ಅಕ್ಷರಗಳಲ್ಲಿ ಭೈರಪ್ಪ ಅಜರಾಮರ: ಪಂಚಭೂತಗಳಲ್ಲಿ ಲೀನ

0
50

ಅಕ್ಷರ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಇಹಲೋಕ ತ್ಯಜಿಸಿದ್ದು, ಅಗಲಿಕೆ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟ ತಂದಿದೆ. ಭೈರಪ್ಪರ ನೆನಪು ಕಾದಂಬರಿಗಳ ಪುಟಗಳಲ್ಲಿ, ಪಾತ್ರಗಳ ರೂಪದಲ್ಲಿ ಮತ್ತು ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಇಂದು (ಸೆ.26) ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹೊಯ್ಸಳ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ನಡೆದ ವಿಧಿವಿಧಾನಗಳಲ್ಲಿ ಕುಟುಂಬ ಸದಸ್ಯರು, ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ಪೊಲೀಸ್ ಇಲಾಖೆಯ ವತಿಯಿಂದ ಶಿವಾನಂದ ನೇತೃತ್ವದ ಹತ್ತು ಜನರ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಹ್ಲಾದ್ ಜೋಷಿ ಮತ್ತು ಡಾ. ಎಚ್.ಸಿ. ಮಹದೇವಪ್ಪ ಭೈರಪ್ಪರ ಮಕ್ಕಳಾದ ರವಿಶಂಕರ್ ಮತ್ತು ಉದಯ್ ಶಂಕರ್‌ಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಭೈರಪ್ಪರ ಹುಟ್ಟೂರಾದ ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಿಂದ ಮೂರು ಬಸ್‌ಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಗ್ರಾಮಸ್ಥರು ಆಗಮಿಸಿ ತಮ್ಮ ನೆಚ್ಚಿನ ಸಾಹಿತಿಗೆ ಅಂತಿಮ ವಿದಾಯ ಹೇಳಿದರು.

ಭೈರಪ್ಪರ ನಿಧನಕ್ಕೆ ನಾಡಿನ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಓದುಗರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಭೈರಪ್ಪರ ಕೃತಿಗಳು ಸದಾ ಅಮರವಾಗಿ ಉಳಿಯಲಿವೆ. ಭೈರಪ್ಪರ ಸಾಹಿತ್ಯ ಕೃಷಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರಲಿಲ್ಲ. ಅನೇಕ ಕಾದಂಬರಿಗಳು ಬೇರೆ ಭಾಷೆಗಳಿಗೆ ಅನುವಾದಗೊಂಡು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದವು. ವಾಸ್ತವಕ್ಕೆ ಹತ್ತಿರವಾದ ನಿರೂಪಣೆ, ತೀಕ್ಷ್ಣ ವಿಶ್ಲೇಷಣೆ ಮತ್ತು ಪಾತ್ರಗಳ ಆಳವಾದ ಚಿತ್ರಣ  ಬರಹಗಳ ವಿಶೇಷತೆಯಾಗಿತ್ತು. ಅಕ್ಷರಗಳ ಮೂಲಕ ಜೀವನದ ಸಂಕೀರ್ಣತೆಗಳನ್ನು ಬಿಡಿಸಿಡುತ್ತಿದ್ದ ಭೈರಪ್ಪ ದೈಹಿಕವಾಗಿ ನಮ್ಮಿಂದ ದೂರವಾದರೂ, ಅವರ ವಿಚಾರಗಳು ಮತ್ತು ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಜೀವಂತವಾಗಿರುತ್ತವೆ.

Previous articleಮಂಡ್ಯ: ಶ್ರೀರಂಗಪಟ್ಟಣ ದಸರಾಗೆ ಅದ್ದೂರಿ ಚಾಲನೆ
Next articleಭಾರತ – ಆಸ್ಟ್ರೇಲಿಯಾ 2ನೇ ಅನಧಿಕೃತ ಟೆಸ್ಟ್: ರಾಹುಲ್ ಶತಕ – ಗೆಲುವಿನತ್ತ ಭಾರತ

LEAVE A REPLY

Please enter your comment!
Please enter your name here