ಬೆಂಗಳೂರು: ಗೆಜಿಡೆಟ್ ಪ್ರೊಬೆಷನರಿ ಹುದ್ದೆ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ [KPSC] ಪರೀಕ್ಷಾರ್ಥಿಗಳಿಗೆ ಅನ್ಯಾಯ, ಏಕಪಕ್ಷೀಯ ಧೋರಣೆ, ಆಯೋಗದ ಕೆಲ ಪಟ್ಟಭದ್ರರ ಒತ್ತಡಕ್ಕೆ ಮಣಿದು ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಅನೇಕ ಪರೀಕ್ಷಾರ್ಥಿಗಳು, ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುವುದರಿಂದ ಈ ಹಿಂದೆ ನಾನು ಹೇಳಿದಂತೆ ಕಷ್ಟಪಟ್ಟು, ಉದ್ಯೋಗದಲ್ಲಿದ್ದುಕೊಂಡು ಓದಿದ ಅಭ್ಯರ್ಥಿಗಳಿಗೆ ಅನ್ಯಾಯಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು 2017-18 ನೇ ಬ್ಯಾಚಿನ ಅಭ್ಯರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಕೇವಲು ಒಂದು ತಿಂಗಳು ಮಾತ್ರ ಕೊಟ್ಟಿರುವುದು ತರವಲ್ಲ. ಈ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಪಠ್ಯಕ್ರಮ [syllabus] ವ್ಯಾಪ್ತಿ ಹೆಚ್ಚಾಗಿದ್ದು, ಪಠ್ಯಕ್ರಮದಲ್ಲಿರುವ ವಿಷಯಗಳ ಬಗ್ಗೆ ಸುಧೀರ್ಘ ಅಧ್ಯಯನ ಮಾಡಿದರಷ್ಟೇ ಯಶಸ್ಸು ಸಿಗುತ್ತದೆ. ಪಠ್ಯಕ್ರಮದ ಮನನ, ಪುನರ್ ಮನನ ಮಾಡುವದಕ್ಕೆ ಕಾಲಾವಕಾಶ ಬೇಕಾಗಿರುವುದು ಸಹಜ.
ಪ್ರಶ್ನೆ ಪತ್ರಿಕೆ ಈಗಾಗಲೇ ಮುದ್ರಣ ಆಗಿದೆ, ಪರೀಕ್ಷೆಯನ್ನು ಬೇಗ ಮುಗಿಸಬೇಕು ಎಂಬ ತಾಂತ್ರಿಕ ಕಾರಣಗಳನ್ನೊಡ್ಡುವುದು ತಪ್ಪು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಲೋಕಸೇವಾ ಆಯೋಗದ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಮೇಲಾಗಿ, ವಾರದ ದಿನ ಪರೀಕ್ಷೆ ನಿಗದಿ ಮಾಡುವುದರಿಂದ ಐ.ಟಿ., ಶಿಕ್ಷಕರು, ಸರ್ಕಾರಿ ನೌಕರರು, ಇತರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ರಜೆ ಸಿಗುವುದು ಕಷ್ಟವಾಗುತ್ತದೆ. ಭಾನುವಾರದಂದೇ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವುದು ರೂಡಿಯಲ್ಲಿದೆ. ಇದೆ ವ್ಯವಸ್ಥೆಯನ್ನು ಮುಂದುವರೆಸುವುದನ್ನು ಬಿಟ್ಟು ಸರ್ಕಾರ ಹಾಗೂ ಲೋಕಸೇವಾ ಆಯೋಗ ಈ ಪರೀಕ್ಷೆಯನ್ನು ವಾರದ ದಿನ ನಿಗದಿ ಮಾಡಿರುವುದು ಖಂಡನೀಯ ಹಾಗೂ ತರ್ಕರಹಿತವಾಗಿದೆ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇದೆ ಚಿಂತೆಯಲ್ಲಿದ್ದಾರೆ. ಸರ್ಕಾರ ತನ್ನ ನಿಲುವನ್ನು ಬದಲಿಸಿ ಸದರಿ ಪರೀಕ್ಷೆಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಗೆ ಬದಲಿಸಿ ಆದೇಶ ಹೊರಡಿಸಲಿ ಎಂದಿದ್ದಾರೆ.





















