ನ್ಯಾ.ನಾಗಮೋಹನ್‌ದಾಸ್ ಆಯೋಗ ಅವಮಾನಕರ ರೀತಿಯಲ್ಲಿ ಬಂದ್!

0
47

ಕೆ.ವಿ.ಪರಮೇಶ್

ಹಿಂದಿನ ಬಿಜೆಪಿ ಸರ್ಕಾರದ ಹಲವು ಹಗರಣಗಳ ತನಿಖೆಗೆ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವನ್ನು ಕರ್ನಾಟಕ ಸರ್ಕಾರ ರಚನೆ ಮಾಡಿತ್ತು. ಆದರೆ ಏಕಾಏಕಿ ಆಯೋಗಕ್ಕೆ ನೀಡಿದ್ದ ವಾಹನ, ಸಿಬ್ಬಂದಿ ಹಿಂಪಡೆಯಲಾಗಿದೆ. ಆಯೋಗದ ಬಳಿ 1 ಟ್ರಕ್‌ನಷ್ಟು ದಾಖಲೆಗಳಿದ್ದು, ಅದನ್ನು ಕಾಪಾಡುವುದು ಯಾರು?.

ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಕಾರ್ಯವನ್ನು ಸರ್ಕಾರ ದಿಢೀರನೆ ಸ್ಥಗಿತಗೊಳಿಸಿದೆ. ಕೆಲವು ಆಡಳಿತಾತ್ಮಕ ಕಾರ್ಯಗಳಿಗಾಗಿ ಸೆ.30ರ ತನಕ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಮಾಡಿದ್ದ ಮನವಿಗೂ ಸರ್ಕಾರ ಕ್ಯಾರೇ ಎಂದಿಲ್ಲ. ಸಹಜವಾಗಿಯೇ ಇದು ನ್ಯಾ.ದಾಸ್ ಅವರಿಗೂ ಬೇಸರ ಮೂಡಿಸಿದ್ದು, ಮಹತ್ವದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ್ದ ಆಯೋಗವನ್ನು ಬಳಸಿ ಬಿಸಾಡಿದಂತಾಗಿದೆ.

ಪ್ರಮುಖ ಹಗರಣಗಳ ತನಿಖೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2023) 40% ಕಮಿಷನ್ ಆರೋಪ, ನಾರಾಯಣಪುರ ಜಲಾಶಯ ಕಾಮಗಾರಿ ಅಕ್ರಮ ಹಾಗೂ ಬಿಬಿಎಂಪಿ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ತನಿಖೆಗಾಗಿ ರಚಿಸಲಾಗಿದ್ದ ನ್ಯಾ.ಹೆಚ್.ಎನ್.ನಾಗಮೋಹನ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಕಾರ್ಯವನ್ನು ದಿಢೀರ್ ಅಂತ್ಯಗೊಳಿಸಲಾಗಿದೆ. ಆಯೋಗಕ್ಕೆ ನೀಡಲಾಗಿದ್ದ ವಾಹನ ಮತ್ತು ಸಿಬ್ಬಂದಿಯನ್ನು ಸರ್ಕಾರವು ಏಕಾಏಕಿ ಹಿಂಪಡೆದ ಹಿನ್ನೆಲೆಯಲ್ಲಿ, ಅಧ್ಯಕ್ಷರ ಸೂಚನೆ ಮೇರೆಗೆ ಆಯೋಗದ ಕಾರ್ಯಚಟುವಟಿಕೆಗಳನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ.

ದಿಢೀರಾಗಿ ಸವಲತ್ತು ಹಿಂದಕ್ಕೆ: ದಾಸ್ ಆಯೋಗ ಆಗಸ್ಟ್ 30ರಂದು ಸರ್ಕಾರಕ್ಕೆ 8,900 ಪುಟಗಳ ಬೃಹತ್ ತನಿಖಾ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ, 761 ಕಾಮಗಾರಿಗಳನ್ನು ಪರಿಶೀಲಿಸಿ, ಹಲವು ನ್ಯೂನತೆಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು. ಬಳಿಕ ಕೆಲವು ಆಡಳಿತಾತ್ಮಕ ಕಾರ್ಯಗಳು ಮತ್ತು ದಾಖಲೆಗಳ ನಿರ್ವಹಣೆಗಾಗಿ ಸೆಪ್ಟೆಂಬರ್ 30ರವರೆಗೆ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಆಯೋಗವು ಸರ್ಕಾರಕ್ಕೆ ಮನವಿ ಮಾಡಿತ್ತು. ಇದು ಪರಿಶೀಲನೆಯಲ್ಲಿರುವಾಗಲೇ ಸವಲತ್ತು ವಾಪಸ್ ಪಡೆಯಲಾಗಿದೆ.

ಏಕಾಏಕಿ ಕ್ರಮ ಏಕೆ?: ಅಧಿಕಾರಾವಧಿ ವಿಸ್ತರಣೆಯ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರುವ ಮುನ್ನವೇ, ಆಯೋಗದ ಗಮನಕ್ಕೆ ತಾರದೆ, ಅಧ್ಯಕ್ಷರಿಗೆ ಒದಗಿಸಲಾಗಿದ್ದ ವಾಹನ, ಚಾಲಕ ಮತ್ತಿತರ ಸಿಬ್ಬಂದಿಯನ್ನು ಹಿಂಪಡೆಯಲಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಆಯೋಗದ ಉಳಿದ ಕಾರ್ಯಗಳನ್ನು ಮುಂದುವರಿಸಲು ಅಸಾಧ್ಯವಾದ ಕಾರಣ, ನ್ಯಾ. ದಾಸ್ ಅವರ ಸೂಚನೆಯಂತೆ ಆಯೋಗದ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದು ಆಯೋಗ ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆಗೂ ಸಾಕ್ಷಿಯಾಗಿದೆ. ಹಲವರಿಗೆ ಜಾಮೀನುರಹಿತ ವಾರಂಟ್ ಜಾರಿ ಮಾಡಿ ಸುಮಾರು ಒಂದು ಟ್ರಕ್‌ ನಷ್ಟು ದಾಖಲಾತಿಗಳ ಸಂಗ್ರಹವಾಗಿದ್ದು, ಇದರ ಸುರಕ್ಷತೆ ಬಗ್ಗೆ ಆತಂಕ ಕಾಡುತ್ತಿದೆ. ಸರ್ಕಾರದ ಈ ನಡೆ ಹಲವು ಚರ್ಚೆಗಳಿಗೂ ಕಾರಣವಾಗಿದೆ.

ಈ ಕುರಿತು ಮಾತನಾಡಿರುವ ನ್ಯಾ.ನಾಗಮೋಹನ್‌ದಾಸ್, “ಯಾವುದೇ ಪೂರ್ವ ಮಾಹಿತಿ ನೀಡದೆ ನನ್ನ ಚಾಲಕ, ಕಚೇರಿ ಕಾರ್ಯದರ್ಶಿ, ಮ್ಯಾನೇಜರ್‌ಗೆ ದೂರವಾಣಿ ಕರೆ ಮಾಡಿ ಆಯೋಗದ ಅವಧಿ ಮುಗಿದಿದೆ. ಮಾತೃ ಇಲಾಖೆಗೆ ರಿಪೋರ್ಟ್ ಮಾಡಿಕೊಳ್ಳಿ ಎನ್ನುವುದು ಎಷ್ಟು ಸರಿ. ಜವಾಬ್ದಾರಿಯುತ ಆಯೋಗದ ಜೊತೆಗಿನ ಇಂತಹ ವರ್ತನೆ ಸರಿಯಲ್ಲ. ಹಾಗಾಗಿಯೇ ಕಚೇರಿ ಕ್ಲೋಸ್ ಮಾಡಿ ಬೀಗ ಹಾಕಿ ಎಂದಿದ್ದೇನೆ” ಎಂದು ಹೇಳಿದ್ದಾರೆ.

Previous articleಸಂಗೀತಜ್ಞ ಪಂ. ಶ್ರೀನಿವಾಸ ಜೋಶಿ ಇನ್ನಿಲ್ಲ
Next articleಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಅನ್ನದಾತರ ಆಶಾಕಿರಣ

LEAVE A REPLY

Please enter your comment!
Please enter your name here