IAS Mahantesh: ಕಿರಾಣಿ ಅಂಗಡಿಯಿಂದ ಐಎಎಸ್ ಗದ್ದುಗೆಗೆ; ಕಣ್ಣೀರು ತರಿಸುತ್ತೆ ಬೀಳಗಿ ಬದುಕು!

0
36

IAS Mahantesh: ದೈವದ ಆಟವೇ ಬಲು ವಿಚಿತ್ರ. ಕಷ್ಟಪಟ್ಟು ಮೇಲೆ ಬಂದು, ಇನ್ನೇನು ಬದುಕು ಸುಂದರವಾಗಿದೆ ಎನ್ನುವಷ್ಟರಲ್ಲೇ ವಿಧಿ ಅಟ್ಟಹಾಸಗೈದಿದೆ. ಹೌದು, ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಲಬುರಗಿಯ ಜೇವರ್ಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ.

ಆದರೆ, ಸಾವಿನ ಆಚೆಯೂ ಅವರು ನಡೆದು ಬಂದ ಹಾದಿ ಇಂದಿನ ಯುವಪೀಳಿಗೆಗೆ ದೊಡ್ಡ ಪಾಠವಾಗಿದೆ. ಬಡತನದ ಬೇಗೆಯಲ್ಲಿ ಬೆಂದು, ಬಂಗಾರವಾದ ಅವರ ಜೀವನದ ಕಥೆ ರೋಚಕ ಹಾಗೂ ಅಷ್ಟೇ ಭಾವುಕ.

ಹೊತ್ತಿನ ಊಟಕ್ಕೂ ಪರದಾಟದ ಬಾಲ್ಯ: ಮಹಾಂತೇಶ್ ಬೀಳಗಿ ಬಾಲ್ಯ ಹೂವಿನ ಹಾಸಿಗೆಯಾಗಿರಲಿಲ್ಲ. ಅದು ಮುಳ್ಳಿನ ಹಾದಿಯಾಗಿತ್ತು. ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ, ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ.  ತಾಯಿ ಊರೂರು ಸುತ್ತಿ ಹಣ್ಣು ಮಾರಿ ತಂದ ಹಣದಲ್ಲೇ ಕುಟುಂಬದ ನಿರ್ವಹಣೆ ನಡೆಯಬೇಕಿತ್ತು.

ಬಾಲಕ ಮಹಾಂತೇಶ್ ಸುಮ್ಮನೆ ಕೂರಲಿಲ್ಲ, ಹೊಟ್ಟೆಪಾಡಿಗಾಗಿ ಹಾಗೂ ಶಾಲಾ ಖರ್ಚಿಗಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಸ್ವಂತವಾಗಿ ಪುಸ್ತಕ ಕೊಂಡುಕೊಳ್ಳಲು ಹಣವಿಲ್ಲದಾಗ, ಸ್ನೇಹಿತರ ಬಳಿ ಎರವಲು ಪಡೆದು, ಗ್ರಂಥಾಲಯಗಳಲ್ಲಿ ಗಂಟೆಗಟ್ಟಲೆ ಕುಳಿತು ಓದುತ್ತಿದ್ದರು. ಈ ಕಠಿಣ ಪರಿಶ್ರಮವೇ ಅವರನ್ನು ಮುಂದೆ ದೊಡ್ಡ ವ್ಯಕ್ತಿಯನ್ನಾಗಿ ರೂಪಿಸಿತು.

ಚಿನ್ನದ ಪದಕದ ಸರದಾರ: ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದ ಮಹಾಂತೇಶ್, 10ನೇ ತರಗತಿಯ ನಂತರ ಓದಿನಲ್ಲಿ ಕಂಡುಕೊಂಡ ಏಕಾಗ್ರತೆ ಅದ್ಭುತ. ಪಿಯುಸಿಯಲ್ಲಿ ಬಸವೇಶ್ವರ ಕಾಲೇಜಿಗೆ ಟಾಪರ್ ಆದರು. ಅಷ್ಟೇ ಅಲ್ಲ, ಸಿ.ಎಸ್. ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿಯಲ್ಲಿ ‘ಚಿನ್ನದ ಪದಕ’ ಪಡೆದರು. ಇಂಗ್ಲಿಷ್ ಭಾಷೆಯ ಮೇಲೆ ಅವರು ಹೊಂದಿದ್ದ ಹಿಡಿತ ಅಸಾಮಾನ್ಯವಾಗಿತ್ತು.

ಧಾರವಾಡದ ಜನಪ್ರಿಯ ‘ಇಂಗ್ಲಿಷ್ ಮೇಷ್ಟ್ರು’: ಐಎಎಸ್ ಅಧಿಕಾರಿಯಾಗುವ ಮುನ್ನ ಮಹಾಂತೇಶ್ ಬೀಳಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಗುರುಗಳಾಗಿದ್ದರು. ಧಾರವಾಡದಲ್ಲಿ ಅವರು ನಡೆಸುತ್ತಿದ್ದ ಸ್ಪೋಕನ್ ಇಂಗ್ಲಿಷ್ (Spoken English) ತರಗತಿಗಳು ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿವೆ. ಕೆಎಎಸ್ ಪಾಸಾಗಿ, ನಂತರ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರೂ, ಅವರು ತಮ್ಮೊಳಗಿನ ಶಿಕ್ಷಕನನ್ನು ಸಾಯಲು ಬಿಡಲಿಲ್ಲ.

ಸ್ನೇಹಜೀವಿ ಮಹಾಂತೇಶ್: ಸಾಮಾನ್ಯವಾಗಿ ಉನ್ನತ ಹುದ್ದೆ ಸಿಕ್ಕಾಗ ಹಳೆಯದು ಮರೆತುಹೋಗುತ್ತದೆ. ಆದರೆ ಬೀಳಗಿ ಇದಕ್ಕೆ ಅಪವಾದವಾಗಿದ್ದರು. ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದರೂ, ತಮ್ಮ ಬಾಲ್ಯದ ಸ್ನೇಹಿತರನ್ನು ಕಂಡರೆ ಓಡಿ ಹೋಗಿ ಅಪ್ಪಿಕೊಳ್ಳುತ್ತಿದ್ದರು.

ರಾಮದುರ್ಗಕ್ಕೆ ಬಂದಾಗಲೆಲ್ಲ ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ಚಹಾ ಕುಡಿಯುತ್ತಾ, ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಅಧಿಕಾರದ ದರ್ಪ ಅವರಲ್ಲಿ ಎಳ್ಳಷ್ಟೂ ಇರಲಿಲ್ಲ. ‘ನನ್ನ ಊರು, ನನ್ನ ಜನ’ ಎಂಬ ಪ್ರೀತಿ ಅವರಲ್ಲಿ ಕೊನೆಯವರೆಗೂ ಶಾಶ್ವತವಾಗಿತ್ತು.

ವಿಧಿ ಇಂದು ಅವರನ್ನು ನಮ್ಮಿಂದ ದೂರೀಕರಿಸಿರಬಹುದು. ಆದರೆ, ಹಣ್ಣು ಮಾರುವ ತಾಯಿಯ ಮಗನಾಗಿ, ಕಿರಾಣಿ ಅಂಗಡಿ ಹುಡುಗನಾಗಿ, ಜನಪ್ರಿಯ ಶಿಕ್ಷಕನಾಗಿ ಮತ್ತು ದಕ್ಷ ಅಧಿಕಾರಿಯಾಗಿ ಅವರು ಬೆಳೆದ ರೀತಿ ಎಂದೆಂದಿಗೂ ಅಜರಾಮರ.

Previous articleದೇಶಾದ್ಯಂತ ಸಂಭ್ರಮದ ಸಂವಿಧಾನ ದಿನ ಆಚರಣೆ
Next articleತಾರಾತಿಗಡಿ: ಬಿಗ್ ಬಾಸ್ ಹೆಂಗೋ ನಾವ್ ಹಂಗೆ

LEAVE A REPLY

Please enter your comment!
Please enter your name here