆ. ಎಲ್ಲರಿಗೂ ಮೊದಲು ಎಂಎಲ್‌ಎ ಆಗಬೇಕು, ಸಚಿವರಾಗಬೇಕು, ನಂತರ ಸಿಎಂ, ಪಿಎಂ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆಸೆ ಇರಬೇಕು, ಆದರೆ ದುರಾಸೆ ಅಲ್ಲ” ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ “ಅನಿವಾರ್ಯ ಸಂದರ್ಭದಲ್ಲಿ ಎರಡರೆಡು ಹುದ್ದೆಗಳನ್ನು ನಿಭಾಯಿಸಿದ ಉದಾಹರಣೆ ಇದೆ. ಹೈಕಮಾಂಡಿಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸದ್ಯಕ್ಕಂತೂ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವಿಲ್ಲ” ಎಂದು ಹೇಳಿದರು.
ಸುರ್ಜೇವಾಲಾ ಸೂಪರ್ ಸಿ.ಎಂ ಎಂಬ ಜೆಡಿಎಸ್ ಟೀಕೆಗೆ ಉತ್ತರಿಸಿದ ದರ್ಶನಾಪುರ, “ಕುಮಾರಸ್ವಾಮಿ ಇದ್ದಾಗ ಯಾರು ಸೂಪರ್ ಸಿಎಂ ಆಗಿದ್ದರು ಎಂಬುದಕ್ಕೆ ಅವರು ಮೊದಲು ಉತ್ತರ ಕೊಡಲಿ, ನಾನು ಕೂಡ ಅಲ್ಲಿಂದಲೇ ಬಂದವನು” ಎಂದು ಟಾಂಗ್ ನೀಡಿದರು.