MBBSನಲ್ಲಿ ಅತ್ಯುತ್ತಮ ಫಲಿತಾಂಶ ತೋರಿದ ರಾಯಚೂರ ರಿಮ್ಸ್ ಸಂಸ್ಥೆಯ ವಿದ್ಯಾರ್ಥಿಗಳು

0
49

ಖಾಸಗಿ ಕಾಲೇಜುಗಳತ್ತ ಹೊರಳುತ್ತಿರುವ ದಿನಮಾನಗಳಲ್ಲಿ, ರಿಮ್ಸ್ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವಂತೆ ವಿದ್ಯಾರ್ಥಿಗಳ ಸಾಧನೆ

ರಾಯಚೂರು: ರಾಯಚೂರಿನ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಂ.ಬಿ.ಬಿ.ಎಸ್ ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಡಿಸೆಂಬರ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.

ನಾಲ್ವರಿಗೆ ಡಿಸ್ಟಿಂಕ್ಷನ್: ರಾಯಚೂರಿನ ರಿಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿ 2023-24ನೇ ಸಾಲಿನ ವೈದ್ಯಕೀಯ ಪ್ರಥಮ ವರ್ಷದ ಪರೀಕ್ಷೆ ಬರೆದ ಎಲ್ಲ 150 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಗಿಟ್ಟಿಸಿದ್ದಾರೆ. ಈ ಪೈಕಿ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 80 ವಿದ್ಯಾರ್ಥಿಗಳು ಪ್ರಥಮ ದರ್ಜೆ, 57 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಸೇರಿದಂತೆ ಇತರೆ ವಿಭಾಗದಲ್ಲಿ ತೇರ್ಗಡೆಯಾಗಿದ್ದಾರೆ.

ಮೊದಲ ವರ್ಷದ ಟಾಪರ್‌ಗಳು: ಮೊದಲ ವರ್ಷದ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಅಭಿಜ್ಞಾರಾವ್ ವಿ ಶೇ.79.78, ಸುಪ್ರಿಯಾ ಶೇ.78.67, ವರ್ಷ ಜಿ ಶೇ.77.78 ಮತ್ತು ಶ್ರುತಿ ಶೇ.77.56 ಅಂಕಗಳನ್ನು ಪಡೆದು ಮೊದಲ ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಒಟ್ಟು 150 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ. ಈ ಪೈಕಿ 18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 107 ವಿದ್ಯಾರ್ಥಿಗಳು ಪ್ರಥಮ ದರ್ಜೆ, 57 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಎರಡನೇ ವರ್ಷದ ಟಾಪರ್‌ಗಳು: ಎರಡನೇ ವರ್ಷದ ಪರೀಕ್ಷೆಯಲ್ಲಿ ಪಾರ್ವತಿ ಪಾಟೀಲ್ ಶೇ.81, ಲಕ್ಷಿಕಾಂತ ಶೇ.80, ಹರ್ಷಿತಾ ಜಿ.ಎ. ಶೇ.80, ರಾಜಶೇಖರ್ ಶೇ.80, ಬುಶ್ರಾ ಮೆಹಕ್ ಶೇ.79 ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ವೈದ್ಯಶಾಸ್ತ್ರ ವಿಭಾಗದಲ್ಲಿ ಡಾ.ಮೇರಿ ಪ್ರಿಯಾಗೆ ಡಿಸ್ಟಿಂಕ್ಷನ್: ವೈದ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 4 ವಿದ್ಯಾರ್ಥಿಗಳಲ್ಲಿ ಡಾ.ಮೇರಿ ಪ್ರಿಯಾ ಶೇ.77ರಷ್ಟು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾಳೆ.
ಮೂವರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಸ್ತ್ರ ಚಿಕಿತ್ಸಾ ಶಾಸ್ತ್ರ ವಿಭಾಗದಲ್ಲಿ ಡಾ.ಐಶ್ವರ್ಯ ಪ್ರಥಮ: ಶಸ್ತ್ರಚಿಕಿತ್ಸಾ ಶಾಸ್ತ್ರ ವಿಭಾಗದಲ್ಲಿ ಒಟ್ಟು ನಾಲ್ವರು ವಿದ್ಯಾರ್ಥಿಗಳಲ್ಲಿ ಡಾ.ಐಶ್ವರ್ಯ ಕುಲಕರ್ಣಿ ಅವರು ಪ್ರಥಮ ಸ್ಥಾನ ಪಡೆದಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಇಬ್ಬರು ಹಾಗೂ ನೇತ್ರ ಚಿಕಿತ್ಸಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಿವಿ ಮೂಗು ಗಂಟಲು ವಿಭಾಗದಲ್ಲಿ ಒಬ್ಬರು, ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದಲ್ಲಿ ಒಬ್ಬರು, ಮಿಣಿಜೀವಶಾಸ್ತ್ರ ವಿಭಾಗದಲ್ಲಿ ಒಬ್ಬರು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಅಭಿನಂದನೆ: ರಿಮ್ಸ್ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ನಿರ್ದೇಶಕರಾದ ಡಾ.ರಮೇಶ್ ಬಿ.ಹೆಚ್., ಪ್ರಾಂಶುಪಾಲರಾದ ಡಾ.ಬಸವರಾಜ್ ಎಂ.ಪಾಟೀಲ್, ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ್, ಆರ್ಥಿಕ ಸಲಹೆಗಾರರಾದ ಹನುಮೇಶ ನಾಯಕ, ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ್ ಕೆ., ನೋಡಲ್ ಅಧಿಕಾರಿಯಾದ ಡಾ.ಅರವಿಂದ ಕುಮಾರ ಬಿ. ಸಂಗಾವಿ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ಕಲ್ಯಾಣ ಕರ್ನಟಕಕ್ಕೆ ಹೆಮ್ಮೆಯ ಸಂಗತಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳೆಂದರೆ ನಾಗರೀಕರು ಗುಣಮಟ್ಟದ ವಿಷಯದ ಬಗ್ಗೆ ಅನುಮಾನಪಡುತ್ತಾ ಸರ್ಕಾರಿ ಸೇವೆಯ ಬಗ್ಗೆ ಮೂಗು ಮುರಿದು ಖಾಸಗಿ ಕಾಲೇಜುಗಳತ್ತ ಹೊರಳುತ್ತಿರುವ ದಿನಮಾನಗಳಲ್ಲಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿನ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಾಗಿರುವ ರಿಮ್ಸ್ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವಂತೆ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ರಾಜಿಯಿಲ್ಲದೇ ನಿರ್ವಹಣೆ ಮಾಡಿರುವುದನ್ನು ಇಲ್ಲಿನ ವಿದ್ಯಾರ್ಥಿಗಳು ಮಾಡಿರುವ ಸಾಧನೆಯು ಸಾಕ್ಷೀಕರಿಸುವಂತೆ ಮಾಡಿದೆ ಎಂದು ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಂತಷ ವ್ಯಕ್ತಪಡಿಸಿದ್ದಾರೆ.

Previous articleಬಳ್ಳಾರಿಯಲ್ಲಿ ಮತ್ತೋರ್ವ ಬಾಣಂತಿ ಸಾವು
Next articleಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ